IND vs SL ಆತಂಕದ ನಡುವೆ ರಾಹುಲ್ ಹೋರಾಟ, 2ನೇ ಏಕದಿನ ಗೆದ್ದು ಸರಣಿ ಕೈವಶ ಮಾಡಿದ ಭಾರತ!
ಟಾರ್ಗೆಟ್ ಸುಲಭ, ಆದರೆ ಚೇಸಿಂಗ್ ಸುಲಭವಾಗಿರಲಿಲ್ಲ. ದಿಢೀರ್ ವಿಕೆಟ್ ಪತನ, ರನ್ ಜೊತೆಗೆ ವಿಕೆಟ್ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ನಡುವೆ ಕೆಎಲ್ ರಾಹುಲ್ ಕೆಚ್ಚೆದೆಯ ಹೋರಾಟ ನೀಡಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
ಕೋಲ್ಕತಾ(ಜ.12): ಶ್ರೀಲಂಕಾ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 216 ರನ್ ಟಾರ್ಗೆಟ್ ಸಿಕ್ಕಿತ್ತು. ಈ ಸುಲಭ ಮೊತ್ತ ಭಾರತಕ್ಕೆ ಆರಂಭದಲ್ಲೇ ಆತಂಕ ತಂದಿತ್ತು. ಕಾರಣ ಚೇಸಿಂಗ್ ವೇಳೆ ಟೀಂ ಇಂಡಿಯಾ ಪ್ರಮುಖ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಆದರೆ ಕೆಎಲ್ ರಾಹುಲ್ ಕೆಚ್ಚೆದೆಯ ಹೋರಾಟ ನೀಡುವ ಮೂಲಕ ಭಾರತವನ್ನು ಗೆಲುವಿನ ದಡ ಸೇರಿಸಿದರು. 43.2 ಓವರ್‌ಗಳಲ್ಲಿ ಭಾರತ ಟಾರ್ಗೆಟ್ ಚೇಸ್ ಮಾಡಿತು. 2ನೇ ಏಕದಿನ ಪಂದ್ಯದಲ್ಲಿ ಭಾರತ ವಿಕೆಟ್ 4 ಗೆಲುವು ದಾಖಲಿಸಿತು.
ಶ್ರೀಲಂಕಾ ತಂಡವನ್ನು 215 ರನ್‌ಗೆ ನಿಯಂತ್ರಿಸಿದ ಟೀಂ ಇಂಡಿಯಾ ಸುಲಭವಾಗಿ ಟಾರ್ಗೆಟ್ ಚೇಸ್ ಮಾಡುವ ಲೆಕ್ಕಾಚಾರದಲ್ಲಿತ್ತು. ಆದರೆ ಕೋಲ್ಕತಾ ವಿಕೆಟ್ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಕಾರಣ 33 ರನ್‌ಗಳಿಸುವಷ್ಟರಲ್ಲೇ ಭಾರತ ಮೊದಲ ವಿಕೆಟ್ ಕಳೆದುಕೊಂಡಿತು. ನಾಯಕ ರೋಹಿತ್ ಶರ್ಮಾ 17 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಶುಬಮನ್ ಗಿಲ್ ವಿಕೆಟ್ ಕೂಡ ಪತನಗೊಂಡಿತು. ಗಿಲ್ 21 ರನ್ ಸಿಡಿಸಿ ನಿರ್ಗಮಿಸಿದರು.
41 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡರೂ ಭಾರತ ಆತಂಕ ಎದುರಿಸಲಿಲ್ಲ. ಕಾರಣ ಟಾರ್ಗೆಟ್ ಸುಲಭವಾಗಿತ್ತು. ಇತ್ತ ಈ ಟಾರ್ಗೆಟ್ ಚೇಸ್ ಮಾಡಬಲ್ಲ ಬ್ಯಾಟ್ಸ್‌ಮನ್ ಭಾರತ ತಂಡದಲ್ಲಿದ್ದಾರೆ ಅನ್ನೋ ನಂಬಿಕೆ. ಆದರೆ ವಿರಾಟ್ ಕೊಹ್ಲಿ ಕೇವಲ 4 ರನ್ ಸಿಡಿಸಿ ಔಟಾಗುತ್ತಿದ್ದಂತೆ ಭಾರತದ ಚಿತ್ರಣ ಬದಲಾಯಿತು.
ಶ್ರೇಯಸ್ ಅಯ್ಯರ್ ಕೆಲ ಹೊತ್ತು ಹೋರಾಟ ನಡೆಸಿದರು. ಆದರೆ ಶ್ರೇಯಸ್ ಅಯ್ಯರ್ 28 ರನ್ ಸಿಡಿಸಿ ಔಟಾದರು. 86 ರನ್‌ಗೆ 4 ನೇ ವಿಕೆಟ್ ಪತನ ಟೀಂ ಇಂಡಿಯಾ ಆತಂಕ ಹೆಚ್ಚಿಸಿತು. ಕುಸಿದ ತಂಡಕ್ಕೆ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಹೋರಾಟ ಲಂಕಾಗೆ ತಲೆನೋವು ತಂದಿತು. ಒಂದೇ ಸಮನೆ ವಿಕೆಟ್ ಪತನದಿಂದ ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಗೆ ರಾಹುಲ್ ಹಾಗೂ ಪಾಂಡ್ಯ ಜೊತೆಯಾಟ ಹೊಸ ಹುರುಪು ನೀಡಿತು.
ಹಾರ್ದಿಕ್ ಪಾಂಡ್ಯ 36 ರನ್ ಸಿಡಿಸಿ ಔಟಾದರು. ಈ ವೇಳೆ ಟೀಂ ಇಂಡಿಯಾದಲ್ಲಿ ಆತಂಕದ ನೆರಿಗೆ ಮೂಡಿತು. ಆದರೆ ಅಕ್ಸರ್ ಪಟೇಲ್ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಕೆಎಲ್ ರಾಹುಲ್ ಟೀಂ ಇಂಡಿಯಾ ಆತಂಕ ದೂರ ಮಾಡಿದರು. ದಿಟ್ಟ ಹೋರಾಟ ನೀಡಿದ ಅಕ್ಸರ್ ಪಟೇಲ್ 21 ರನ್ ಕಾಣಿಕೆ ನೀಡಿದರು. ಅಕ್ಸರ್ ಪಟೇಲ್ ವಿಕೆಟ್ ಪತನದ ಬಳಿಕ ಕುಲ್ದೀಪ್ ಯಾದವ್ ಜೊತೆ ರಾಹುಲ್ ಇನ್ನಿಂಗ್ಸ್ ಮುಂದುವರಿಸಿದರು.
ಕೆಎಲ್ ರಾಹುಲ್ ತಾವೇ ಸ್ಟ್ರೈಕ್ ಹೆಚ್ಚು ಬಳಸಿಕೊಂಡು ಭಾರತವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ಮಾಡಿದರು. ಇತ್ತ ಕುಲ್ದೀಪ ಯಾದವ್ ಕೂಡ ಉತ್ತಮ ಸಾಥ್ ನೀಡಿದರು. ಕುಲ್ದೀಪ್ ಯಾದವ್ ಬೌಂಡರಿ ಸಿಡಿಸುವ ಮೂಲಕ ಭಾರತ 4 ವಿಕೆಟ್ ಗೆಲುವು ಕಂಡಿತು. ಕೆಎಲ್ ರಾಹುಲ್ ಅಜೇಯ 64 ರನ್ ಸಿಡಿಸಿದರು. ಕುಲ್ದೀಪ್ ಯಾದವ್ ಅಜೇಯ 10 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 43. 2ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.
2ನೇ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್ ಗೆಲುವು ಕಂಡಿತು. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಏಕದಿನ ಸರಣಿ ಗೆದ್ದುಕೊಂಡಿತು.