Asianet Suvarna News Asianet Suvarna News

Ind vs SA: ಭಾರತದ ಗಾಯದ ಮೇಲೆ ದಕ್ಷಿಣ ಆಫ್ರಿಕಾ ಬರೆ..!

* ದಕ್ಷಿಣ ಆಫ್ರಿಕಾ ವಿರುದ್ದ ಎರಡನೇ ಪಂದ್ಯದಲ್ಲೂ ಸೋಲುಂಡ ಟೀಂ ಇಂಡಿಯಾ

* ಎರಡನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್‌ಗಳ ಅಂತರದ ಸೋಲು

* ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಯ ಕೈವಶ ಮಾಡಿಕೊಂಡ ಭಾರತ

Ind vs SA South Africa thrash India by 7 Wickets and Clinch the ODI Series kvn
Author
Bengaluru, First Published Jan 22, 2022, 9:03 AM IST

ಪಾರ್ಲ್‌(ಜ.22)‍: ದಕ್ಷಿಣ ಆಫ್ರಿಕಾ ಪ್ರವಾಸ ಭಾರತ ತಂಡಕ್ಕೆ ನೋವಿನ ಮೇಲೆ ನೋವು ಕೊಡುತ್ತಿದೆ. ಟೆಸ್ಟ್‌ ಸರಣಿಯಲ್ಲಿ ಸೋಲು ಅನುಭವಿಸಿ ಇನ್ನೂ ಒಂದು ವಾರವೂ ಆಗಿಲ್ಲ, ಟೀಂ ಇಂಡಿಯಾ ಏಕದಿನ ಸರಣಿಯಲ್ಲೂ ಪರಾಭವಗೊಂಡು ಮುಖಭಂಗಕ್ಕೊಳಗಾಗಿದೆ. ಶುಕ್ರವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ಆತಿಥೇಯ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ, 3 ಪಂದ್ಯಗಳ ಸರಣಿಯನ್ನು 2-0ಯಲಿ ವಶಪಡಿಸಿಕೊಂಡಿದೆ.

ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಭಾರತ ರಿಷಭ್‌ ಪಂತ್‌, ಕೆ.ಎಲ್‌.ರಾಹುಲ್‌, ಶಾರ್ದೂಲ್‌ ಠಾಕೂರ್‌ರ ಆಕರ್ಷಕ ಬ್ಯಾಟಿಂಗ್‌ ನೆರವಿನಿಂದ 50 ಓವರಲ್ಲಿ 6 ವಿಕೆಟ್‌ ನಷ್ಟಕ್ಕೆ 287 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದ.ಆಫ್ರಿಕಾ, ಯಾನೆಮಾನ್‌ ಮಲಾನ್‌ ಹಾಗೂ ಕ್ವಿಂಟನ್‌ ಡಿ ಕಾಕ್‌ ನೀಡಿದ ಅಮೋಘ ಆರಂಭದ ನೆರವಿನಿಂದ ಕೇವಲ 3 ವಿಕೆಟ್‌ ಕಳೆದುಕೊಂಡು ಇನ್ನೂ 11 ಎಸೆತ ಬಾಕಿ ಇರುವಂತೆಯೇ ಗೆದ್ದು ಸಂಭ್ರಮಿಸಿತು. ಮೊದಲ ಪಂದ್ಯದಲ್ಲಿ ಭಾರತಕ್ಕೆ ಬ್ಯಾಟರ್‌ಗಳು ಕೈಕೊಟ್ಟರೆ, 2ನೇ ಪಂದ್ಯದಲ್ಲಿ ಬೌಲರ್‌ಗಳು ವೈಫಲ್ಯ ಕಂಡರು.

ಮಲಾನ್‌ ಹಾಗೂ ಡಿ ಕಾಕ್‌ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 22 ಓವರಲ್ಲಿ 132 ರನ್‌ ಕಲೆಹಾಕಿದರು. ಈ ಜೋಡಿಯನ್ನು ಬೇರೆ ಮಾಡಲು ಭಾರತೀಯ ಬೌಲರ್‌ಗಳು ಹರಸಾಹಸ ಮಾಡಬೇಕಾಯಿತು. 66 ಎಸೆತಗಳಲ್ಲಿ 78 ರನ್‌ ಸಿಡಿಸಿದ ಡಿ ಕಾಕ್‌ ಮೊದಲು ಔಟಾದರು. 2ನೇ ವಿಕೆಟ್‌ಗೆ ಮತ್ತೆ 80 ರನ್‌ ಜೊತೆಯಾಟ ಮೂಡಿಬಂತು. ಮಲಾನ್‌ ಹಾಗೂ ನಾಯಕ ತೆಂಬ ಬವುಮಾ ನಡುವಿನ ಜೊತೆಯಾಟ ದ.ಆಫ್ರಿಕಾದ ಗೆಲುವನ್ನು ಖಚಿತಪಡಿಸಿತು. 108 ಎಸೆತಗಳಲ್ಲಿ 91 ರನ್‌ಗೆ ಔಟಾಗಿ ಮಲಾನ್‌ ಶತಕದಿಂದ ವಂಚಿತರಾದರು. ಬವುಮಾ 35 ರನ್‌ ಗಳಿಸಿದರೆ, ವ್ಯಾನ್‌ ಡೆರ್‌ ಡುಸ್ಸೆನ್‌ ಹಾಗೂ ಏಡನ್‌ ಮಾರ್ಕ್ರಮ್‌ ಔಟಾಗದೆ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು.

Ind vs SA: ರಾಹುಲ್, ಪಂತ್ ಫಿಫ್ಟಿ, ಹರಿಣಗಳಿಗೆ ಸವಾಲಿನ ಗುರಿ ನೀಡಿದ ಟೀಂ ಇಂಡಿಯಾ

ಭಾರತಕ್ಕೆ ‘ಡಬಲ್‌’ ಟ್ರಬಲ್‌: ಭಾರತ ಮೊದಲ ವಿಕೆಟ್‌ಗೆ 63 ರನ್‌ ಜೊತೆಯಾಟ ಪಡೆದರೂ, ಕೊಹ್ಲಿ ಸೊನ್ನೆಗೆ ಔಟಾಗಿದ್ದರಿಂದ ತಂಡದ ಮೊತ್ತ 64 ರನ್‌ ಆಗುವಷ್ಟರಲ್ಲ 2 ವಿಕೆಟ್‌ ಪತನಗೊಂಡವು. 3ನೇ ವಿಕೆಟ್‌ಗೆ ನಾಯಕ ಕೆ.ಎಲ್‌.ರಾಹುಲ್‌ ಹಾಗೂ ರಿಷಭ್‌ ಪಂತ್‌ 115 ರನ್‌ ಜೊತೆಯಾಡಿದರು. ಭಾರತ ಉತ್ತಮ ಸ್ಥಿತಿಯಲ್ಲಿದ್ದಾಗ ಮತ್ತೆ ಒಂದರ ಹಿಂದೆ ಒಂದು ವಿಕೆಟ್‌ ಪತನಗೊಂಡವು. ಪಂತ್‌ 85 ರನ್‌ಗೆ ಔಟಾದರೆ ರಾಹುಲ್‌ 55 ರನ್‌ಗೆ ವಿಕೆಟ್‌ ಕಳೆದುಕೊಂಡರು. 4 ರನ್‌ ಅಂತರದಲ್ಲಿ ಪಂತ್‌ ಹಾಗೂ ರಾಹುಲ್‌ ಇಬ್ಬರೂ ಔಟಾದರು.

ಶ್ರೇಯಸ್‌ ಅಯ್ಯರ್‌ ಹಾಗೂ ವೆಂಕಟೇಶ್‌ ಅಯ್ಯರ್‌ ನಿರೀಕ್ಷೆ ಉಳಿಸಿಕೊಳ್ಳಳಿಲ್ಲ. ಶಾರ್ದೂಲ್‌ 40, ಅಶ್ವಿನ್‌ 25 ರನ್‌ ಕೊಡುಗೆ ನೀಡಿದ್ದರಿಂದ ಭಾರತ ಉತ್ತಮ ಮೊತ್ತ ಗಳಿಸಿತು.
 

Follow Us:
Download App:
  • android
  • ios