ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ, ವಿರಾಟ್ ಕೊಹ್ಲಿಯವರ ಭರ್ಜರಿ ಶತಕ (135) ಹಾಗೂ ರೋಹಿತ್ ಶರ್ಮಾ (57) ಮತ್ತು ನಾಯಕ ಕೆಎಲ್ ರಾಹುಲ್ (60) ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ 8 ವಿಕೆಟ್‌ಗೆ 349 ರನ್ ಗಳಿಸಿತು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ 350 ರನ್‌ಗಳ ಕಠಿಣ ಗುರಿ ನೀಡಿದೆ.

ರಾಂಚಿ: ವಿರಾಟ್ ಕೊಹ್ಲಿ ಬಾರಿಸಿದ ಆಕರ್ಷಕ ಶತಕ, ರೋಹಿತ್ ಶರ್ಮಾ ಮತ್ತು ನಾಯಕ ಕೆ ಎಲ್ ರಾಹುಲ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 349 ರನ್ ಕಲೆಹಾಕಿದೆ. ಈ ಮೂಲಕ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಕಠಿಣ ಗುರಿ ನೀಡಿದೆ.

ಇಲ್ಲಿನ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಟೀಂ ಇಂಡಿಯಾ 25 ರನ್ ಗಳಿಸುವಷ್ಟರಲ್ಲಿ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. ಜೈಸ್ವಾಲ್ 18 ರನ್ ಗಳಿಸಿ ನಂದ್ರೆ ಬರ್ಗರ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಡೆದದ್ದು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಶೋ.

ರಾಂಚಿಯಲ್ಲಿ ರೋಹಿತ್-ಕೊಹ್ಲಿ ಜುಗಲ್ಬಂದಿ:

ನಾಲ್ಕನೇ ಓವರ್‌ನಲ್ಲೇ ಮೊದಲ ವಿಕೆಟ್ ಕಳೆದುಕೊಂಡ ಭಾರತ ತಂಡಕ್ಕೆ ಮತ್ತೊಮ್ಮೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸಿಡ್ನಿ ಮೈದಾನದಲ್ಲಿ ಆಸ್ಟ್ರೇಲಿಯಾ ಎದುರು ಶತಕದ ಜತೆಯಾಟವಾಡಿದ್ದು ಈ ಜೋಡಿ, ಇದೀಗ ಮತ್ತೊಮ್ಮೆ ಭಾರತೀಯ ಅಭಿಮಾನಿಗಳನ್ನು ರಂಜಿಸಿತು. ಎರಡನೇ ವಿಕೆಟ್‌ಗೆ ಈ ಜೋಡಿ ಕೇವಲ 109 ಎಸೆತಗಳನ್ನು ಎದುರಿಸಿ 136 ರನ್‌ಗಳ ಜತೆಯಾಟವಾಡಿತು. ರೋಹಿತ್ ಶರ್ಮಾ 51 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 57 ರನ್ ಸಿಡಿಸಿ ಮಾರ್ಕೊ ಯಾನ್ಸನ್‌ಗೆ ವಿಕೆಟ್ ಒಪ್ಪಿಸಿದರು

Scroll to load tweet…

ನೆಚ್ಚಿನ ಮೈದಾನದಲ್ಲಿ ಮೂರನೇ ಶತಕ ಸಿಡಿಸಿದ ಕೊಹ್ಲಿ:

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ತಮ್ಮ ನೆಚ್ಚಿನ ಮೈದಾನದಲ್ಲಿ ಐದನೇ ಏಕದಿನ ಪಂದ್ಯವನ್ನಾಡಿ ಮೂರನೇ ಶತಕ ಸಿಡಿಸಿ ಸಂಭ್ರಮಿಸಿದರು. ಕೊಹ್ಲಿ 102 ಎಸೆತಗಳನ್ನು ಎದುರಿಸಿ ಏಕದಿನ ಕ್ರಿಕೆಟ್ ವೃತ್ತಿಜೀವನದ 52ನೇ ಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಕೊಹ್ಲಿ ಕೇವಲ 120 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 135 ರನ್ ಸಿಡಿಸಿ ನಂದ್ರೆ ಬರ್ಗರ್‌ಗೆ ವಿಕೆಟ್ ಒಪ್ಪಿಸಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಋತುರಾಜ್ ಗಾಯಕ್ವಾಡ್‌(8) ಹಾಗೂ ವಾಷಿಂಗ್ಟನ್ ಸುಂದರ್(13) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಇದಾದ ಬಳಿಕ ನಾಯಕ ಕೆ ಎಲ್ ರಾಹುಲ್(60) ಆಕರ್ಷಕ ಅರ್ಧಶತಕ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ(32) ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು.