Ind vs Eng ಲೀಡ್ಸ್‌ನಲ್ಲೂ ಲಾರ್ಡ್ಸ್ ಆಗುತ್ತಾ ಟೀಂ ಇಂಡಿಯಾ?
* ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭ
* ಈಗಾಗಲೇ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಜಯಗಳಿಸಿರುವ ಟೀಂ ಇಂಡಿಯಾ
* ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದೆ ಜೋ ರೂಟ್ ಪಡೆ
ಲೀಡ್ಸ್(ಆ.25): ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಟೀಂ ಇಂಡಿಯಾ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಇಂಗ್ಲೆಂಡ್ ತಂಡಕ್ಕೆ ಮತ್ತಷ್ಟು ಉಸಿರುಗಟ್ಟಿಸಿ 5 ಪಂದ್ಯಗಳ ಸರಣಿಯಲ್ಲಿ 2-0 ಅಜೇಯ ಮುನ್ನಡೆ ಸಾಧಿಸಲು ಹಾತೊರೆಯುತ್ತಿದೆ. ಬುಧವಾರದಿಂದ ಇಲ್ಲಿನ ಹೆಡಿಂಗ್ಲಿ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ 3ನೇ ಟೆಸ್ಟ್‌ನಲ್ಲೂ ಜಯಭೇರಿ ಬಾರಿಸುವುದು ವಿರಾಟ್ ಕೊಹ್ಲಿ ಪಡೆಯ ಗುರಿಯಾಗಿದೆ.
ಮೊದಲ ಪಂದ್ಯದಲ್ಲೇ ಭಾರತ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಮಳೆಯಿಂದಾಗಿ ಗೆಲ್ಲಲು ಆಗಲಿಲ್ಲ. ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದ 2ನೇ ಟೆಸ್ಟ್‌ನಲ್ಲಿ ಭಾರತ ತಾನೇಕೆ ವಿಶ್ವದ ಶ್ರೇಷ್ಠ ತಂಡ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿತು. ಪ್ರಮುಖವಾಗಿ ವೇಗದ ಬೌಲರ್‌ಗಳು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚು ಹರಿಸಿದರು. ಸರಣಿಯಲ್ಲಿ ಈ ವರೆಗೂ ಭಾರತವೇ ಬಲಿಷ್ಠವಾಗಿ ಕಾಣಿಸಿದ್ದು, ಅದೇ ಲಯವನ್ನು ಲೀಡ್ಸ್‌ನಲ್ಲೂ ಮುಂದುವರಿಸುವ ವಿಶ್ವಾಸದಲ್ಲಿದೆ.
ಭಾರತ ತಂಡದಲ್ಲಿ ಬದಲಾವಣೆ ಇಲ್ಲ?: ಲೀಡ್ಸ್‌ನಲ್ಲಿ ವೇಗಿಗಳಿಗೆ ಅನುಕೂಲವಾಗುವಂತಹ ವಾತಾವರಣವಿದ್ದು, ಭಾರತ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದರೆ ಅಚ್ಚರಿಯಿಲ್ಲ. ಹೀಗಾಗದಲ್ಲಿ ಆರ್.ಅಶ್ವಿನ್‌ಗೆ ಮತ್ತೊಮ್ಮೆ ಅವಕಾಶ ಸಿಗುವುದಿಲ್ಲ. ಶಾರ್ದೂಲ್ ಠಾಕೂರ್ ಫಿಟ್ ಆಗಿದ್ದರೂ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಲಯದಲ್ಲಿದ್ದಾರೆ. ಇನ್ನು ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಲಯದ ಬಗ್ಗೆ ಇದ್ದ ಪ್ರಶ್ನೆಗಳಿಗೆ ಇಬ್ಬರೂ ಲಾರ್ಡ್ಸ್‌ನಲ್ಲಿ ಉತ್ತರಿಸಿದ್ದಾರೆ. ಹಿರಿಯ ಆಟಗಾರರಿಂದ ಮತ್ತಷ್ಟು ಜವಾಬ್ದಾರಿಯುತ ಆಟ ನಿರೀಕ್ಷೆ ಮಾಡಲಾಗಿದೆ.
Ind vs Eng 3ನೇ ಟೆಸ್ಟ್‌ಗೆ ಟೀಂ ಇಂಡಿಯಾದಲ್ಲಿ ಒಂದು ಮಹತ್ವದ ಬದಲಾವಣೆ..?
ಸಂಕಷ್ಟದಲ್ಲಿ ಇಂಗ್ಲೆಂಡ್: ಆತಿಥೇಯ ಇಂಗ್ಲೆಂಡ್ ಇಬ್ಬರು ಆಟಗಾರರ ಮೇಲೆ ಅತಿಯಾಗಿ ಅವಲಂಬಿತಗೊಂಡಿದೆ. ನಾಯಕ ಜೋ ರೂಟ್ ಬ್ಯಾಟಿಂಗ್ ಆಧಾರಸ್ತಂಭವಾದರೆ, 39 ವರ್ಷದ ವೇಗಿ ಜೇಮ್ಸ್ ಆ್ಯಂಡರ್‌ಸನ್ ಬೌಲಿಂಗ್ ಶಕ್ತಿ. ಈ ಇಬ್ಬರನ್ನೇ ನೆಚ್ಚಿಕೊಂಡು ಪಂದ್ಯ ಗೆಲ್ಲಲು ಆಗುವುದಿಲ್ಲ ಎನ್ನುವುದು ಇಂಗ್ಲೆಂಡ್‌ಗೆ ಅರಿವಾಗಿದೆ. ಸೋಲಿನ ಮುಖಭಂಗ ತಪ್ಪಿಸಿಕೊಳ್ಳಬೇಕಿದ್ದರೆ ಇಂಗ್ಲೆಂಡ್ ಎಲ್ಲಾ ಮೂರೂ ವಿಭಾಗಗಳಲ್ಲಿ ಸುಧಾರಿತ ಪ್ರದರ್ಶನ ತೋರಬೇಕಿದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಕೆ.ಎಲ್.ರಾಹುಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ಮೊಹಮದ್ ಶಮಿ, ಇಶಾಂತ್ ಶರ್ಮಾ, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್.
ಇಂಗ್ಲೆಂಡ್: ರೋರಿ ಬನ್ಸ್‌ರ್, ಹಸೀಬ್ ಹಮೀದ್, ಡೇವಿಡ್ ಮಲಾನ್, ಜೋ ರೂಟ್(ನಾಯಕ), ಜಾನಿ ಬೇರ್‌ಸ್ಟೋವ್, ಜೋಸ್ ಬಟ್ಲರ್, ಮೋಯಿನ್ ಅಲಿ, ಸ್ಯಾಮ್ ಕರ್ರನ್, ಓಲಿ ರಾಬಿನ್ಸನ್, ಕ್ರೇಗ್ ಓವರ್ಟನ್, ಜೇಮ್ಸ್ ಆ್ಯಂಡರ್‌ಸನ್.
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್