ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆಸರಣಿ ಕ್ಲೀನ್‌ಸ್ವೀಪ್ ಮಾಡುವ ವಿಶ್ವಾಸದಲ್ಲಿ ಟೀಂ ಇಂಡಿಯಾಈಗಾಗಲೇ ಮೊದಲೆರಡು ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಭಾರತ

ಇಂದೋರ್‌(ಜ.24): ನ್ಯೂಜಿಲೆಂಡ್‌ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಪಡೆದು ಸರಣಿ ವಶಪಡಿಸಿಕೊಂಡಿರುವ ಭಾರತ, ಮಂಗಳವಾರ ಇಲ್ಲಿನ ಹೋಲ್ಕರ್‌ ಕ್ರೀಡಾಂಗಣದಲ್ಲಿ ನಡೆಯಲಿರುವ 3ನೇ ಪಂದ್ಯವನ್ನು ಗೆದ್ದು ಕ್ಲೀನ್‌ ಸ್ವೀಪ್‌ ಸಾಧಿಸುವ ಗುರಿ ಹೊಂದಿದೆ. ಭಾರತ ಗೆದ್ದರೆ ಐಸಿಸಿ ವಿಶ್ವ ಏಕದಿನ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.

ಭಾರತದ ಆರಂಭಿಕರಾದ ಶುಭ್‌ಮನ್‌ ಗಿಲ್‌ ಹಾಗೂ ನಾಯಕ ರೋಹಿತ್‌ ಶರ್ಮಾ ಉತ್ತಮ ಲಯದಲ್ಲಿದ್ದಾರೆ. ತಂಡ ಸರಣಿ ಗೆಲ್ಲುವಲ್ಲಿ ಈ ಇಬ್ಬರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದೇ ವೇಳೆ ಮಧ್ಯಮ ಕ್ರಮಾಂಕದಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ. ಎಡಗೈ ಸ್ಪಿನ್ನರ್‌ ವಿರುದ್ಧ ವಿರಾಟ್‌ ಕೊಹ್ಲಿಯ ವೈಫಲ್ಯ ಮುಂದುವರಿದಿದೆ. ಮಿಚೆಲ್‌ ಸ್ಯಾಂಟ್ನರ್‌ ಎರಡೂ ಪಂದ್ಯಗಳಲ್ಲಿ ಕೊಹ್ಲಿಯನ್ನು ಕಾಡಿದ್ದು, ವಿಶ್ವಕಪ್‌ಗೂ ಮುನ್ನ ವಿರಾಟ್‌ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇನ್ನು ಶ್ರೇಯಸ್‌ ಅಯ್ಯರ್‌ ಅನುಪಸ್ಥಿತಿಯಲ್ಲಿ ಆಡುವ ಅವಕಾಶ ಪಡೆದ ಸೂರ್ಯಕುಮಾರ್‌ ಸಹ ನಿರೀಕ್ಷೆ ಉಳಿಸಿಕೊಂಡಿಲ್ಲ. ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ ಸಹ ದೊಡ್ಡ ಮೊತ್ತ ಗಳಿಸಬೇಕಾದ ಒತ್ತಡದಲ್ಲಿದ್ದಾರೆ.

ಮುಂಬರುವ ಕಿವೀಸ್‌ ವಿರುದ್ಧದ ಟಿ20, ಆಸ್ಪ್ರೇಲಿಯಾ ವಿರುದ್ಧದ ಮಹತ್ವದ ಟೆಸ್ಟ್‌ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಕೆಲ ಆಟಗಾರರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಬಹುದು. ಉಮ್ರಾನ್‌ ಮಲಿಕ್‌ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಕುಲ್ದೀಪ್‌ ಯಾದವ್‌ ಬದಲು ಯಜುವೇಂದ್ರ ಚಹಲ್‌ ಆಡಬಹುದು.

ಮತ್ತೊಂದಡೆ ನ್ಯೂಜಿಲೆಂಡ್‌ ವೈಟ್‌ವಾಶ್‌ ತಪ್ಪಿಸಿಕೊಳ್ಳಲು ಎದುರು ನೋಡುತ್ತಿದೆ. ವಿಲಿಯಮ್ಸನ್‌ ಅನುಪಸ್ಥಿತಿಯಲ್ಲಿ ತಂಡದ ಬ್ಯಾಟಿಂಗ್‌ ಪಡೆ ದುರ್ಬಲವಾಗಿ ತೋರುತ್ತಿದೆ. ಅಗ್ರ 6 ಬ್ಯಾಟರ್‌ಗಳು ಕಳೆದ 30 ಇನ್ನಿಂಗ್ಸ್‌ಗಳಲ್ಲಿ ಕೇವಲ 7 ಬಾರಿಯಷ್ಟೇ 40 ರನ್‌ ದಾಟಿದ್ದಾರೆ. ಮೈಕಲ್‌ ಬ್ರೇಸ್‌ವೆಲ್‌ ಮಾತ್ರ ಗಮನಾರ್ಹ ಪ್ರದರ್ಶನ ತೋರಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್‌, ವಿರಾಟ್ ಕೊಹ್ಲಿ, ಇಶಾನ್‌ ಕಿಶನ್‌, ಸೂರ್ಯಕುಮಾರ್, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್, ಶಾರ್ದೂಲ್‌ ಠಾಕೂರ್, ಕುಲ್ದೀಪ್‌ ಯಾದವ್/ ಯುಜುವೇಂದ್ರ ಚಹಲ್‌, ಮೊಹಮ್ಮದ್ ಶಮಿ/ಉಮ್ರಾನ್‌ ಮಲಿಕ್‌, ಮೊಹಮ್ಮದ್ ಸಿರಾಜ್‌.

ನ್ಯೂಜಿಲೆಂಡ್‌: ಆ್ಯಲೆನ್‌, ಕಾನ್‌ವೇ, ಹೆನ್ರಿ ನಿಕೋಲ್ಸ್‌, ಡೇರಲ್ ಮಿಚೆಲ್‌, ಟಾಮ್‌ ಲೇಥಮ್‌(ನಾಯಕ), ಗ್ಲೆನ್‌ ಫಿಲಿಫ್ಸ್‌, ಬ್ರೇಸ್‌ವೆಲ್‌, ಮಿಚೆಲ್ ಸ್ಯಾಂಟ್ನರ್‌, ಡಗ್‌ ಬ್ರೇಸ್‌ವೆಲ್‌, ಟಿಕ್ನೆರ್‌, ಲಾಕಿ ಫಗ್ರ್ಯೂಸನ್‌.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಪಿಚ್‌ ರಿಪೋರ್ಚ್‌

ಹೋಲ್ಕರ್‌ ಕ್ರೀಡಾಂಗಣದ ಪಿಚ್‌ ಸಮನಾದ ಬೌನ್ಸ್‌ ಹೊಂದಿರಲಿದ್ದು, ಸಣ್ಣ ಬೌಂಡರಿಗಳಿರುವ ಕಾರಣ ಬ್ಯಾಟರ್‌ ಸ್ನೇಹಿಯಾಗಿರಲಿದೆ. ಬ್ಯಾಟರ್‌ಗಳನ್ನು ನಿಯಂತ್ರಿಸಲು ಬೌಲರ್‌ಗಳು ಹೆಚ್ಚಿನ ಪರಿಶ್ರಮ ವಹಿಸಬೇಕಾಬಹುದು.

ಪಂತ್‌ ಚೇತರಿಕೆಗೆ ಪ್ರಾರ್ಥನೆ

ಭಾರತೀಯ ಕ್ರಿಕೆಟಿಗರಾದ ಸೂರ್ಯಕುಮಾರ್‌, ಕುಲ್ದೀಪ್‌, ವಾಷಿಂಗ್ಟನ್‌ ಸುಂದರ್‌ ಹಾಗೂ ಕೆಲ ಸಹಾಯಕ ಸಿಬ್ಬಂದಿ ಸೋಮವಾರ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ರಿಕೆಟಿಗ ರಿಷಭ್‌ ಪಂತ್‌ ಬೇಗ ಚೇತರಿಕೆ ಕಾಣಲಿ ಎಂದು ಪ್ರಾರ್ಥಿಸಿದ್ದಾಗಿ ಸೂರ್ಯಕುಮಾರ್‌ ಹೇಳಿಕೊಂಡಿದ್ದಾರೆ.