Asianet Suvarna News Asianet Suvarna News

India Tour of South Africa: ಭಾರತ ಸರಣಿಗೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡ ಪ್ರಕಟ..!

* ಭಾರತ ವಿರುದ್ದ ಸರಣಿಗೆ ಬಲಿಷ್ಠ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ

* ಹರಿಣಗಳ ಟೆಸ್ಟ್ ತಂಡಕ್ಕೆ ಡೀನ್ ಎಲ್ಗಾರ್ ನಾಯಕ

* ಮೊದಲ ಟೆಸ್ಟ್‌ ಡಿಸೆಂಬರ್ 26ರಿಂದ ಸೆಂಚೂರಿಯನ್‌ನಲ್ಲಿ ಆರಂಭವಾಗಲಿದೆ

Ind vs NZ South Africa name 21 strong squad for India series Dean Elgar lead the Squad kvn
Author
Bengaluru, First Published Dec 8, 2021, 11:14 AM IST

ಜೋಹಾನ್ಸ್‌ಬರ್ಗ್‌(ಡಿ.08): ಡಿಸೆಂಬರ್ 26ರಿಂದ ಆರಂಭವಾಗಲಿರುವ ಭಾರತದ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿಗೆ (Test Cricket Series) ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು (South Africa Cricket Team) ಮಂಗಳವಾರ 21 ಮಂದಿಯ ತಂಡವನ್ನು ಪ್ರಕಟಿಸಿದೆ. ಡೀನ್‌ ಎಲ್ಗರ್‌ (Dean Elgar) ತಂಡವನ್ನು ಮುನ್ನಡೆಸಲಿದ್ದು, ಪ್ರಮುಖ ವೇಗಿಗಳಾದ ಕಗಿಸೊ ರಬಾಡ (Kagiso Rabada) ಹಾಗೂ ಏನ್ರಿಚ್‌ ನೋಕಿಯಾ (Anrich Nortje) ತಂಡಕ್ಕೆ ಮರಳಿದ್ದಾರೆ. 

ವಿಕೆಟ್‌ ಕೀಪರ್‌ ಬ್ಯಾಟರ್‌ ರಯನ್‌ ರಿಕೆಲ್ಟನ್‌ ಹಾಗೂ ವೇಗಿ ಸಿಸಂದ ಮಗಾಲ ಮೊದಲ ಬಾರಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕ್ವಿಂಟನ್ ಡಿ ಕಾಕ್‌ (Quinton de Kock) ಮೊದಲ ಆಯ್ಕೆಯ ವಿಕೆಟ್‌ ಕೀಪರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. 2019ರಲ್ಲಿ ಶ್ರೀಲಂಕಾ ವಿರುದ್ದ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ ಡ್ವಾನ್‌ ಒಲಿವಿಯರ್ ಮತ್ತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೊದಲ ಟೆಸ್ಟ್‌ ಡಿಸೆಂಬರ್ 26ರಿಂದ ಸೆಂಚೂರಿಯನ್‌ನಲ್ಲಿ ಆರಂಭವಾಗಲಿದೆ. ಇದಾದ ಬಳಿಕ ಜೋಹಾನ್ಸ್‌ಬರ್ಗ್‌ ಹಾಗೂ ಕೇಪ್‌ಟೌನ್‌ನಲ್ಲಿ ಇನ್ನುಳಿದ ಎರಡು ಟೆಸ್ಟ್ ಪಂದ್ಯ ನಡೆಯಲಿದೆ.

ಕಳೆದ ಜೂನ್‌ನಲ್ಲಿ ವೆಸ್ಟ್ ಇಂಡೀಸ್‌ ಪ್ರವಾಸದಲ್ಲಿ ಬಹುತೇಕ ಇದೇ ತಂಡ ಯಶಸ್ವಿ ಅಭಿಯಾನ ನಡೆಸಿತ್ತು. 2-0 ಅಂತರದಲ್ಲಿ ವಿಂಡೀಸ್‌ ಎದುರು ಹರಿಣಗಳ ಪಡೆ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿತ್ತು. 

Ind Vs NZ Mumbai Test: ತವರಲ್ಲಿ ಭಾರತಕ್ಕೆ ಸತತ 14ನೇ ಸರಣಿ ಜಯ : ಹಲವು ಹೊಸ ದಾಖಲೆಗಳಿಗೆ ಸಾಕ್ಷಿಯಾದ ಪಂದ್ಯ!

ತಂಡ: ಡೀನ್‌ ಎಲ್ಗರ್‌(ನಾಯಕ), ತೆಂಬಾ ಬವುಮಾ(ಉಪ ನಾಯಕ), ಕ್ವಿಂಟನ್‌ ಡಿ ಕಾಕ್‌, ಕಗಿಸೊ ರಬಾಡ, ಸರೆಲ್‌ ಎವೀರ್‍, ಬ್ಯೂರನ್‌ ಹೆಂಡ್ರಿಕ್ಸ್‌, ಜಾರ್ಜ್ ಲಿಂಡೆ, ಕೇಶವ್‌ ಮಹಾರಾಜ್‌, ಲುಂಗಿ ಎನ್‌ಗಿಡಿ, ಏಡನ್‌ ಮಾರ್ಕ್ರಮ್‌, ವಿಯಾನ್‌ ಮುಲ್ಡೆರ್‌, ಏನ್ರಿಚ್‌ ನೋಕಿಯಾ, ಕೀಗನ್‌ ಪೀಟರ್ಸನ್‌, ರಾಸ್ಸಿ ವ್ಯಾನ್‌ ಡೆರ್‌ ಡುಸ್ಸೆನ್‌, ಕೈಲ್‌ ವೆರೈನ್‌, ಮಾರ್ಕೊ ಜಾನ್ಸೆನ್‌, ಗ್ಲೆಂಟನ್‌ ಸ್ಟರ್ಮನ್‌, ಪ್ರೆನೆಲನ್‌ ಸುಬ್ರಾಯೆನ್‌, ಸಿಸಂಡ ಮಗಾಲ, ರಾರ‍ಯನ್‌ ರಿಕೆಲ್ಟನ್‌ ಮತ್ತು ಡ್ವಾನ್‌ ಒಲಿವಿಯರ್‌.

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿಗೆ ಇಂದು ಭಾರತ ತಂಡ ಪ್ರಕಟ

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡದ (India Cricket Team) ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಬಿಸಿಸಿಐ (BCCI) ಬುಧವಾರ ತಂಡವನ್ನು ಪ್ರಕಟಗೊಳಿಸಲಿದೆ ಎಂದು ತಿಳಿದುಬಂದಿದೆ. ಮಂಗಳವಾರ ಚೇತನ್‌ ಶರ್ಮಾ (Chethan Sharma) ನೇತೃತ್ವದ ಆಯ್ಕೆ ಸಮಿತಿ ಸಭೆಯಲ್ಲಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಹಾಗೂ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಸಹ ಪಾಲ್ಗೊಂಡಿದ್ದರು. 20 ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದ್ದು, ಅಜಿಂಕ್ಯ ರಹಾನೆ (Ajinkya Rahane), ಚೇತೇಶ್ವರ್‌ ಪೂಜಾರ ಹಾಗೂ ಇಶಾಂತ್‌ ಶರ್ಮಾ (Ishnat Sharma) ಮೂವರೂ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ.

ICC Test Rankings: ಅಗ್ರಸ್ಥಾನಕ್ಕೇರಿದ ಭಾರತ : 2ನೇ ಸ್ಥಾನಕ್ಕೆ ಕುಸಿದ ವಿಶ್ವ ಚಾಂಪಿಯನ್‌ ನ್ಯೂಜಿಲೆಂಡ್‌!

ರಹಾನೆಯೇ ತಂಡದ ಉಪನಾಯಕರಾಗಿ ಮುಂದುವರಿಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದೇ ವೇಳೆ ಭಾರತ ‘ಎ’ ತಂಡದೊಂದಿಗೆ ದ.ಆಫ್ರಿಕಾ ಪ್ರವಾಸಕ್ಕೆ ತೆರಳಿರುವ ಹನುಮ ವಿಹಾರಿ ಸಹ ತಂಡದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಏಕದಿನ ಸರಣಿಗೆ ತಂಡವನ್ನು ಮುಂದಿನ ಒಂದೆರಡು ವಾರಗಳಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

 

Follow Us:
Download App:
  • android
  • ios