Asianet Suvarna News Asianet Suvarna News

Ind vs NZ ಭಾರತ-ನ್ಯೂಜಿಲೆಂಡ್‌ 3ನೇ ಏಕದಿನ ಇಂದು; ಟೀಂ ಇಂಡಿಯಾಗೆ ಮಾಡು ಇಲ್ಲವೇ ಮಡಿ ಪಂದ್ಯ

* ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ
* ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಪಾಲಿಗೆ ಮಾಡುವ ಇಲ್ಲವೇ ಮಡಿ ಪಂದ್ಯ
* ಏಕದಿನ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ

Ind vs NZ 3rd ODI Shikhar Dhawan led Team India take on New Zealand in a Much win game kvn
Author
First Published Nov 30, 2022, 6:22 AM IST

ಕ್ರೈಸ್ಟ್‌ಚರ್ಚ್‌(ನ.30): ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಬುಧವಾರ ನಡೆಯಲಿದ್ದು, ಮೊದಲ ಪಂದ್ಯ ಸೋತಿದ್ದ ಟೀಂ ಇಂಡಿಯಾ ಸರಣಿ ಸೋಲಿನಿಂದ ಪಾರಾಗಲು ಎದುರು ನೋಡುತ್ತಿದೆ. 2ನೇ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸ ಇಟ್ಟುಕೊಂಡಿದ್ದ ಭಾರತಕ್ಕೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಮೂರನೇ ಪಂದ್ಯದ ಮೇಲೆ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ.

ಇಲ್ಲಿನ ಹೇಗ್ಲಿ ಓವಲ್‌ನಲ್ಲಿ ಬುಧವಾರ ನಡೆಯಲಿರುವ ಪಂದ್ಯಕ್ಕೂ ಮಳೆ ಕಾಟದ ನಿರೀಕ್ಷೆ ಇದ್ದು, ಓವರ್‌ಗಳು ಕಡಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಪವರ್‌ ಪ್ಲೇ(ಮೊದಲ 10 ಓವರ್‌)ನಲ್ಲಿ ಭಾರತದ ಬ್ಯಾಟಿಂಗ್‌ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದ್ದು ನಾಯಕ ಧವನ್‌ ಮೇಲೆ ಒತ್ತಡವಿದೆ. ಸಂಜು ಸ್ಯಾಮ್ಸನ್‌ಗೆ ಸ್ಥಾನ ಸಿಗಲಿದೆಯೇ ಎನ್ನುವ ಕುತೂಹಲವೂ ಇದೆ.

ಟೀಂ ಇಂಡಿಯಾ ಉಪನಾಯಕ ರಿಷಭ್ ಪಂತ್ ಪದೇ ಪದೇ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವುದರಿಂದ ಪಂತ್‌ಗೆ ಅವರನ್ನು ಕೈಬಿಟ್ಟು ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡುವುದಕ್ಕೆ ಇದು ಸಕಾಲ ಎನ್ನುವ ಆಗ್ರಹ ಕೇಳಿ ಬರಲಾರಂಭಿಸಿದೆ. ಹೀಗಾಗಿ ನಾಯಕ ಶಿಖರ್ ಧವನ್ ಹಾಗೂ ಟೀಂ ಇಂಡಿಯಾ, ಪಂತ್ ಹೊರಗಿಟ್ಟು ಸಂಜು ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡುವ ದಿಟ್ಟ ನಿರ್ಧಾರವನ್ನು ಕೈಗೊಳ್ಳಲಿದೆಯೇ ಎನ್ನುವ ಕುತೂಹಲ ಜೋರಾಗಿದೆ.

ಇನ್ನುಳಿದಂತೆ ಭಾರತ ತಂಡದ ಪರ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್, ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಒಳ್ಳೆಯ ಲಯದಲ್ಲಿದ್ದು, ಮತ್ತೊಂದು ದೊಡ್ಡ ಇನಿಂಗ್ಸ್‌ ತಂಡವು ಈ ಮೂವರು ಬ್ಯಾಟರ್‌ಗಳಿಂದ ನಿರೀಕ್ಷಿಸುತ್ತಿದೆ. ಇನ್ನು ಬೌಲಿಂಗ್ ಆಲ್ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್ ಹಾಗೂ ದೀಪಕ್ ಚಹರ್‌ ಜತೆಗೆ ವೇಗಿಗಳಾದ ಉಮ್ರಾನ್ ಮಲಿಕ್, ಆರ್ಶದೀಪ್ ಸಿಂಗ್ ಮೇಲೆ ದೊಡ್ಡ ಜವಾಬ್ದಾರಿಯಿದೆ. ಇನ್ನು ವಿಕೆಟ್ ಕಬಳಿಸಲು ಪರದಾಡುತ್ತಿರುವ ಯುಜುವೇಂದ್ರ ಚಹಲ್ ಬದಲಿಗೆ ಕುಲ್ದೀಪ್ ಯಾದವ್‌ಗೆ ಸ್ಥಾನ ದೊರೆಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Ind vs NZ 3rd ODI: ಮೂರನೇ ಪಂದ್ಯಕ್ಕೆ ಸಂಜು ಸ್ಯಾಮ್ಸನ್‌ಗೆ ಸಿಗುತ್ತಾ ಸ್ಥಾನ?

ಇನ್ನು ಮೊದಲ ಏಕದಿನ ಪಂದ್ಯದಲ್ಲಿ ಬೃಹತ್ ಮೊತ್ತ ಬೆನ್ನತ್ತಿ ಗೆದ್ದು ಬೀಗುತ್ತಿರುವ ಕೇನ್ ವಿಲಿಯಮ್ಸನ್ ಪಡೆ, ಇದೀಗ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಆರಂಭಿಕರಾದ ಡೆವೊನ್ ಕಾನ್‌ವೇ, ಫಿನ್ ಅಲೆನ್ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ಕೇನ್ ವಿಲಿಯಮ್ಸನ್, ಡೇರಲ್ ಮಿಚೆಲ್, ಗ್ಲೆನ್ ಫಿಲಿಫ್ಸ್ ಹಾಗೂ ಟಾಮ್ ಲೇಥಮ್ ಕಿವೀಸ್ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದಾರೆ. ಇನ್ನು ಅನುಭವಿ ವೇಗಿ ಟಿಮ್ ಸೌಥಿ, ಲಾಕಿ ಫರ್ಗ್ಯೂಸನ್, ಮ್ಯಾಟ್ ಹೆನ್ರಿ ಜತೆಗೆ ಅನುಭವಿ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್, ಟೀಂ ಇಂಡಿಯಾ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

ಸಂಭಾವ್ಯ ತಂಡಗಳು ಹೀಗಿವೆ ನೋಡಿ

ಭಾರತ: ಶಿಖರ್ ಧವನ್(ನಾಯಕ), ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್/ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ದೀಪಕ್ ಚಹರ್, ಉಮ್ರಾನ್ ಮಲಿಕ್, ಆರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್.

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್‌ವೇ, ಕೇನ್ ವಿಲಿಯಮ್ಸನ್(ನಾಯಕ), ಡೇರಲ್ ಮಿಚೆಲ್, ಟಾಮ್ ಲೇಥಮ್(ವಿಕೆಟ್ ಕೀಪರ್), ಗ್ಲೆನ್ ಫಿಲಿಫ್ಸ್‌, ಮಿಚೆಲ್ ಸ್ಯಾಂಟ್ನರ್, ಮೈಕಲ್ ಬ್ರಾಸ್‌ವೆಲ್‌, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲಾಕಿ ಫರ್ಗ್ಯೂಸನ್.

ಪಂದ್ಯ: ಬೆಳಗ್ಗೆ 7ಕ್ಕೆ
ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್‌/ಅಮೆಜಾನ್‌ ಪ್ರೈಮ್‌

Follow Us:
Download App:
  • android
  • ios