ಅಹಮದಾಬಾದ್(ಮಾ.02)‌: ಇಂಗ್ಲೆಂಡ್‌ ವಿರುದ್ಧದ 4ನೇ ಹಾಗೂ ಅಂತಿಮ ಟೆಸ್ಟ್‌ ಆರಂಭಕ್ಕೆ ಇನ್ನು ಕೇವಲ 2 ದಿನ ಮಾತ್ರ ಬಾಕಿ ಇದ್ದು, ಈ ಪಂದ್ಯಕ್ಕೂ ಸ್ಪಿನ್‌ ಸ್ನೇಹಿ ಪಿಚ್‌ ಸಿದ್ಧಗೊಳ್ಳುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರಲು ಭಾರತ, ಈ ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳಬೇಕಿದೆ. ವಿರಾಟ್‌ ಕೊಹ್ಲಿ ಪಡೆ ಗೆದ್ದರೆ ಇಲ್ಲವೇ ಪಂದ್ಯವನ್ನು ಡ್ರಾ ಮಾಡಿಕೊಂಡರೆ ಫೈನಲ್‌ನಲ್ಲಿ ಸ್ಥಾನ ಖಚಿತವಾಗಿದೆ. ನಿರ್ಣಾಯಕ ಪಂದ್ಯವಾಗಿರುವ ಕಾರಣ ಅನಗತ್ಯ ರಿಸ್ಕ್‌ ತೆಗೆದುಕೊಳ್ಳುವುದು ಬೇಡ ಎನ್ನುವುದು ತಂಡದ ಆಡಳಿತದ ಅಭಿಪ್ರಾಯವಾಗಿದ್ದು, ಅದಕ್ಕೆ ತಕ್ಕಂತೆ ಗುಜರಾತ್‌ ರಾಜ್ಯ ಕ್ರಿಕೆಟ್‌ ಸಂಸ್ಥೆ (ಜಿಸಿಎ) ಮೊದಲ ದಿನದಿಂದಲೇ ಚೆಂಡು ತಿರುವು ಪಡೆಯುವಂತೆ ಪಿಚ್‌ ಸಿದ್ಧಗೊಳಿಸುತ್ತಿದೆ ಎನ್ನಲಾಗಿದೆ.

ಚೆನ್ನೈನಲ್ಲಿ ನಡೆದ 2ನೇ ಟೆಸ್ಟ್‌ ಹಾಗೂ ಇಲ್ಲಿನ ಮೊಟೇರಾ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್‌ಗೆ ಸ್ಪಿನ್‌ ಸ್ನೇಹಿ ಪಿಚ್‌ ಸಿದ್ಧಗೊಳಿಸಲಾಗಿತ್ತು. ಭಾರತ ಎರಡೂ ಪಂದ್ಯಗಳಲ್ಲಿ ಅಮೋಘ ಗೆಲುವು ಸಾಧಿಸಿ, ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸುವುದರ ಜೊತೆಗೆ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ ಪೈಪೋಟಿಯಿಂದ ಇಂಗ್ಲೆಂಡ್‌ ತಂಡವನ್ನು ಹೊರಹಾಕಿತ್ತು.

3ನೇ ಟೆಸ್ಟ್‌ ಕೇವಲ ಒಂದೂ ಮುಕ್ಕಾಲು ದಿನಕ್ಕೇ ಮುಕ್ತಾಯಗೊಂಡಿದ್ದರಿಂದ ಪಿಚ್‌ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಇಂಗ್ಲೆಂಡ್‌ನ ಮಾಜಿ ಆಟಗಾರರು, ಮಾಧ್ಯಮಗಳು ಪಿಚ್‌ ಹಾಗೂ ಬಿಸಿಸಿಐ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದವು. ಆದರೆ ಆಸ್ಪ್ರೇಲಿಯಾ, ವೆಸ್ಟ್‌ಇಂಡೀಸ್‌ ಸೇರಿ ಇಂಗ್ಲೆಂಡ್‌ನ ಕೆಲ ಮಾಜಿ ಆಟಗಾರರು ಪಿಚ್‌ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದರೆ, ಇಂಗ್ಲೆಂಡ್‌ನ ಕೆಲ ಪ್ರಮುಖ ಮಾಧ್ಯಮಗಳು ಜೋ ರೂಟ್‌ ಪಡೆಯ ಸೋಲಿಗೆ ಬ್ಯಾಟ್ಸ್‌ಮನ್‌ಗಳ ವೈಫಲ್ಯವೇ ಕಾರಣ ಹೊರತು ಪಿಚ್‌ ಅಲ್ಲ ಎಂದಿವೆ. ಹೀಗಾಗಿ ಮೊಟೇರಾ ಪಿಚ್‌ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿರುವಾಗಲೇ ಮತ್ತೊಂದು ಟೆಸ್ಟ್‌ಗೆ ಕ್ರೀಡಾಂಗಣ ಸಜ್ಜಾಗಿದೆ.

ಅಂತಿಮ ಟೆಸ್ಟ್‌ಗೆ ಉಮೇಶ್‌, ಕುಲ್ದೀಪ್‌ ಯಾದವ್‌ಗೆ ಸ್ಥಾನ?

4ನೇ ಟೆಸ್ಟ್‌ಗೆ ಭಾರತ ಎರಡು ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಜಸ್‌ಪ್ರೀತ್‌ ಬೂಮ್ರಾಗೆ ವಿಶ್ರಾಂತಿ ನೀಡಿರುವ ಕಾರಣ ಅವರ ಬದಲಿಗೆ ಉಮೇಶ್‌ ಯಾದವ್‌ಗೆ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಇಶಾಂತ್‌ ಶರ್ಮಾ ಜೊತೆ ಹೊಸ ಚೆಂಡು ಹಂಚಿಕೊಳ್ಳಲು ಅನುಭವಿ ವೇಗಿಯ ಅಗತ್ಯವಿದ್ದು, ಗಾಯದಿಂದ ಚೇತರಿಸಿಕೊಂಡಿರುವ ಉಮೇಶ್‌ ಸೇರ್ಪಡೆ ತಂಡದ ಬೌಲಿಂಗ್‌ ಬಲ ಹೆಚ್ಚಿಸಲಿದೆ. ಇನ್ನು ವಾಷಿಂಗ್ಟನ್‌ ಸುಂದರ್‌ ಬದಲಿಗೆ ಕುಲ್ದೀಪ್‌ ಯಾದವ್‌ ಆಡುವ ಸಾಧ್ಯತೆ ಹೆಚ್ಚಿದೆ. ಪಿಂಕ್‌ ಬಾಲ್‌ ಪಂದ್ಯದಲ್ಲಿ ಆಡಿದ್ದ ವಾಷಿಂಗ್ಟನ್‌ಗೆ ಹೆಚ್ಚು ಅವಕಾಶ ಸಿಕ್ಕಿರಲಿಲ್ಲ. ಕುಲ್ದೀಪ್‌ ಆಡಿಸುವುದರಿಂದ ಸ್ಪಿನ್‌ ಬೌಲಿಂಗ್‌ ವಿಭಾಗದಲ್ಲಿ ವೈಶಿಷ್ಟ್ಯತೆ ಇರಲಿದೆ ಎನ್ನುವುದು ತಂಡದ ನಂಬಿಕೆಯಾಗಿದೆ.