ಅಹಮ್ಮದಾಬಾದ್(ಮಾ.18):  ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿದ ಟೀಂ ಇಂಡಿಯಾ ಇಂಗ್ಲೆಂಡ್‌ಗೆ ಶಾಕ್ ನೀಡಿದೆ. 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 8 ರನ್ ಗೆಲುವು ದಾಖಲಿದೆ. ಈ ಮೂಲಕ ಟಿ20 ಸರಣಿ 2-2 ಅಂತರದಲ್ಲಿ ಸಮಬಲಗೊಂಡಿದ್ದು, ಇದೀಗ 5ನೇ ಹಾಗೂ ಅಂತಿಮ ಪಂದ್ಯ ಫೈನಲ್ ಸ್ವರೂಪ ಪಡೆದುಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಈ ಪಂದ್ಯ ಗೆಲ್ಲೋ ಮೂಲಕ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರ ಟೀಕೆಗೆ ಟೀಂ ಇಂಡಿಯಾ ಉತ್ತರ ನೀಡಿದೆ. ಟಾಸ್ ಗೆದ್ದವನೇ ಬಾಸ್ ಎಂಬ ಟೀಕೆಗೆ ಕೊಹ್ಲಿ ಸೈನ್ಯ ತಕ್ಕ ತಿರುಗೇಟು ನೀಡಿದೆ.

ಮೊದಲ ಎಸೆತದಲ್ಲೇ ಸಿಕ್ಸರ್; ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ದಾಖಲೆ!.

186 ರನ್ ಟಾರ್ಗೆಟ್ ಪಡೆದ ಇಂಗ್ಲೆಂಡ್ ತಂಡ ಆರಂಭದಲ್ಲೇ ಜೋಸ್ ಬಟ್ಲರ್ 9 ರನ್ ಸಿಡಿಸಿ ಔಟಾದರು. ಆದರೆ ಜೇಸನ್ ರಾಯ್ ಬ್ಯಾಟಿಂಗ್ ಇಂಗ್ಲೆಂಡ್ ತಂಡ ಚೇತರಿಸಿಕೊಂಡಿತು. ಡೇವಿಡ್ ಮಲನ್ 14 ರನ್ ಸಿಡಿಸಿ ಔಟಾದರು. ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ರಾಯ್ 40 ರನ್ ಸಿಡಿಸಿ ಔಟಾದರು.

ಜಾನಿ ಬೈರ್‌ಸ್ಟೋ ಹಾಗೂ ಬೆನ್ ಸ್ಟೋಕ್ಸ್ ಜೊತೆಯಾಟದಿಂದ ಇಂಗ್ಲೆಂಡ್ ಕೊಂಚ ಚೇತರಿಸಿಕೊಂಡಿತು. ಬೈರ್‌ಸ್ಟೋ 25 ರನ್ ಕಾಣಿಕೆನ ನೀಡಿದರೆ. ಆದರೆ ಬೆನ್ ಸ್ಟೋಕ್ಸ್ 46 ರನ್ ಸಿಡಿಸೋ ಮೂಲಕ ಇಂಗ್ಲೆಂಡ್ ತಂಡದ ಸರಣಿ ಗೆಲುವಿನ ಕನಸಿಗೆ ಮತ್ತಷ್ಟು ಪುಷ್ಠಿ ನೀಡಿದರು.

ಸ್ಟೋಕ್ಸ್ ಬೆನ್ನಲ್ಲೇ ಇಯಾನ್ ಮಾರ್ಗನ್ ವಿಕೆಟ್ ಪತನಗೊಂಡಿತು. ಇದು ಇಂಗ್ಲೆಂಡ್ ತಂಡಕ್ಕೆ ತೀವ್ರ ಹಿನ್ನಡೆ ತಂದಿತು. ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ ಟೀಂ ಇಂಡಿಯಾ, ಆಂಗ್ಲರ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಯಿತು. ಬಿರುಸಿನ ಆಟಕ್ಕೆ ಮುಂದಾದ ಇಂಗ್ಲೆಂಡ್ ವಿಕೆಟ್ ಕಳೆದುಕೊಂಡಿತು. 

ಅಂತಿಮ ಹಂತದಲ್ಲಿ ಕ್ರಿಸ್ ಜೋರ್ಡನ್ ಹಾಗೂ ಜೋಫ್ರಾ ಆರ್ಚರ್ ಬ್ಯಾಟಿಂಗ್ ಟೀಂ ಇಂಡಿಯಾದಲ್ಲಿ ಆತಂಕ ತಂದಿತು. ಅದರಲ್ಲೂ ಅಂತಿಮ ಓವರ್‌ನಲ್ಲಿ ಬೌಂಡರಿ ಹಾಗೂ ಸಿಕ್ಸರ್ ಮೂಲಕ ಆರ್ಚರ್ ಪಂದ್ಯಕ್ಕೆ ತಿರುವು ನೀಡುವ ಪ್ರಯತ್ನ ಮಾಡಿದರು. ಆದರೆ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡು 177 ರನ್ ಸಿಡಿಸಿತು. ಇದರೊಂದಿಗೆ ಟೀಂ ಇಂಡಿಯಾ 8 ರನ್ ಗೆಲುವು ಕಂಡಿತು. ಸರಣಿ ಇದೀಗ 2-2 ಅಂತರದಲ್ಲಿ ಸಮಬಲಗೊಂಡಿದೆ.