* ಮತ್ತಷ್ಟು ರೋಚಕ ಘಟ್ಟ ತಲುಪಿದ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌* ಭಾರತ ಕೊನೆಯ ದಿನದಾಟದ ಲಂಚ್‌ ಬ್ರೇಕ್‌ ವೇಳೆಗೆ 98 ರನ್‌ಗಳ ಮುನ್ನಡೆ* ಕ್ರೀಸ್ ಕಾಯ್ದುಕೊಂಡಿರುವ ರಿಷಭ್ ಪಂತ್-ರವೀಂದ್ರ ಜಡೇಜಾ

ಸೌಥಾಂಪ್ಟನ್(ಜೂ.23): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನ ಕೊನೆಯ ದಿನದಾಟ ರೋಚಕ ಘಟ್ಟ ತಲುಪಿದ್ದು, ಮೀಸಲು ದಿನದ ಲಂಚ್ ಬ್ರೇಕ್‌ ವೇಳೆಗೆ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 130 ರನ್‌ ಬಾರಿಸಿದ್ದು, ಒಟ್ಟಾರೆ 98 ರನ್‌ಗಳ ಮುನ್ನಡೆ ಸಾಧಿಸಿದೆ.

ಈಗಲೂ ಸಹಾ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಮೂರೂ ರೀತಿಯ ಫಲಿತಾಂಶ ಹೊರಬೀಳುವ ಸಾಧ್ಯತೆ. ಭಾರತ ಈ ಪಂದ್ಯ ಗೆಲ್ಲಬಹುದು, ಸೋಲಬಹುದು ಅಥವಾ ಡ್ರಾ ಕೂಡಾ ಆಗಬಹುದು. 5 ರನ್‌ ಗಳಿಸಿದ್ದಾಗ ಸಿಕ್ಕ ಜೀವದಾನವನ್ನು ಬಳಸಿಕೊಂಡ ಪಂತ್ ಸದ್ಯ 48 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 28 ರನ್‌ ಬಾರಿಸಿದ್ದು ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ಜಡೇಜಾ 12 ರನ್‌ ಬಾರಿಸಿ ಪಂತ್‌ಗೆ ಉತ್ತಮ ಸಾಥ್ ನೀಡಿದ್ದಾರೆ.

Scroll to load tweet…

ಆರಂಭದಲ್ಲೇ ಭಾರತಕ್ಕೆ ಶಾಕ್‌: ಕೊನೆಯ ದಿನದಾಟದ ಆರಂಭದಲ್ಲೇ ಕೈಲ್ ಜೇಮಿಸನ್ ಮಾರಕ ದಾಳಿ ನಡೆಸುವ ಮೂಲಕ ಭಾರತಕ್ಕೆ ಶಾಕ್ ನೀಡುವಲ್ಲಿ ಯಶಸ್ವಿಯಾದರು. ಇದೇ ಟೆಸ್ಟ್ ಪಂದ್ಯದಲ್ಲಿ ವಿರಾಟ್‌ ಕೊಹ್ಲಿಯನ್ನು ಎರಡನೇ ಬಾರಿಗೆ ಪೆವಿಲಿಯನ್ನಿಗಟ್ಟುವಲ್ಲಿ ಜೇಮಿಸನ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಪೂಜಾರ ಸಹಾ ಜೇಮಿಸನ್‌ಗೆ ಎರಡನೇ ಬಲಿಯಾದರು. ಇನ್ನು 15 ರನ್‌ ಬಾರಿಸಿ ಉತ್ತಮ ಇನಿಂಗ್ಸ್ ಆಡುವ ಭರವಸೆ ಮೂಡಿಸಿದ್ದ ಅಜಿಂಕ್ಯ ರಹಾನೆ ವೇಗಿ ಬೌಲ್ಟ್‌ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.