* ಇಂಡೋ-ಇಂಗ್ಲೆಂಡ್ ಓವಲ್‌ ಟೆಸ್ಟ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭ* ಲೀಡ್ಸ್‌ ಟೆಸ್ಟ್‌ನಲ್ಲಿ ಆಘಾತಕಾರಿ ಸೋಲು ಕಂಡಿರುವ ಟೀಂ ಇಂಡಿಯಾ* ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಗಳಾಗುವ ಸಾಧ್ಯತೆ

ಲಂಡನ್(ಸೆ.02)‌: ಕೆಲ ತಿಂಗಳುಗಳ ಹಿಂದೆ ಅಡಿಲೇಡ್‌ನಲ್ಲಿ 36 ರನ್‌ಗೆ ಆಲೌಟ್‌ ಆಗಿ ಮುಖಭಂಗಕ್ಕೊಳಗಾಗಿದ್ದ ಭಾರತ ಬಳಿಕ ಪುಟಿದೆದ್ದು ಆಸ್ಪ್ರೇಲಿಯಾ ವಿರುದ್ಧ ಐತಿಹಾಸಿಕ ಸರಣಿ ಗೆಲುವು ಸಾಧಿಸಿತ್ತು. ಈಗ ಇಂಗ್ಲೆಂಡ್‌ ವಿರುದ್ಧವೂ ಟೀಂ ಇಂಡಿಯಾ ಹೆಚ್ಚೂ ಕಡಿಮೆ ಅದೇ ಪರಿಸ್ಥಿತಿಯಲ್ಲಿದೆ. ಲೀಡ್ಸ್‌ನಲ್ಲಿ ನಡೆದ 3ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 78 ರನ್‌ಗೆ ಆಲೌಟ್‌ ಆಗಿ ಇನ್ನಿಂಗ್ಸ್‌ ಸೋಲು ಅನುಭವಿಸಿದ್ದ ಭಾರತ ಮತ್ತೊಮ್ಮೆ ಪುಟಿದೆದ್ದು ಸರಣಿ ಗೆಲುವು ಸಾಧಿಸುವ ಗುರಿ ಹೊಂದಿದೆ.

ಲಂಡನ್‌ನ ದಿ ಓವಲ್‌ ಮೈದಾನದಲ್ಲಿ ಗುರುವಾರದಿಂದ 4ನೇ ಟೆಸ್ಟ್‌ ಆರಂಭಗೊಳ್ಳಲಿದ್ದು, ಭಾರತ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ. ಉಪನಾಯಕ ಅಜಿಂಕ್ಯ ರಹಾನೆ ಲಯದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದ್ದು, ಅವರನ್ನು ಕೈಬಿಟ್ಟರೆ ಹನುಮ ವಿಹಾರಿಗೆ ಅವಕಾಶ ಸಿಗಬಹುದು.

Scroll to load tweet…

ಅಶ್ವಿನ್‌ಗೆ ಸ್ಥಾನ?: ವಿಶ್ವ ನಂ.2 ಸ್ಪಿನ್ನರ್‌ ಆರ್‌.ಅಶ್ವಿನ್‌ ಈ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವೆನಿಸಿದೆ. ಓವಲ್‌ನ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಜುಲೈನಲ್ಲಿ ಸರ್ರೆ ಪರ ಕೌಂಟಿ ಪಂದ್ಯವನ್ನಾಡಿದ್ದ ಅಶ್ವಿನ್‌, ಸೋಮರ್‌ಸೆಟ್‌ ವಿರುದ್ಧ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಕಬಳಿಸಿದ್ದರು. 400ಕ್ಕೂ ಹೆಚ್ಚು ಟೆಸ್ಟ್‌ ವಿಕೆಟ್‌ ಕಬಳಿಸಿರುವ ಅವರ ಅನುಭವವನ್ನು ಭಾರತ ಈ ಪಂದ್ಯದಲ್ಲಿ ಉಪಯೋಗಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇನ್ನು, ಸರಣಿಯಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಓವರ್‌ ಬೌಲ್‌ ಮಾಡಿರುವ ಜಸ್‌ಪ್ರೀತ್‌ ಬುಮ್ರಾ ಹಾಗೂ ಮೊಹಮದ್‌ ಶಮಿ ಪೈಕಿ ಒಬ್ಬರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ಸಿಗಬಹುದು.

ರೂಟ್‌ ಭಯ: ಸರಣಿಯಲ್ಲಿ ಹ್ಯಾಟ್ರಿಕ್‌ ಶತಕ ಬಾರಿಸಿರುವ ಇಂಗ್ಲೆಂಡ್‌ ನಾಯಕ ಜೋ ರೂಟ್‌ ಉತ್ಕೃಷ್ಟ ಲಯದಲ್ಲಿದ್ದು, ಅವರನ್ನು ನಿಯಂತ್ರಿಸುವುದು ಭಾರತೀಯರಿಗಿರುವ ಅತಿದೊಡ್ಡ ಸವಾಲು. ಜೊತೆಗೆ ಇಂಗ್ಲೆಂಡ್‌ ವೇಗಿಗಳು ಸಹ ಉತ್ತಮ ಲಯದಲ್ಲಿದ್ದು, ಅವರನ್ನು ಎದುರಿಸುವುದು ಸುಲಭವಲ್ಲ ಎನ್ನುವ ಅರಿವು ಕೊಹ್ಲಿ ಪಡೆಗಿದೆ.

Ind vs Eng ಮೊದಲ ಬಾರಿ ಭಾರತ ಟೆಸ್ಟ್‌ ತಂಡಕ್ಕೆ ರಾಜ್ಯದ ವೇಗಿ ಪ್ರಸಿದ್ಧ ಕೃಷ್ಣ ಆಯ್ಕೆ!

ಇನ್ನು ಇಂಗ್ಲೆಂಡ್‌ ತಂಡದಲ್ಲೂ ಬದಲಾವಣೆ ಆಗಲಿದೆ. ಬಟ್ಲರ್‌ ಹೊರಗುಳಿದಿರುವ ಕಾರಣ ಬೇರ್‌ಸ್ಟೋವ್‌ ಕೀಪಿಂಗ್‌ ಮಾಡಲಿದ್ದಾರೆ. ಮೋಯಿನ್‌ ಅಲಿಗೆ ಉಪನಾಯಕನ ಪಟ್ಟ ನೀಡಲಾಗಿದೆ. ಆ್ಯಂಡರ್‌ಸನ್‌ಗೆ ವಿಶ್ರಾಂತಿ ನೀಡಿ ಕ್ರಿಸ್‌ ವೋಕ್ಸ್‌ ಇಲ್ಲವೇ ಮಾಕ್‌ ವುಡ್‌ರನ್ನು ಆಡಿಸಬಹುದು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ(ನಾಯಕ), ರಹಾನೆ/ವಿಹಾರಿ, ರಿಷಭ್‌ ಪಂತ್‌, ರವೀಂದ್ರ ಜಡೇಜಾ, ಆರ್‌.ಅಶ್ವಿನ್‌, ಶಾರ್ದೂಲ್‌ ಠಾಕೂರ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಸಿರಾಜ್‌.

ಇಂಗ್ಲೆಂಡ್‌: ರೋರಿ ಬರ್ನ್ಸ್‌‍, ಹಸೀಬ್‌ ಹಮೀದ್‌, ಡೇವಿಡ್‌ ಮಲಾನ್‌, ಜೋ ರೂಟ್‌(ನಾಯಕ), ಜಾನಿ ಬೇರ್‌ಸ್ಟೋವ್‌, ಲಾರೆನ್ಸ್‌/ಪೋಪ್‌, ಮೋಯಿನ್‌ ಅಲಿ, ಸ್ಯಾಮ್‌ ಕರ್ರನ್‌, ಕ್ರೇಗ್‌ ಓವರ್ಟನ್‌, ಓಲಿ ರಾಬಿನ್ಸನ್‌, ಜೇಮ್ಸ್‌ ಆ್ಯಂಡರ್‌ಸನ್‌.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್‌