* ಭಾರತ-ಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ* ಮೊಹಾಲಿಯಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯವು ಕೊಹ್ಲಿ ಪಾಲಿನ 100ನೇ ಟೆಸ್ಟ್ ಪಂದ್ಯ* ಕೊಹ್ಲಿಯ ನೂರನೇ ಟೆಸ್ಟ್ ಪಂದ್ಯಕ್ಕೆ ಶುಭ ಹಾರೈಸಿದ ಕ್ರಿಕೆಟ್ ಜಗತ್ತು

ಮೊಹಾಲಿ(ಮಾ.03): ಭಾರತ ಹಾಗೂ ಶ್ರೀಲಂಕಾ (India vs Sri Lanka) ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಮಾರ್ಚ್‌ 04ರಿಂದ ಮೊಹಾಲಿಯಲ್ಲಿರುವ ಪಂಜಾಬ್‌ ಕ್ರಿಕೆಟ್ ಸಂಸ್ಥೆಯ ಐ.ಎಸ್. ಬಿಂದ್ರಾ ಮೈದಾನದಲ್ಲಿ ಆರಂಭವಾಗಲಿದೆ. ಈ ಟೆಸ್ಟ್ ಪಂದ್ಯವು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಪಾಲಿಗೆ ಅತ್ಯಂತ ಸ್ಮರಣೀಯ ಪಂದ್ಯವಾಗಿರಲಿದೆ. ಇದು ವಿರಾಟ್ ಕೊಹ್ಲಿ ಆಡಲಿರುವ ನೂರನೇ ಟೆಸ್ಟ್ ಪಂದ್ಯವಾಗಿರಲಿದ್ದು, ಟೀಂ ಇಂಡಿಯಾದ (Team India) ಹಲವು ದಿಗ್ಗಜ ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿಯವರ ನೂರನೇ ಟೆಸ್ಟ್ ಪಂದ್ಯಕ್ಕೆ ಶುಭ ಹಾರೈಸಿದ್ದಾರೆ.

ವಿರಾಟ್ ಕೊಹ್ಲಿ ಲಂಕಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆಯೇ ಭಾರತ ಪರ ನೂರು ಟೆಸ್ಟ್ (100 Test Match) ಪಂದ್ಯಗಳನ್ನಾಡಿದ 12ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಮೊದಲು ಸಚಿನ್ ತೆಂಡುಲ್ಕರ್(200), ರಾಹುಲ್ ದ್ರಾವಿಡ್(163), ವಿವಿಎಸ್ ಲಕ್ಷ್ಮಣ್(134), ಅನಿಲ್ ಕುಂಬ್ಳೆ(132), ಕಪಿಲ್ ದೇವ್(131), ಸುನಿಲ್ ಗವಾಸ್ಕರ್(125), ದಿಲೀಪ್‌ ವೆಂಗ್‌ಸರ್ಕಾರ್(116), ಸೌರವ್ ಗಂಗೂಲಿ(113), ಇಶಾಂತ್ ಶರ್ಮಾ(105), ಹರ್ಭಜನ್ ಸಿಂಗ್(103) ಹಾಗೂ ವಿರೇಂದ್ರ ಸೆಹ್ವಾಗ್ 103 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಇದುವರೆಗೆ 99 ಪಂದ್ಯಗಳನ್ನಾಡಿ 7 ದ್ವಿಶತಕ ಸಹಿತ 27 ಶತಕ ಹಾಗೂ 28 ಅರ್ಧಶತಕ ಬಾರಿಸಿದ್ದಾರೆ. ಇದುವರೆಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 50.4ರ ಬ್ಯಾಟಿಂಗ್ ಸರಾಸರಿಯಲ್ಲಿ 7,962 ರನ್‌ ಬಾರಿಸಿದ್ದಾರೆ. ನೂರನೇ ಟೆಸ್ಟ್ ಪಂದ್ಯದಲ್ಲಿ ಕೇವಲ 38 ರನ್ ಬಾರಿಸಿದರೆ ಕೊಹ್ಲಿ 8 ಸಾವಿರ ರನ್ ಬಾರಿಸಿದವರ ಕ್ಲಬ್ ಸೇರಲಿದ್ದಾರೆ.

ವಿರಾಟ್ ಕೊಹ್ಲಿ ಇದೀಗ ನೂರನೇ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದ್ದು, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ (Sachin Tendulkar), ವಿಡಿಯೋ ಸಂದೇಶದ ಮೂಲಕ ಕೊಹ್ಲಿಗೆ ಶುಭಹಾರೈಸಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ಪೋಸ್ಟ್ ಮಾಡಿದೆ. ನಿಮ್ಮ ಬಗ್ಗೆ ಮೊದಲು ಕೇಳಿದ್ದು ನನಗೆ ಇನ್ನೂ ನೆನಪಿದೆ. 2007ರಲ್ಲಿ ನಾವಾಗ ಆಸ್ಟ್ರೇಲಿಯಾದಲ್ಲಿದ್ದೆವು. ನೀವು ಆಗ ಮಲೇಷ್ಯಾದಲ್ಲಿ ಅಂಡರ್ 19 ವಿಶ್ವಕಪ್ ಆಡುತ್ತಿದ್ದಿರಿ. ಆ ಸಂದರ್ಭದಲ್ಲಿ ಕೆಲವು ಆಟಗಾರರು ನಿಮ್ಮ ಬಗ್ಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾತನಾಡುತ್ತಿದ್ದಿದ್ದನ್ನು ನಾನು ಕೇಳಿಸಿಕೊಂಡಿದ್ದೆ. ಈತ ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಾನೆ ಎಂದು ಅವರು ಮಾತನಾಡುತ್ತಿದ್ದರು. ಇದಾದ ಬಳಿಕ ನಾವಿಬ್ಬರು ಕೆಲಕಾಲ ಒಟ್ಟಿಗೆ ಕ್ರಿಕೆಟ್ ಆಡಿದ್ದೇವೆ. ವಿಷಯವನ್ನು ಬೇಗ ಗ್ರಹಿಸುವುದು ಬಲ ಎಂದು ನಾನು ಭಾವಿಸಿದ್ದೇನೆ. ಫಿಟ್ನೆಸ್ ವಿಚಾರದಲ್ಲಿ ಹಲವು ಯುವಕರ ಪಾಲಿಗೆ ನೀವು ರೋಲ್ ಮಾಡೆಲ್ ಆಗಿದ್ದೀರ. ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ನಿಮಗೆ ಅಭಿನಂದನೆಗಳು ಎಂದು ಸಚಿನ್ ತೆಂಡುಲ್ಕರ್ ಶುಭ ಹಾರೈಸಿದ್ದಾರೆ.

View post on Instagram

ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕೋಚ್ ರಾಹುಲ್ ದ್ರಾವಿಡ್ (Rahul Dravid), ಭಾರತ ಪರ 100 ಟೆಸ್ಟ್ ಪಂದ್ಯವನ್ನಾಡುತ್ತಿರುವುದು ಅದ್ಭುತ ಸಾಧನೆ. ಈ ಸಾಧನೆ ಮಾಡುತ್ತಿರುವ ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತಿದೆ ಎಂದು 'ದ ವಾಲ್' ಖ್ಯಾತಿಯ ದ್ರಾವಿಡ್ ಹೇಳಿದ್ದಾರೆ. ಇನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಕೂಡಾ, ವಿರಾಟ್ ಕೊಹ್ಲಿ ಪಾಲಿನ ಮಹತ್ವದ ಪಂದ್ಯಕ್ಕೆ ಶುಭ ಹಾರೈಸಿದ್ದಾರೆ. ವಿರಾಟ್ ಅವರದ್ದು ಒಂದು ಅದ್ಭುತ ಕ್ರಿಕೆಟ್ ಪಯಣ. 10-11 ವರ್ಷಗಳ ಹಿಂದೆ ಆರಂಭಿಸಿದ್ದ ಪಯಣ ಇಂದು ಮತ್ತೊಂದು ಹಂತ ತಲುಪಿದೆ. ಭಾರತ ಪರ ಇನ್ನಷ್ಟು ಪಂದ್ಯವನ್ನಾಡುವಂತಾಗಲಿ. ನಿಮ್ಮ ನೂರನೇ ಟೆಸ್ಟ್ ಪಂದ್ಯಕ್ಕೆ ಶುಭ ಹಾರೈಕೆಗಳು ಎಂದು ಬಿಸಿಸಿಐ ಹಾಗೂ ಟೀಂ ಇಂಡಿಯಾ ಮಾಜಿ ನಾಯಕನಾಗಿ ನಿಮಗೆ ಶುಭಹಾರೈಸುತ್ತಿದ್ದೇನೆಂದು ದಾದಾ ಹೇಳಿದ್ದಾರೆ.

View post on Instagram