ಅಹಮದಾಬಾದ್(ಮಾ.03)‌: ಇಂಗ್ಲೆಂಡ್‌ ವಿರುದ್ಧ ಕೊನೆಯ ಹಾಗೂ 4ನೇ ಟೆಸ್ಟ್‌ ಪಂದ್ಯಕ್ಕೆ ಈಗಾಗಲೇ ಕೌಂಟ್‌ಡೌನ್‌ ಶುರುವಾಗಿದ್ದು, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ಗೇರಲು ಭಾರತದ ಪಾಲಿಗೆ ಇದು ಅತ್ಯಂತ ಮಹತ್ವದ ಪಂದ್ಯವಾಗಿದೆ. ಇಂತಿಪ್ಪಾ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹಲವು ದಾಖಲೆಗಳ ಹೊಸ್ತಿಲಲ್ಲಿ ನಿಂತಿದ್ದಾರೆ.

ಭಾರತ-ಇಂಗ್ಲೆಂಡ್‌ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ಮುನ್ನಡೆ ಸಾಧಿಸಿದ್ದು, ಕೊನೆಯ ಟೆಸ್ಟ್ ಪಂದ್ಯದಲ್ಲಿ ಡ್ರಾ ಅಥವಾ ಗೆಲುವು ಸಾಧಿಸಿದರೆ, ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೇರಲಿದೆ. ಅದರಲ್ಲೂ ಅಹಮದಾಬಾದ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಕೇವಲ ಎರಡೇ ದಿನಕ್ಕೆ ಮುಕ್ತಾಯವಾಗಿತ್ತು. ಹೀಗಾಗಿ ಕೊನೆಯ ಟೆಸ್ಟ್ ಪಂದ್ಯದ ಪಿಚ್‌ ಯಾವ ರೀತಿ ಇರಲಿದೆ ಎನ್ನುವ ಕುತೂಹಲ ಜೋರಾಗಿದೆ

ಗುರುವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುವುದರೊಂದಿಗೆ ಟೆಸ್ಟ್‌ನಲ್ಲಿ ಅತಿ ಹೆಚ್ಚು ಪಂದ್ಯವನ್ನು ಮುನ್ನಡೆಸಿದ ನಾಯಕ ಎಂಬ ಎಂ.ಎಸ್‌.ಧೋನಿಯ ದಾಖಲೆಯನ್ನು ವಿರಾಟ್‌ ಸರಿಗಟ್ಟಲಿದ್ದಾರೆ. ಧೋನಿ 60 ಟೆಸ್ಟ್‌ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಇದುವರೆಗೂ ವಿರಾಟ್ ಕೊಹ್ಲಿ 59 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

4ನೇ ಟೆಸ್ಟ್‌ಗೂ ಸ್ಪಿನ್‌ ಪಿಚ್‌?: ಈ ಪಂದ್ಯಕ್ಕೂ ಸ್ಪಿನ್‌ ಸ್ನೇಹಿ ಪಿಚ್‌ ಸಿದ್ಧಗೊಳಿಸುವ ಸಾಧ್ಯತೆ!

12000 ರನ್‌ಗೆ 17 ಮೆಟ್ಟಿಲು ಬಾಕಿ: ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 12,000 ರನ್‌ ಪೂರೈಕೆಗೆ ಕೊಹ್ಲಿಗೆ 17 ರನ್‌ ಬಾಕಿ ಇದ್ದು, ಈ ಮೈಲಿಗಲ್ಲು ಸಾಧಿಸಲು ಟೀಂ ಇಂಡಿಯಾ ನಾಯಕನಿಗೆ ಒಳ್ಳೆಯ ಸದಾವಕಾಶ ಇದಾಗಿದೆ. ನಾಯಕರಾಗಿ ಅತೀ ಹೆಚ್ಚು ರನ್‌ ಗಳಿಸಿದ ಸಾಲಿನಲ್ಲಿ ಆಸ್ಪ್ರೇಲಿಯಾದ ರಿಕಿ ಪಾಟಿಂಗ್‌ (15,440) ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಗ್ರೇಮ್‌ ಸ್ಮಿತ್‌(14,878) 2ನೇ ಸ್ಥಾನದಲ್ಲಿದ್ದಾರೆ.

1 ಶತಕ ದೂರ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ಶತಕ ಬಾರಿಸಿದ ಪಾಂಟಿಂಗ್‌ ದಾಖಲೆಯನ್ನು ಪುಡಿಗಟ್ಟಲು ಕೊಹ್ಲಿ 1 ಶತಕದ ಅವಶ್ಯವಿದೆ. ಒಂದೊಮ್ಮೆ 4ನೇ ಟೆಸ್ಟ್‌ನಲ್ಲಿ ಶತಕ ಬಾರಿಸಿದರೆ, ನಾಯಕನಾಗಿ ಅತಿ ಹೆಚ್ಚು ಶತಕ ಗಳಿಸಿದ ಪಾಂಟಿಂಗ್‌ ದಾಖಲೆಯನ್ನು ಕೊಹ್ಲಿ ಮುರಿಯಲಿದ್ದಾರೆ.

ಶತಕದ ಬರ: 2019ರಲ್ಲಿ ಬಾಂಗ್ಲಾದೇಶ ವಿರುದ್ಧದ ಹಗಲು-ರಾತ್ರಿ ಟೆಸ್ಟ್‌ ಪಂದ್ಯದ ಬಳಿಕ ವಿರಾಟ್‌ ಕೊಹ್ಲಿ, ಟೆಸ್ಟ್‌ನಲ್ಲಿ ಒಂದೂ ಶತಕ ದಾಖಲಿಸಿಲ್ಲ. ಒಂದೊಮ್ಮೆ ಈ ಟೆಸ್ಟ್‌ನಲ್ಲೂ ಮೂರಂಕಿ ದಾಟಲು ವಿರಾಟ್‌ ವಿಫಲರಾದರೆ, ನಾಯಕರಾಗಿ ಶತಕ ಬಾರಿಸಿದ 42ನೇ ಪಂದ್ಯ ಇದಾಗಲಿದೆ. ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿರುವ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ವಿರಾಟ್‌ 4ನೇ ಸ್ಥಾನದಲ್ಲಿದ್ದಾರೆ.

ಕ್ಲೈವ್‌ ಲಾಡ್ಸ್‌ ದಾಖಲೆ ಸಮ: ಇನ್ನು 4ನೇ ಪಂದ್ಯವನ್ನು ಜಯಿಸಿದರೆ, ಅತಿ ಹೆಚ್ಚು ಟೆಸ್ಟ್‌ ಪಂದ್ಯ ಗೆದ್ದ ನಾಯಕರ ಸಾಲಿನಲ್ಲಿ ವಿಂಡೀಸ್‌ನ ಕ್ಲೈವ್‌ ಲಾಡ್ಸ್‌ (36 ಪಂದ್ಯ) ದಾಖಲೆಯನ್ನು ವಿರಾಟ್‌ ಸರಿಗಟ್ಟಲಿದ್ದಾರೆ.