ಆಕ್ಲೆಂಡ್(ಜ.24): ಆರಂಭಿಕ ಬ್ಯಾಟ್ಸ್‌ಮನ್ ಕಾಲಿನ್ ಮನ್ರೋ(59), ಕೇನ್ ವಿಲಿಯಮ್ಸನ್‌(51) ಹಾಗೂ ರಾಸ್ ಟೇಲರ್(54) ಸ್ಫೋಟಕ ಅರ್ಧಶತಕಗಳ ನೆರವಿನಿಂದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ಐದು ವಿಕೆಟ್ ಕಳೆದು 203 ರನ್ ಬಾರಿಸಿದ್ದು, ಭಾರತಕ್ಕೆ ಕಠಿಣ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ಸಿಡಿಲಬ್ಬರದ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಕಾಲಿನ್ ಮನ್ರೋ-ಮಾರ್ಟಿನ್ ಗಪ್ಟಿಲ್ ಜೋಡಿ 80 ರನ್‌ಗಳ ಜತೆಯಾಟವಾಡಿದರು. ಕೇವಲ 7.5 ಓವರ್‌ಗಳಲ್ಲಿ 80 ರನ್‌ಗಳ ಜತೆಯಾಟವಾಡುವ ಮೂಲಕ ಕಿವೀಸ್ ಪಡೆಗೆ ಭದ್ರ ಬುನಾದಿ ಹಾಕಿಕೊಟ್ಟರು. ಗಪ್ಟಿಲ್ 19 ಎಸೆತಗಳಲ್ಲಿ  4 ಬೌಂಡರಿ ಹಾಗೂ  1 ಸಿಕ್ಸರ್ ಸಹಿತ 30 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.  ಆ ಬಳಿಕ  ಮನ್ರೋ ಕೂಡಿಕೊಂಡ ನಾಯಕ ಕೇನ್ ವಿಲಿಯಮ್ಸನ್‌ ತಂಡದ ರನ್‌ಗಳಿಕೆಗೆ ಇನ್ನಷ್ಟು ಚುರುಕು ಮುಟ್ಟಿಸಿದರು. ಮನ್ರೋ 42 ಎಸೆತಗಳಲ್ಲಿ  6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 59 ರನ್‌ಗಳಿಸಿ ಶಾರ್ದೂಲ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು.

ಇಂಡೊ-ಕಿವೀಸ್ ಟಿ20: ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ

ಅಬ್ಬರಿಸಿದ ಹಳೆ ಹುಲಿಗಳು: ಕಿವೀಸ್ ಪಾಳಯದ ಮಧ್ಯಮ ಕ್ರಮಾಂಕದ ಆಧಾರಸ್ತಂಭ ಎನಿಸಿರುವ ರಾಸ್ ಟೇಲರ್ ಹಾಗೂ ಕೇನ್ ವಿಲಿಯಮ್ಸನ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ನಾಲ್ಕನೇ ವಿಕೆಟ್‌ಗೆ ಈ ಜೋಡಿ 61 ರನ್‌ಗಳ ಜತೆಯಾಟ ನಿಭಾಯಿಸಿದರು. ವಿಲಿಯಮ್ಸನ್ ಕೇವಲ 25 ಎಸೆತಗಳಲ್ಲಿ ತಲಾ ನಾಲ್ಕು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ  51 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಫುಲ್ ಚಾರ್ಜ್ ಮಾಡಿದ ರಾಸ್ ಟೇಲರ್ ಸಹಾ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಭಾರತ ಪರ ಶಮಿ 53 ರನ್ ನೀಡಿ ದುಬಾರಿ ಎನಿಸಿದರು. ಇನ್ನುಳಿದಂತೆ ಜಡೇಜಾ, ದುಬೆ, ಚಹಲ್, ಠಾಕೂರ್ ಹಾಗೂ ಬುಮ್ರಾ ತಲಾ ಒಂದೊಂದು ವಿಕೆಟ್ ಪಡೆದರು.