ನ್ಯೂಜಿಲೆಂಡ್ ತಂಡವು ಭಾರತ ವಿರುದ್ಧ 5-0 ಸೋಲಿನೊಂದಿಗೆ ತೀವ್ರ ಮುಖಭಂಗ ಅನುಭವಿಸಿದೆ. ಇದರ ಜತೆಗೆ ಬೇಡದ ದಾಖಲೆಗೂ ಕಿವೀಸ್ ಪಡೆ ಪಾತ್ರವಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

ಮೌಂಟ್‌ ಮಾಂಗನ್ಯುಯಿ(ಫೆ.02): ಭಾರತ ವಿರುದ್ಧ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ತಂಡ 5-0 ಅಂತರದ ಹೀನಾಯ ಸೋಲು ಕಂಡಿದೆ. ಈ ಮೂಲಕ ಕಿವೀಸ್ ಪಡೆ ತವರಿನಲ್ಲೇ ಮುಖಭಂಗ ಅನುಭವಿಸಿದೆ. 

Scroll to load tweet…

ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಟಿ20 ಸರಣಿ ಗೆದ್ದ ದಾಖಲೆ ಮಾಡಿದ್ದ ಟೀಂ ಇಂಡಿಯಾ, 5 ಪಂದ್ಯಗಳಲ್ಲೂ ಗೆಲ್ಲುವ ಮೂಲಕ ಚುಟುಕು ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಇನ್ನು ತವರಿನಲ್ಲೇ ಆಘಾತಕಾರಿ ಸೋಲು ಕಂಡ ಕಿವೀಸ್ ಬೇಡದ ದಾಖಲೆಗೆ ಪಾತ್ರವಾಗಿದೆ. ಇದರ ಜತೆಗೆ ಲಂಕಾದೊಂದಿಗೆ ಸೋಲಿನ ನೋವನ್ನು ಹಂಚಿಕೊಂಡಿದೆ.

ಸರಣಿ ಕ್ಲೀನ್ ಸ್ವೀಪ್ ಮಾಡಿ ಸೇಡು ತೀರಿಸಿಕೊಂಡ ಟೀಂ ಇಂಡಿಯಾ

ಹೌದು, ನ್ಯೂಜಿಲೆಂಡ್ ತಂಡವು ಭಾರತ ವಿರುದ್ಧ 5ನೇ ಟಿ20 ಪಂದ್ಯವನ್ನು ಸೋಲುವುದರೊಂದಿಗೆ ತವರಿನಲ್ಲಿ ಅತಿಹೆಚ್ಚು ಟಿ20 ಪಂದ್ಯಗಳನ್ನು ಸೋತ ತಂಡಗಳ ಪಟ್ಟಿಯಲ್ಲಿ ಲಂಕಾ ಜತೆ ಜಂಟಿ ಅಗ್ರಸ್ಥಾನಕ್ಕೇರಿದೆ. ತವರಿನಲ್ಲಿ 59ನೇ ಟಿ20 ಪಂದ್ಯವಾಡಿದ ನ್ಯೂಜಿಲೆಂಡ್ ತಂಡವು 23 ಬಾರಿ ಸೋಲಿನ ಕಹಿ ಉಂಡಿದೆ. ಇನ್ನು ಲಂಕಾ ಸಹಾ ತವರಿನಲ್ಲಿ 40 ಪಂದ್ಯಗಳನ್ನಾಡಿ 23 ಸೋಲು ಕಂಡಿದೆ. ಇನ್ನು ಈ ಪಟ್ಟಿಯಲ್ಲಿ ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು 22 ಸೋಲುಗಳೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿವೆ.

5ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 163 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್ 9 ವಿಕೆಟ್ ಕಳೆದುಕೊಂಡು 156 ರನ್ ಬಾರಿಸಲಷ್ಟೇ ಶಕ್ತವಾಯಿತು.

ವಿರಾಟ್ ಮುಡಿಗೆ ಮತ್ತೊಂದು ಗರಿ: ನ್ಯೂಜಿಲೆಂಡ್ ನೆಲದಲ್ಲಿ ಟಿ20 ಸರಣಿ ಗೆದ್ದ ಭಾರತದ ಮೊದಲ ನಾಯಕ ಎನ್ನುವ ದಾಖಲೆ ಬರೆದಿದ್ದ ವಿರಾಟ್ ಕೊಹ್ಲಿ, ಇದೀಗ ಮತ್ತೊಂದು ಅಪರೂಪದ ಗೌರವಕ್ಕೂ ಭಾಜನರಾಗಿದ್ದಾರೆ. ನಾಯಕನಾಗಿ 15 ಟಿ20 ಸರಣಿ ಮುನ್ನಡೆಸಿದ ಬಳಿಕ ಅತಿಹೆಚ್ಚು ಸರಣಿ ಗೆದ್ದ ನಾಯಕ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.

ಹೌದು, ಈ ಮೊದಲು 15 ಟಿ20 ಸರಣಿ ಬಳಿಕ ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡು ಪ್ಲೆಸಿಸ್ 9 ಬಾರಿ ತಂಡವನ್ನು ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದ್ದರು. ಇದೀಗ ವಿರಾಟ್ ಕೊಹ್ಲಿ 10 ಬಾರಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.