Asianet Suvarna News Asianet Suvarna News

Ind vs Ire: ರನ್ ಮಳೆಯಲ್ಲಿ ಗೆದ್ದ ಭಾರತ, ಟಿ20 ಸರಣಿ ಟೀಂ ಇಂಡಿಯಾ ಪಾಲು..!

* ಐರ್ಲೆಂಡ್ ಎದುರು ಟಿ20 ಸರಣಿ ಕ್ಲೀನ್‌ಸ್ವೀಪ್ ಮಾಡಿದ ಟೀಂ ಇಂಡಿಯಾ
* ಎರಡನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 4 ರನ್‌ಗಳ ರೋಚಕ ಜಯ
* ಎರಡನೇ ಟಿ20 ಪಂದ್ಯದಲ್ಲಿ ಆಕರ್ಷಕ ಶತಕ ಚಚ್ಚಿದ ದೀಪಕ್ ಹೂಡಾ

Ind vs Ire Deepak Hooda Umran Malik Shine As Team India Clean sweep T20 Series against Ireland kvn
Author
Bengaluru, First Published Jun 29, 2022, 8:35 AM IST

ಡಬ್ಲಿನ್‌(ಜೂ.29): ರನ್‌ ಮಳೆಯೇ ಹರಿದ ಭಾರತ ಹಾಗೂ ಐರ್ಲೆಂಡ್‌ ನಡುವಿನ 2ನೇ ಟಿ20 ಪಂದ್ಯದಲ್ಲಿ ಕೊನೆಗೂ ಟೀಂ ಇಂಡಿಯಾ 4 ರನ್‌ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯನ್ನು ಹಾರ್ದಿಕ್‌ ಪಾಂಡ್ಯ ಬಳಗ 2-0 ಅಂತರದಲ್ಲಿ ವಶಪಡಿಸಿಕೊಂಡಿತು. ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಕೊನೆಯೂ ಭಾರತ ಕ್ರಿಕೆಟ್ ತಂಡವು ಗೆಲುವಿನ ನಿಟ್ಟುಸಿರು ಬಿಡುವ ಮೂಲಕ ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದೆ

ಮೊದಲು ಬ್ಯಾಟ್‌ ಮಾಡಿದ ಭಾರತ ದೀಪಕ್‌ ಹೂಡಾ- ಸಂಜು ಸ್ಯಾಮ್ಸನ್‌ ಸ್ಫೋಟಕ ಆಟದ ನೆರವಿನಿಂದ 20 ಓವರಲ್ಲಿ 7 ವಿಕೆಟ್‌ಗೆ 225 ರನ್‌ ಕಲೆ ಹಾಕಿತು. ಬೃಹತ್‌ ಮೊತ್ತ ಬೆನ್ನತ್ತಿದ ಐರ್ಲೆಂಡ್‌ ದಿಟ್ಟಪ್ರದರ್ಶನ ನೀಡಿದ ಹೊರತಾಗಿಯೂ 5 ವಿಕೆಟ್‌ಗೆ 221 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ಐರ್ಲೆಂಡ್‌ ಆರಂಭದಲ್ಲೇ ಸ್ಫೋಟಕ ಆಟಕ್ಕೆ ಒತ್ತು ನೀಡಿತು. ಸ್ಟಿರ್ಲಿಂಗ್‌-ನಾಯಕ ಬಾಲ್ಬಿರ್ನೀ ಜೋಡಿ ಮೊದಲ ವಿಕೆಟ್‌ಗೆ 5.4 ಓವರಲ್ಲಿ 72 ರನ್‌ ಜೊತೆಯಾಟವಾಡಿತು. ಸ್ಟಿರ್ಲಿಂಗ್‌ 18 ಎಸೆತಗಳಲ್ಲಿ 40 ರನ್‌ ಚಚ್ಚಿದರೆ, ಬಾಲ್ಬಿರ್ನಿ 37 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್‌ ಒಳಗೊಂಡ 60 ರನ್‌ ಸಿಡಿಸಿದರು. ಕೊನೆ 4 ಓವರಲ್ಲಿ 52 ರನ್‌ ಬೇಕಿದ್ದಾಗ ಡೊಕ್ರೆಲ್‌(16 ಎಸೆತಗಳಲ್ಲಿ 34) ಮತ್ತು ಅಡೈರ್‌(23) ಅಬ್ಬರಿಸಿದರೂ ಗೆಲುವು ತಂದುಕೊಡಲು ಆಗಲಿಲ್ಲ. ಭುವನೇಶ್ವರ್‌, ಉಮ್ರಾನ್‌, ಹರ್ಷಲ್‌, ಬಿಷ್ಣೋಯಿ ತಲಾ 1 ವಿಕೆಟ್‌ ಕಿತ್ತರು.

ಹೂಡಾ ಚೊಚ್ಚಲ ಶತಕ

ಟಿಂಗ್‌ ಆರಂಭಿಸಿದ ಭಾರತ ಆರಂಭದಲ್ಲೇ ಐರ್ಲೆಂಡ್‌ ವಿರುದ್ಧ ಪ್ರಾಬಲ್ಯ ಸಾಧಿಸಿತು. 2ನೇ ವಿಕೆಟ್‌ಗೆ ಜೊತೆಯಾದ ಹೂಡಾ ಮತ್ತು ಸ್ಯಾಮ್ಸನ್‌ ಬರೋಬ್ಬರಿ 176 ರನ್‌ ಜೊತೆಯಾಟವಾಡಿದರು. ಇದು ಟಿ20ಯಲ್ಲಿ ಯಾವುದೇ ವಿಕೆಟ್‌ಗೆ ಭಾರತೀಯ ಬ್ಯಾಟರ್‌ಗಳ ಗರಿಷ್ಠ ಜೊತೆಯಾಟ. ಹೂಡಾ 57 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್‌ ಒಳಗೊಂಡ 104 ರನ್‌ ಬಾರಿಸಿದರು. ಈ ಮೂಲಕ ಭಾರತೀಯರ ಪೈಕಿ ಟಿ20ಯಲ್ಲಿ ಶತಕ ಬಾರಿಸಿದ 4ನೇ ಬ್ಯಾಟರ್‌ ಎನಿಸಿಕೊಂಡರು. ಇನ್ನು, ಸ್ಯಾಮ್ಸನ್‌ 42 ಎಸೆತಗಳಲ್ಲಿ 77 ರನ್‌ ಸಿಡಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿದರು. ಸೂರ್ಯಕುಮಾರ್‌ 15, ಹಾರ್ದಿಕ್‌ 13 ರನ್‌ ಗಳಿಸಿದರೆ, ಮೂವರು ಶೂನ್ಯ ಸುತ್ತಿದರು.

ಸ್ಕೋರ್‌

ಭಾರತ 20 ಓವರಲ್ಲಿ 225/7(ಹೂಡಾ 104, ಸ್ಯಾಮ್ಸನ್‌ 77, ಅಡೈರ್‌ 3-42, ಯಂಗ್‌ 2-35) 
ಐರ್ಲೆಂಡ್‌ 20 ಓವರಲ್ಲಿ 221/5(ಸ್ಟಿರ್ಲಿಂಗ್‌ 40, ಬಾಲ್ಬಿರ್ನಿ 60, ಬಿಷ್ಣೋಯಿ 1-41, ಉಮ್ರಾನ್‌ 1-42)

Follow Us:
Download App:
  • android
  • ios