Asianet Suvarna News Asianet Suvarna News

Ind vs SA, 2nd Test: ಶಾರ್ದೂಲ್ ಠಾಕೂರ್ ಬಿರುಗಾಳಿ, ಹರಿಣಗಳ 4 ವಿಕೆಟ್ ಪತನ..!

* ಜೋಹಾನ್ಸ್‌ಬರ್ಗ್‌ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾ ಕಮ್‌ಬ್ಯಾಕ್‌

* ದಕ್ಷಿಣ ಆಫ್ರಿಕಾದ ನಾಲ್ಕು ವಿಕೆಟ್ ಪತನ, ಶಾರ್ದೂಲ್ ಠಾಕೂರ್‌ಗೆ 3 ವಿಕೆಟ್

* ಇನ್ನೂ 100 ರನ್‌ಗಳ ಹಿನ್ನೆಡೆಯಲ್ಲಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ

Ind vs SA Shardul Thakur triple strike lifts India against South Africa in Johannesburg Test kvn
Author
Bengaluru, First Published Jan 4, 2022, 4:05 PM IST

ಜೋಹಾನ್ಸ್‌ಬರ್ಗ್‌(ಜ.04): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ವೇಗಿ ಶಾರ್ದೂಲ್ ಠಾಕೂರ್ (Shardul Thakur) ಮಾರಕ ದಾಳಿಗೆ ಆತಿಥೇಯ ಹರಿಣಗಳ ಪಡೆ ತತ್ತರಿಸಿ ಹೋಗಿದೆ. ಎರಡನೇ ದಿನದಾಟದ ಲಂಚ್‌ ಬ್ರೇಕ್‌ ವೇಳೆಗೆ ದಕ್ಷಿಣ ಆಫ್ರಿಕಾ ತಂಡವು (South Africa Cricket Team) 4 ವಿಕೆಟ್ ಕಳೆದುಕೊಂಡು 102 ರನ್ ಬಾರಿಸಿದ್ದು, ಇನ್ನೂ 100 ರನ್‌ಗಳ ಹಿನ್ನೆಡೆಯಲ್ಲಿದೆ. ಎರಡನೇ ದಿನದಾಟದಲ್ಲಿ ಶಾರ್ದೂಲ್ ಠಾಕೂರ್ 3 ವಿಕೆಟ್ ಕಬಳಿಸಿ ಮಿಂಚಿದ್ದಾರೆ. 

ಇಲ್ಲಿನ ವಾಂಡರರ್ಸ್ ಮೈದಾನದಲ್ಲಿ ಮೊದಲ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 35 ರನ್‌ ಗಳಿಸಿದ್ದ ದಕ್ಷಿಣ ಆಫ್ರಿಕಾ ತಂಡವು ಎರಡನೇ ದಿನದಾಟವನ್ನು ಸಾಕಷ್ಟು ಎಚ್ಚರಿಕೆಯಿಂದಲೇ ಆರಂಭಿಸಿತು. ಎರಡನೇ ವಿಕೆಟ್‌ಗೆ ಡೀನ್ ಎಲ್ಗಾರ್ (Dean Elgar) ಹಾಗೂ ಕೀಗನ್ ಪೀಟರ್‌ಸನ್‌ (Keegan Petersen) ಜೋಡಿ 211 ಎಸೆತಗಳನ್ನು ಎದುರಿಸಿ 74 ರನ್‌ಗಳ ಜತೆಯಾಟ ನಿಭಾಯಿಸಿತು. ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ವೇಗಿ ಶಾರ್ದೂಲ್ ಠಾಕೂರ್ ಯಶಸ್ವಿಯಾದರು. ಡೀನ್ ಎಲ್ಗಾರ್ 120 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 28 ರನ್ ಗಳಿಸಿ ವಿಕೆಟ್ ಕೀಪರ್‌ ರಿಷಭ್‌ ಪಂತ್‌ಗೆ (Rishabh Pant) ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಚೊಚ್ಚಲ ಅರ್ಧಶತಕ ಬಾರಿಸಿ ಗಮನ ಸೆಳೆದ ಪೀಟರ್‌ಸನ್‌: ವೃತ್ತಿಜೀವನದ ನಾಲ್ಕನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕೀಗನ್‌ ಪೀಟರ್‌ಸನ್‌ ಮನಮೋಹಕ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಬಲಿಷ್ಠ ಭಾರತೀಯ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿದ ಪೀಟರ್‌ಸನ್‌, ಟೆಸ್ಟ್ ವೃತ್ತಿಜೀವನದ ಮೊದಲ ಅರ್ಧಶತಕ ಬಾರಿಸಿ ಮಿಂಚಿದರು. ಕೀಗನ್ ಪೀಟರ್‌ಸನ್‌ 118 ಎಸೆತಗಳನ್ನು ಎದುರಿಸಿ 9 ಬೌಂಡರಿ ಸಹಿತ 62 ರನ್‌ಗಳಿಸಿ ಶಾರ್ದೂಲ್‌ ಠಾಕೂರ್‌ಗೆ ಎರಡನೇ ಬಲಿಯಾದರು. 

Ind vs SA: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕುಸಿದ ಟೀಂ ಇಂಡಿಯಾ..!

ಒಂದು ಹಂತದಲ್ಲಿ 88 ರನ್‌ಗಳವರೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಕೇವಲ 14 ರನ್‌ಗಳ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ರಾಸ್ಸಿ ವ್ಯಾನ್‌ ಡರ್‌ ಡುಸೇನ್‌ (van der Dussen) ಕೇವಲ ಒಂದು ರನ್‌ ಗಳಿಸಿ ಶಾರ್ದೂಲ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು. 

ಮೊದಲ ಟೆಸ್ಟ್‌ ಪಂದ್ಯದಲ್ಲಿ ಕೇವಲ 2 ವಿಕೆಟ್ ಕಬಳಿಸಿದ್ದ ಶಾರ್ದೂಲ್‌ ಠಾಕೂರ್, ಇದೀಗ ಎರಡನೇ ಟೆಸ್ಟ್‌ನಲ್ಲಿ ಮಾರಕ ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳನ್ನು ಬಲಿ ಪಡೆದುಕೊಂಡಿದ್ದು ಟೀಂ ಇಂಡಿಯಾ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. 

ಇನ್ನೂ 100 ರನ್‌ಗಳ ಹಿನ್ನೆಡೆಯಲ್ಲಿದೆ ಹರಿಣಗಳ ಪಡೆ: ಭಾರತವನ್ನು ಕೇವಲ 202 ರನ್‌ಗಳಿಗೆ ಆಲೌಟ್ ಮಾಡಿ, ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿದ್ದ ಹರಿಣಗಳ ಪಡೆಗೆ ಶಾರ್ದೂಲ್ ಠಾಕೂರ್ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ವಾಂಡರರ್ಸ್‌ ಪಿಚ್‌ನಲ್ಲಿ ಇನ್ನೂ ಮೊದಲ ಇನಿಂಗ್ಸ್‌ನಲ್ಲಿ 100 ರನ್‌ಗಳ ಹಿನ್ನೆಡೆಯಲ್ಲಿರುವ ಆಫ್ರಿಕಾ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ

ಸಂಕ್ಷಿಪ್ತ ಸ್ಕೋರ್
ಭಾರತ: 202/10
ಕೆ.ಎಲ್. ರಾಹುಲ್: 50
ರವಿಚಂದ್ರನ್ ಅಶ್ವಿನ್‌: 46
ಮಾರ್ಕೊ ಜಾನ್ಸನ್‌: 31/4

ದಕ್ಷಿಣ ಆಫ್ರಿಕಾ: 102/4
ಕೀಗನ್ ಪೀಟರ್‌ಸನ್‌: 62
ಡೀನ್ ಎಲ್ಗಾರ್: 28
ಶಾರ್ದೂಲ್ ಠಾಕೂರ್: 8/3
(* ಎರಡನೇ ದಿನದಾಟದ ಲಂಚ್ ಬ್ರೇಕ್‌ ವೇಳೆಗೆ)

Follow Us:
Download App:
  • android
  • ios