Asianet Suvarna News Asianet Suvarna News

Ind vs NZ: ಮಳೆಯಿಂದ 3ನೇ ಪಂದ್ಯ ರದ್ದು; ಏಕದಿನ ಸರಣಿ ಕಿವೀಸ್ ಪಾಲು..!

ಭಾರತ-ನ್ಯೂಜಿಲೆಂಡ್ ಮೂರನೇ ಏಕದಿನ ಪಂದ್ಯ ಮಳೆಗೆ ಆಹುತಿ
ಮೂರು ಪಂದ್ಯಗಳ ಏಕದಿನ ಸರಣಿ 1-0 ಅಂತರದಲ್ಲಿ ಜಯಿಸಿದ ನ್ಯೂಜಿಲೆಂಡ್
ಮೂರನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಟೀಂ ಇಂಡಿಯಾ

Ind vs NZ 3rd ODI Match Called Off Due To Rain New Zealand Clinch ODI Series kvn
Author
First Published Nov 30, 2022, 3:19 PM IST

ಕ್ರೈಸ್ಟ್‌ಚರ್ಚ್‌(ನ.30): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯ ಮಳೆಗೆ ಆಹುತಿಯಾಗಿದ್ದು, ಪಂದ್ಯ ರದ್ದು ಎಂದು ಘೋಷಿಸಲಾಗಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕೇನ್ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ತಂಡವು 1-0 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಪಂದ್ಯವನ್ನು ಕಿವೀಸ್‌ ತಂಡವು 7 ವಿಕೆಟ್‌ಗಳ ಜಯ ಸಾಧಿಸಿ ಶುಭಾರಂಭ ಮಾಡಿತ್ತು. ಇನ್ನು ಎರಡನೇ ಏಕದಿನ ಪಂದ್ಯ ಕೂಡಾ ಮಳೆಯಿಂದ ರದ್ದಾಗಿತ್ತು.

ಇಲ್ಲಿನ ಹ್ಲೇಗ್ಲೆ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 220 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ಡೆವೊನ್‌ ಕಾನ್‌ವೇ ಹಾಗೂ ಫಿನ್ ಅಲೆನ್ 97 ರನ್‌ಗಳ ಜತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿ ಕೊಟ್ಟರು. ಪ್ರತಿಭಾನ್ವಿತ ಬ್ಯಾಟರ್ ಫಿನ್ ಅಲೆನ್ ಕೇವಲ 54 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 57 ರನ್ ಬಾರಿಸಿ ವೇಗಿ ಉಮ್ರಾನ್ ಮಲಿಕ್ ಬೌಲಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಮತ್ತೊಂದು ತುದಿಯಲ್ಲಿ ಡೆವೊನ್ ಕಾನ್‌ವೇ 51 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 38 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದರು. ನ್ಯೂಜಿಲೆಂಡ್ ತಂಡವು 18 ಓವರ್ ಅಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 104 ರನ್ ಬಾರಿಸಿದ್ದು, ಕೊನೆಯ ಪಂದ್ಯ ಗೆಲ್ಲಲು ಇನ್ನೂ 32 ಓವರ್‌ಗಳಲ್ಲಿ ಕೇವಲ 116 ರನ್‌ಗಳನ್ನು ಗಳಿಸಬೇಕಿತ್ತು. ಆದರೆ ನಿರಂತರವಾಗಿ ಮಳೆ ಸುರಿದಿದ್ದರಿಂದ ಪಂದ್ಯವನ್ನು ರದ್ದು ಎಂದು ಘೋಷಿಸಲಾಯಿತು. ಏಕದಿನ ಕ್ರಿಕೆಟ್‌ನಲ್ಲಿ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ಫಲಿತಾಂಶ ಘೋಷಿಸಲು ಕನಿಷ್ಠ 20 ಓವರ್‌ ಪೂರ್ತಿಗೊಂಡಿರಬೇಕಿತ್ತು. ಆದರೆ ಕೇವಲ 18 ಓವರ್‌ ಮುಗಿದಿದ್ದರಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.

Ind vs NZ: ಮೂರನೇ ಏಕದಿನ ಪಂದ್ಯಕ್ಕೂ ಮಳೆ ಅಡ್ಡಿ, ಕಿವೀಸ್ ಗೆಲುವಿನತ್ತ ದಾಪುಗಾಲು..!

ಇದಕ್ಕೂ ಮೊದಲು ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ಆಡಂ ಮಿಲ್ನೆ ಹಾಗೂ ಡೇರಲ್ ಮಿಚೆಲ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. ವಾಷಿಂಗ್ಟನ್ ಸುಂದರ್(51) ಹಾಗೂ ಶ್ರೇಯಸ್ ಅಯ್ಯರ್(49) ಹೊರತುಪಡಿಸಿ ಈ ಬೌನ್ಸಿ ಪಿಚ್‌ನಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು. ಶುಭ್‌ಮನ್ ಗಿಲ್(13) ಹಾಗೂ ಶಿಖರ್ ಧವನ್(28) ಎಚ್ಚರಿಕೆಯ ಆರಂಭವನ್ನು ಪಡೆದರಾದರೂ, ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು. ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್(10) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರೆ, ತಾರಾ ಬ್ಯಾಟರ್ ಸೂರ್ಯಕುಮಾರ್ ಯಾದವ್(6) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು, ಟೀಂ ಇಂಡಿಯಾ ಬ್ಯಾಟಿಂಗ್ ಬೆನ್ನೆಲುಬಿಗೆ ಬಲವಾದ ಪೆಟ್ಟು ಬೀಳುವಂತೆ ಮಾಡಿತು.

ಟಿ20 ಸರಣಿ ಕಿವೀಸ್‌ ಪಾಲು: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ನ್ಯೂಜಿಲೆಂಡ್ ಎದುರು ಆಘಾತಕಾರಿ ಸೋಲು ಅನುಭವಿಸಿತ್ತು. ಈ ಮೂಲಕ ನ್ಯೂಜಿಲೆಂಡ್ ತಂಡವು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಇನ್ನು ಇದಾದ ಬಳಿಕ ಎರಡು ಹಾಗೂ ಮೂರನೇ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಇದೀಗ ಕೇನ್ ವಿಲಿಯಮ್ಸನ್ ಪಡೆ ಏಕದಿನ ಸರಣಿಯನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೂ ಮೊದಲು ನಡೆದ ಮೂರು ಪಂದ್ಯಗಳ ಟಿ20 ಸರಣಿಯನ್ನು ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ 1-0 ಅಂತರದಲ್ಲಿ ಜಯಿಸಿತ್ತು.

Follow Us:
Download App:
  • android
  • ios