* ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಒಂದು ಬದಲಾವಣೆ ನಿರೀಕ್ಷೆ* ವಿಕೆಟ್‌ ಕಬಳಿಸಲು ವೈಫಲ್ಯ ಅನುಭವಿಸಿದ ಜಡೇಜಾಗೆ ವಿಶ್ರಾಂತಿ ಸಾಧ್ಯತೆ* ಆಗಸ್ಟ್ 25ರಿಂದ ಆರಂಭವಾಗಲಿದೆ ಭಾರತ-ಇಂಗ್ಲೆಂಡ್‌ 3ನೇ ಟೆಸ್ಟ್ ಪಂದ್ಯ

ಲಂಡನ್‌(ಆ.23): ಇಂಗ್ಲೆಂಡ್‌ ವಿರುದ್ಧದ ಮೊದಲೆರಡು ಟೆಸ್ಟ್‌ಗಳಲ್ಲಿ ಬೌಲಿಂಗ್‌ನಲ್ಲಿ ನಿರಾಸೆ ಮೂಡಿಸಿರುವ ರವೀಂದ್ರ ಜಡೇಜಾ 3ನೇ ಟೆಸ್ಟ್‌ ಪಂದ್ಯದಿಂದ ಹೊರಬೀಳುವ ಸಾಧ್ಯತೆಯಿದ್ದು, ಅವರ ಬದಲಿಗೆ ಆಲ್‌ರೌಂಡರ್‌ ರವಿಚಂದ್ರನ್‌ ಆಶ್ವಿನ್‌ ಆಡಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. 

ಟೆಸ್ಟ್‌ ಕ್ರಿಕೆಟ್‌ನ ಪ್ರಮುಖ ಸ್ಪಿನ್ನರ್‌ ಆಗಿರುವ ರವಿಚಂದ್ರನ್‌ ಅಶ್ವಿನ್‌ರನ್ನು ಇಂಗ್ಲೆಂಡ್ ವಿರುದ್ದದ ಮೊದಲೆರಡು ಟೆಸ್ಟ್‌ಗೆ ಹೊರಗಿಟ್ಟದ್ದು ವಿರಾಟ್‌ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆ ಹುಟ್ಟು ಹಾಕಿತ್ತು. ಜಡೇಜಾ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರೂ ಎರಡು ಪಂದ್ಯಗಳಲ್ಲಿ 44 ಓವರ್‌ ಎಸೆದು ವಿಕೆಟ್‌ ಪಡೆಯಲು ವಿಫಲರಾಗಿದ್ದರು.

ಭಾರತ ಎದುರಿನ 3ನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ; ರೂಟ್‌ ಪಡೆಯಲ್ಲಿ ಮೇಜರ್ ಸರ್ಜರಿ

ಇಂಗ್ಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಡೇಜಾ 16 ಓವರ್‌ ಬೌಲಿಂಗ್ ಮಾಡಿ 3.30 ಎಕಾನಮಿಯಲ್ಲಿ ರನ್‌ ನೀಡಿದ್ದರು. ಆದರೆ ಯಾವುದೇ ವಿಕೆಟ್‌ ಕಬಳಿಸಲು ಜಡ್ಡು ಯಶಸ್ವಿಯಾಗಿರಲಿಲ್ಲ. ಇನ್ನು ಲಾರ್ಡ್ಸ್‌ ಟೆಸ್ಟ್ ಪಂದ್ಯದಲ್ಲಿ ಜಡೇಜಾ 28 ಓವರ್‌ ಬೌಲಿಂಗ್‌ ಮಾಡಿ 48 ರನ್‌ ನೀಡಿದ್ದರು. ಎರಡನೇ ಟೆಸ್ಟ್‌ನಲ್ಲೂ ಬೌಲಿಂಗ್‌ನಲ್ಲಿ ಜಡೇಜಾಗೆ ಯಶಸ್ಸು ದಕ್ಕಿರಲಿಲ್ಲ. ಇದೇ ವೇಳೆ ಇಂಗ್ಲೆಂಡ್‌ ಆಫ್‌ಸ್ಪಿನ್ನರ್ ಮೋಯಿನ್ ಅಲಿ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಹೀಗಾಗಿ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ತಜ್ಞ ಸ್ಪಿನ್ನರ್ ಅಶ್ವಿನ್‌ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.