Asianet Suvarna News Asianet Suvarna News

Ind vs NZ Kanpur Test: ಮೊದಲ ಟೆಸ್ಟ್‌ ಗೆಲ್ಲುಲು ಕಿವೀಸ್‌ಗೆ 284 ರನ್‌ಗಳ ಗುರಿ ನೀಡಿದ ಟೀಂ ಇಂಡಿಯಾ

* ಕಾನ್ಪುರ ಟೆಸ್ಟ್‌ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆಹಾಕಿದ ಟೀಂ ಇಂಡಿಯಾ

* ಎರಡನೇ ಇನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ಅಯ್ಯರ್, ಸಾಹ

* ಕಾನ್ಪುರ ಟೆಸ್ಟ್‌ ಗೆಲ್ಲಲು ನ್ಯೂಜಿಲೆಂಡ್‌ಗೆ 284 ರನ್‌ಗಳ ಕಠಿಣ ಗುರಿ

Ind vs NZ Kanpur Test Shreyas Iyer Wriddhiman Saha Fifty Powers Team India Set 284 runs Target to New Zealand kvn
Author
Bengaluru, First Published Nov 28, 2021, 4:22 PM IST

ಕಾನ್ಪುರ(ನ.28): ಶ್ರೇಯಸ್ ಅಯ್ಯರ್ (Shreyas Iyer) (65), ವೃದ್ದಿಮಾನ್ ಸಾಹ (Wriddhiman Saha) (61) ಬಾರಿಸಿದ ಆಕರ್ಷಕ ಅರ್ಧಶತಕ ಹಾಗೂ ರವಿಚಂದ್ರನ್ ಅಶ್ವಿನ್‌ (Ravichandran Ashwin) (32) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ (Team India) 7 ವಿಕೆಟ್ ಕಳೆದುಕೊಂಡು 234 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದೆ. ಇದರೊಂದಿಗೆ ಕಾನ್ಪುರ ಟೆಸ್ಟ್ (Kanpur Test) ಗೆಲ್ಲಲು ಪ್ರವಾಸಿ ನ್ಯೂಜಿಲೆಂಡ್ ತಂಡಕ್ಕೆ ಭಾರತ 284 ರನ್‌ಗಳ ಕಠಿಣ ಗುರಿ ನೀಡಿದೆ. ಇನ್ನು ಎರಡನೇ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 4 ರನ್‌ ಗಳಿಸಿದೆ. ರವಿಚಂದ್ರನ್ ಅಶ್ವಿನ್ ಆರಂಭಿಕ ಬ್ಯಾಟರ್ ವಿಲ್ ಯಂಗ್ ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಗ್ರೀನ್‌ ಪಾರ್ಕ್‌ ಮೈದಾನದಲ್ಲಿ (Green Park Stadium) ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳ ನಡುವಿನ ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ (Ajinkya Rahane) ನೇತೃತ್ವದ ಟೀಂ ಇಂಡಿಯಾ ಒಂದು ಹಂತದಲ್ಲಿ ಕೇವಲ 51 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಆರನೇ ವಿಕೆಟ್‌ಗೆ ರವಿಚಂದ್ರನ್ ಅಶ್ವಿನ್ ಹಾಗೂ ಶ್ರೇಯಸ್ ಅಯ್ಯರ್ 52 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ರವಿಚಂದ್ರನ್ ಅಶ್ವಿನ್‌ 62 ಎಸೆತಗಳನ್ನು ಎದುರಿಸಿ 32 ರನ್‌ ಬಾರಿಸಿ ಜೇಮಿಸನ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. 

ತಾವಾಡುತ್ತಿರುವ ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲೇ ಶತಕ ಬಾರಿಸಿ ಮಿಂಚಿದ್ದ ಶ್ರೇಯಸ್ ಅಯ್ಯರ್ ಇದೀಗ ಎರಡನೇ ಇನಿಂಗ್ಸ್‌ನಲ್ಲಿ ಸಮಯೋಚಿತ ಅರ್ಧಶತಕ ಬಾರಿಸುವ ಮೂಲಕ ತಂಡದ ಪಾಲಿಗೆ ಆಪತ್ಭಾಂಧವನೆನಿಸಿದರು. 109 ಎಸೆತಗಳನ್ನು ಅರ್ಧಶತಕ ಬಾರಿಸಿದ ಅಯ್ಯರ್, ಚೊಚ್ಚಲ ಪಂದ್ಯದಲ್ಲೇ ಶತಕ ಹಾಗೂ ಅರ್ಧಶತಕ ಬಾರಿಸಿದ ಭಾರತದ ಮೊದಲ ಬ್ಯಾಟರ್ ಎನ್ನುವ ಕೀರ್ತಿಗೆ ಭಾಜನರಾದರು. 

Ind vs NZ Kanpur Test: ಶ್ರೇಯಸ್ ಅಯ್ಯರ್ ದಾಖಲೆಯ ಅರ್ಧಶತಕ, ಟೀಂ ಇಂಡಿಯಾಗೆ 216 ರನ್‌ಗಳ ಮುನ್ನಡೆ

ಅಶ್ವಿನ್ ವಿಕೆಟ್ ಪತನದ ಬಳಿಕ ಶ್ರೇಯಸ್ ಅಯ್ಯರ್ ಕೂಡಿಕೊಂಡ ವಿಕೆಟ್ ಕೀಪರ್‌ ಬ್ಯಾಟರ್‌ ವೃದ್ದಿಮಾನ್ ಸಾಹ 7ನೇ ವಿಕೆಟ್‌ಗೆ 64 ರನ್‌ಗಳ ಜತೆಯಾಟ ನಿಭಾಯಿಸಿದರು. ಶ್ರೇಯಸ್ ಅಯ್ಯರ್ 125 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 65 ರನ್ ಬಾರಿಸಿ ಟಿಮ್‌ ಸೌಥಿಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ನೆಲಕಚ್ಚಿ ಬ್ಯಾಟ್‌ ಬೀಸಿದ ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹ ಅಜೇಯ 61 ರನ್‌ ಬಾರಿಸಿದರು. 

ಇನ್ನು ಎಂಟನೇ ವಿಕೆಟ್‌ಗೆ ಅಕ್ಷರ್ ಪಟೇಲ್ ಹಾಗೂ ವೃದ್ದಿಮಾನ್ ಸಾಹ ಮುರಿಯದ 67 ರನ್‌ಗಳ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಸಾಹ 126 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 61 ರನ್‌ ಬಾರಿಸಿದರೇ, ಅಕ್ಷರ್ ಪಟೇಲ್ 67 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 28 ರನ್‌ ಬಾರಿಸಿ ಅಜೇಯರಾಗುಳಿದರು. ಇದೀಗ ಕಿವೀಸ್ ತಂಡವನ್ನು ಆಲೌಟ್ ಮಾಡುವ ಲೆಕ್ಕಾಚಾರದಲ್ಲಿ ಟೀಂ ಇಂಡಿಯಾ ಕಣಕ್ಕಿಳಿದಿದೆ.

ಸಂಕ್ಷಿಪ್ತ ಸ್ಕೋರ್

ಭಾರತ: 345/10
ಶ್ರೇಯಸ್ ಅಯ್ಯರ್: 105
ಟಿಮ್ ಸೌಥಿ: 69/5

ನ್ಯೂಜಿಲೆಂಡ್: 296/10
ಟಾಮ್ ಲೇಥಮ್: 95
ಅಕ್ಷರ್ ಪಟೇಲ್: 62/5

ಭಾರತ: 234/7 (ಎರಡನೇ ಇನಿಂಗ್ಸ್‌ ಡಿಕ್ಲೇರ್)
ಶ್ರೇಯಸ್ ಅಯ್ಯರ್: 65
ಕೈಲ್ ಜೇಮಿಸನ್: 40/3

ನ್ಯೂಜಿಲೆಂಡ್: 4/1

ಟಾಮ್ ಲೇಥಮ್: 2

ಅಶ್ವಿನ್: 3/1

(* ನಾಲ್ಕನೇ ದಿನದಾಟ ಮುಕ್ತಾಯದ ವೇಳೆಗೆ)

Follow Us:
Download App:
  • android
  • ios