Asianet Suvarna News Asianet Suvarna News

Ind vs NZ: ಮೂರನೇ ಏಕದಿನ ಪಂದ್ಯಕ್ಕೂ ಮಳೆ ಅಡ್ಡಿ, ಕಿವೀಸ್ ಗೆಲುವಿನತ್ತ ದಾಪುಗಾಲು..!

ಭಾರತ-ನ್ಯೂಜಿಲೆಂಡ್ ಮೂರನೇ ಏಕದಿನ ಪಂದ್ಯಕ್ಕೂ ಮಳೆ ಅಡ್ಡಿ
ಭಾರತ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಿರುವ ನ್ಯೂಜಿಲೆಂಡ್ ತಂಡ
ಗೆಲ್ಲಲು ಇನ್ನೂ ನ್ಯೂಜಿಲೆಂಡ್‌ಗೆ ಬೇಕಿದೆ ಕೇವಲ 116 ರನ್

Ind vs NZ Rain Stops Play In Christchurch New Zealand is in Driver Seat in 3rd ODI kvn
Author
First Published Nov 30, 2022, 1:09 PM IST

ಕ್ರೈಸ್ಟ್‌ಚರ್ಚ್‌(ನ.30): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯಕ್ಕೂ ಮಳೆರಾಯ ತನ್ನ ವಕ್ರದೃಷ್ಟಿ ಬೀರಿದ್ದಾನೆ. ಭಾರತ ನೀಡಿದ್ದ 220ರ ರನ್‌ಗಳ ಸಾಧಾರಣ ಗುರಿ ಬೆನ್ನತ್ತಿರುವ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು ಗೆಲುವಿನತ್ತ ದಾಪುಗಾಲಿಟ್ಟಿದೆ. ಇದರ ಬೆನ್ನಲ್ಲೇ ಮಳೆರಾಯನ ಆಗಮನದಿಂದಾಗಿ ಪಂದ್ಯವನ್ನು ಕೆಲ ಕಾಲದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ನ್ಯೂಜಿಲೆಂಡ್ ತಂಡವು 18 ಓವರ್ ಅಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 104 ರನ್ ಬಾರಿಸಿದ್ದು, ಕೊನೆಯ ಪಂದ್ಯ ಗೆಲ್ಲಲು ಇನ್ನೂ 32 ಓವರ್‌ಗಳಲ್ಲಿ ಕೇವಲ 116 ರನ್‌ಗಳನ್ನು ಗಳಿಸಬೇಕಿದೆ.

ಹೌದು, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ಇಲ್ಲಿನ ಹೇಗ್ಲೆ ಓವಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಭಾರತ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ದಿಟ್ಟ ಆರಂಭವನ್ನೇ ಪಡೆದಿದೆ. ಮೊದಲ ವಿಕೆಟ್‌ಗೆ ಫಿನ್ ಅಲೆನ್ ಹಾಗೂ ಡೆವೊನ್ ಕಾನ್‌ವೇ ಜೋಡಿ ನ್ಯೂಜಿಲೆಂಡ್ ತಂಡಕ್ಕೆ ದಿಟ್ಟ ಆರಂಭವನ್ನೇ ಒದಗಿಸಿಕೊಟ್ಟಿದ್ದಾರೆ. ಮೊದಲ ವಿಕೆಟ್‌ಗೆ ಈ ಜೋಡಿ 16.3 ಓವರ್‌ಗಳಲ್ಲಿ 97 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿದ್ದಾರೆ.

ಪ್ರತಿಭಾನ್ವಿತ ಬ್ಯಾಟರ್ ಫಿನ್ ಅಲೆನ್ ಕೇವಲ 54 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 57 ರನ್ ಬಾರಿಸಿ ವೇಗಿ ಉಮ್ರಾನ್ ಮಲಿಕ್ ಬೌಲಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಮತ್ತೊಂದು ತುದಿಯಲ್ಲಿ ಡೆವೊನ್ ಕಾನ್‌ವೇ 51 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 38 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. 18 ಓವರ್‌ ಮುಗಿಯುತ್ತಿದ್ದಂತೆಯೇ ಜೋರಾಗಿ ಮಳೆ ಸುರಿಯಲಾರಂಭಿಸಿದ್ದರಿಂದ ಪಂದ್ಯವನ್ನು ಕೆಲಕಾಲದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ.

Ind vs NZ ಶ್ರೇಯಸ್ 'ಸುಂದರ' ಬ್ಯಾಟಿಂಗ್; ಕಿವೀಸ್‌ಗೆ ಸಾಧಾರಣ ಗುರಿ..!

ಇದಕ್ಕೂ ಮೊದಲು ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ಆಡಂ ಮಿಲ್ನೆ ಹಾಗೂ ಡೇರಲ್ ಮಿಚೆಲ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. ವಾಷಿಂಗ್ಟನ್ ಸುಂದರ್(51) ಹಾಗೂ ಶ್ರೇಯಸ್ ಅಯ್ಯರ್(49) ಹೊರತುಪಡಿಸಿ ಈ ಬೌನ್ಸಿ ಪಿಚ್‌ನಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು. ಶುಭ್‌ಮನ್ ಗಿಲ್(13) ಹಾಗೂ ಶಿಖರ್ ಧವನ್(28) ಎಚ್ಚರಿಕೆಯ ಆರಂಭವನ್ನು ಪಡೆದರಾದರೂ, ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು. ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್(10) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರೆ, ತಾರಾ ಬ್ಯಾಟರ್ ಸೂರ್ಯಕುಮಾರ್ ಯಾದವ್(6) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು, ಟೀಂ ಇಂಡಿಯಾ ಬ್ಯಾಟಿಂಗ್ ಬೆನ್ನೆಲುಬಿಗೆ ಬಲವಾದ ಪೆಟ್ಟು ಬೀಳುವಂತೆ ಮಾಡಿತು.

Follow Us:
Download App:
  • android
  • ios