Asianet Suvarna News Asianet Suvarna News

Ind vs NZ: ಲೇಥಮ್-ವಿಲಿಯಮ್ಸ್‌ ಜತೆಯಾಟಕ್ಕೆ ಶರಣಾದ ಟೀಂ ಇಂಡಿಯಾ..!

ಮೊದಲ ಏಕದಿನ ಪಂದ್ಯ ಗೆದ್ದು ಬೀಗಿದ ನ್ಯೂಜಿಲೆಂಡ್
ಟೀಂ ಇಂಡಿಯಾ ಎದುರು ಆಕರ್ಷಕ ಶತಕ ಚಚ್ಚಿದ ಟಾಮ್ ಲೇಥಮ್
ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ

Ind vs NZ Tom Latham Century Powers New Zealand Thrash India by 7 Wickets kvn
Author
First Published Nov 25, 2022, 2:58 PM IST

ಆಕ್ಲೆಂಡ್‌(ನ.25): ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಲೇಥಮ್ ಬಾರಿಸಿದ ಆಕರ್ಷಕ ಶತಕ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಆಕರ್ಷಕ ಅರ್ಧಶತಕದ  ನೆರವಿನಿಂದ ನ್ಯೂಜಿಲೆಂಡ್ ತಂಡವು ಮೊದಲ ಏಕದಿನ ಪಂದ್ಯದಲ್ಲಿ ಭಾರತ ವಿರುದ್ದ 7 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವು 1-0 ಮುನ್ನಡೆ ಸಾಧಿಸಿದೆ.

ಇಲ್ಲಿನ ಈಡನ್ ಪಾರ್ಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 307 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕಿವೀಸ್ ತಂಡವು 35 ರನ್ ಗಳಿಸುವಷ್ಟರಲ್ಲಿ ಫಿನ್ ಅಲೆನ್ ವಿಕೆಟ್ ಕಳೆದುಕೊಂಡಿತು. ಫಿನ್ ಅಲೆನ್ 22 ರನ್ ಬಾರಿಸಿ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಪಂತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಡೆವೊನ್ ಕಾನ್‌ವೇ 24 ರನ್ ಬಾರಿಸಿ ಪಾದಾರ್ಪಣೆ ಪಂದ್ಯವನ್ನಾಡಿದ ಉಮ್ರಾನ್ ಮಲಿಕ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ಡೇರಲ್ ಮಿಚೆಲ್‌ ಕೂಡಾ 11 ರನ್ ಬಾರಿಸಿ ಉಮ್ರಾನ್‌ ಮಲಿಕ್‌ಗೆ ಎರಡನೇ ಬಲಿಯಾದರು. 

Ind vs NZ ಶಿಖರ್, ಗಿಲ್ ಶ್ರೇಯಸ್ ಆಕರ್ಷಕ ಫಿಫ್ಟಿ; ಭಾರತ ಎದುರು ಪಂದ್ಯ ಗೆಲ್ಲಲು ಕಿವೀಸ್‌ಗೆ ಕಠಿಣ ಗುರಿ..!

ಲೇಥಮ್-ವಿಲಿಯಮ್ಸನ್ ಜುಗಲ್ಬಂದಿ: ಒಂದು ಹಂತದಲ್ಲಿ ನ್ಯೂಜಿಲೆಂಡ್ ತಂಡವು 19.5 ಓವರ್‌ಗಳಲ್ಲಿ 88 ರನ್ ಗಳಿಸುವಷ್ಟರಲ್ಲೇ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಇದಾದ ಬಳಿಕ ನಾಲ್ಕನೇ ವಿಕೆಟ್‌ಗೆ ಜತೆಯಾದ ಕೇನ್ ವಿಲಿಯಮ್ಸನ್ ಹಾಗೂ ಟಾಮ್ ಲೇಥಮ್ ಮುರಿಯದ ದ್ವಿಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಇದಾದ ಬಳಿಕ ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಟಾಮ್ ಲೇಥಮ್ ಸ್ಪೋಟಕ ಬ್ಯಾಟಿಂಗ್ ನಡೆಸಿದರೆ, ನಾಯಕ ಕೇನ್ ವಿಲಿಯಮ್ಸನ್‌ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಟಾಮ್ ಲೇಥಮ್ 104 ಎಸೆತಗಳನ್ನು ಎದುರಿಸಿ 19 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 145 ರನ್ ಬಾರಿಸಿದರೆ, ನಾಯಕ ಕೇನ್ ವಿಲಿಯಮ್ಸನ್‌ 98 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 94 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ಶಿಖರ್ ಧವನ್, ಶುಭ್‌ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 306 ರನ್ ಬಾರಿಸಿತ್ತು.

Follow Us:
Download App:
  • android
  • ios