* ಲಂಕಾ ಎದುರು ಮೊಹಾಲಿ ಟೆಸ್ಟ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ ಟೀಂ ಇಂಡಿಯಾ* ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 574 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದೆ.* ಎರಡನೇ ದಿನದಾಟದಂತ್ಯದ 4 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿದ ಲಂಕಾ
ಮೊಹಾಲಿ(ಮಾ.05): ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಬಾರಿಸಿದ ಅಜೇಯ ಶತಕ(175) ಹಾಗೂ ರವಿಚಂದ್ರನ್ ಅಶ್ವಿನ್ (Ravichandran Ashwin) ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ (Team India) 8 ವಿಕೆಟ್ ಕಳೆದುಕೊಂಡು 574 ರನ್ ಬಾರಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇನ್ನು ಮೊದಲ ಇನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ತಂಡವು (Sri Lanka Cricket) ಎರಡನೇ ದಿನದಾಟದಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 108 ರನ್ ಬಾರಿಸಿದ್ದು, ಫಾಲೋ ಆನ್ ಭೀತಿಗೆ ಸಿಲುಕಿದೆ. ಇನ್ನೂ ಲಂಕಾ ತಂಡವು 466 ರನ್‌ಗಳ ಹಿನ್ನೆಡೆಯಲ್ಲಿದೆ.
ಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಐ.ಎಸ್. ಬಿಂದ್ರಾ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಬೃಹತ್ ಮೊತ್ತ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡ ಕೂಡಾ ಉತ್ತಮ ಆರಂಭ ಪಡೆಯಲು ಪ್ರಯತ್ನಿಸಿತು. ಆದರೆ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾರತಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಡುವಲ್ಲಿ ಯಶಸ್ವಿಯಾದರು. ಮೊದಲ ವಿಕೆಟ್‌ಗೆ ನಾಯಕ ದೀಮುತ್ ಕರುಣರತ್ನೆ ಹಾಗೂ ಲಹಿರು ತಿರುಮನ್ನೆ 48 ರನ್‌ಗಳ ಜತೆಯಾಟವಾಡಿದರು. ಸಾಕಷ್ಟು ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸುತ್ತಿದ್ದ ಲಹಿರು ತಿರುಮನ್ನೆ 60 ಎಸೆತಗಳನ್ನು ಎದುರಿಸಿ 1 ಬೌಂಡರಿ ಸಹಿತ 17 ರನ್ ಬಾರಿಸಿ ಅಶ್ವಿನ್ ಎಲ್‌ಬಿ ಬಲೆಗೆ ಬಿದ್ದರು.
ಇನ್ನು ಮತ್ತೊಂದು ತುದಿಯಲ್ಲಿ ನಾಯಕ ದೀಮುತ್ ಕರುಣರತ್ನೆ 71 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 28 ರನ್ ಬಾರಿಸಿ ರವೀಂದ್ರ ಜಡೇಜಾ ಬಲೆಗೆ ಬಿದ್ದರು. ಅನುಭವಿ ಆಲ್ರೌಂಡರ್ ಏಂಜಲೋ ಮ್ಯಾಥ್ಯೂಸ್ ಬ್ಯಾಟಿಂಗ್ ಕೇವಲ 22 ರನ್‌ಗಳಿಗೆ ಸೀಮಿತವಾಯಿತು. ಮ್ಯಾಥ್ಯೂಸ್ 22 ರನ್ ಬಾರಿಸಿ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ಆಲ್ರೌಂಡರ್ ಧನಂಜಯ ಡಿ ಸಿಲ್ವಾ ಕೇವಲ ಒಂದು ರನ್ ಗಳಿಸಿ ಅಶ್ವಿನ್ ಬಲೆಗೆ ಬಿದ್ದರು. ಇನ್ನು ಪತುಮ್ ನಿಸ್ಸಾಂಕ ಅಜೇಯ 22 ರನ್ ಹಾಗೂ ಚರಿತ್ ಅಸಲಂಕಾ ಒಂದು ರನ್ ಬಾರಿಸಿ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
Virar Kohli 100th Test: ಕಿಂಗ್ ಕೊಹ್ಲಿಗೆ Guard Of Honor ನೀಡಿದ ಟೀಂ ಇಂಡಿಯಾ ಆಟಗಾರರು
ಇದಕ್ಕೂ ಮೊದಲು 6 ವಿಕೆಟ್ ಕಳೆದುಕೊಂಡು 357 ರನ್‌ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತ ತಂಡಕ್ಕೆ ಏಳನೇ ವಿಕೆಟ್‌ಗೆ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ 130 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸಮಯೋಚಿತ ಬ್ಯಾಟಿಂಗ್ ನಡೆಸಿದ ರವಿಚಂದ್ರನ್ ಅಶ್ವಿನ್ 82 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 61 ರನ್ ಬಾರಿಸಿ ಸುರಂಗ ಲಕ್ಮಲ್‌ಗೆ ವಿಕೆಟ್ ಒಪ್ಪಿಸಿದರು.
ಲಂಕಾ ಬೌಲರ್‌ಗಳನ್ನು ಎರಡನೇ ದಿನದಾಟದಲ್ಲಿ ಇನ್ನಿಲ್ಲದಂತೆ ಕಾಡಿದ ಜಡೇಜಾ ಟೆಸ್ಟ್ ವೃತ್ತಿಜೀವನದ ಗರಿಷ್ಠ ವೈಯುಕ್ತಿಕ ಸ್ಕೋರ್ ಬಾರಿಸಿದರು. ಒಟ್ಟು 228 ಎಸೆತಗಳನ್ನು ಬಾರಿಸಿದ ಜಡೇಜಾ 17 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 175 ರನ್ ಬಾರಿಸಿದರು. ಏಳನೇ ಕ್ರಮಾಂಕದಲ್ಲಿ ಭಾರತ ಪರ ಗರಿಷ್ಠ ರನ್ ಬಾರಿಸಿದ ದಾಖಲೆ ಇದೀಗ ಜಡೇಜಾ ಪಾಲಾಗಿದೆ. ಈ ಮೊದಲು ಕಪಿಲ್ ದೇವ್ 7ನೇ ಕ್ರಮಾಂಕದಲ್ಲಿ 163 ರನ್ ಬಾರಿಸಿದ್ದರು.
ಸಂಕ್ಷಿಪ್ತ ಸ್ಕೋರ್
ಭಾರತ: 574/8 ಡಿಕ್ಲೇರ್ (ಮೊದಲ ಇನಿಂಗ್ಸ್)
ರವೀಂದ್ರ ಜಡೇಜಾ: 175*
ರಿಷಭ್ ಪಂತ್: 96
ಸುರಂಗ ಲಕ್ಮಲ್: 90-2
ಶ್ರೀಲಂಕಾ: 108/4
ದೀಮುತ್ ಕರುಣರತ್ನೆ: 28
ರವಿಚಂದ್ರನ್ ಅಶ್ವಿನ್: 21/2
(* ಎರಡನೇ ದಿನದಾಟದಂತ್ಯದ ವೇಳೆಗೆ)
