* ಟೀಂ ಇಂಡಿಯಾ ಆಟಗಾರರ ಪರ ಬ್ಯಾಟ್‌ ಬೀಸಿದ ಗಂಗೂಲಿ* ಆಟಗಾರರ ಭಾವನೆಗಳಿಗೆ ಬೆಲೆ ಕೊಡಬೇಕು ಎಂದ ದಾದಾ* ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 5ನೇ ಟೆಸ್ಟ್‌ ರದ್ದಾಗಿತ್ತು

ನವದೆಹಲಿ(ಸೆ.13): ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಟೀಂ ಇಂಡಿಯಾ ಆಟಗಾರರು ಮ್ಯಾಂಚೆಸ್ಟರ್ ಟೆಸ್ಟ್‌ ಪಂದ್ಯವನ್ನು ತಪ್ಪಿಸಿಕೊಳ್ಳಲಿಲ್ಲ, ಬದಲಾಗಿ ಕೋವಿಡ್ ಭೀತಿಯಿಂದಾಗಿ ಇಂಗ್ಲೆಂಡ್ ವಿರುದ್ದದ 5ನೇ ಟೆಸ್ಟ್‌ ಪಂದ್ಯದಲ್ಲಿ ಪಾಲ್ಗೊಳ್ಳಲು ನಮ್ಮ ಆಟಗಾರರು ಹಿಂದೇಟು ಹಾಕಿದರು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಕೊನೆಯ ಟೆಸ್ಟ್ ಪಂದ್ಯ ಆರಂಭಕ್ಕೆ ಕೇವಲ 2 ಗಂಟೆಗಳು ಬಾಕಿ ಇದ್ದಾಗ ಕೊನೆಯ ಕ್ಷಣದಲ್ಲಿ ಪಂದ್ಯ ದಿಢೀರ್ ರದ್ದಾಗಿತ್ತು. ಕಳೆದ ಶುಕ್ರವಾರದಿಂದ ಮ್ಯಾಂಚೆಸ್ಟರ್ ಟೆಸ್ಟ್‌ ಪಂದ್ಯವು ಆರಂಭವಾಗಬೇಕಿತ್ತು. ಸದ್ಯ ಟೀಂ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದೆ. 5ನೇ ಟೆಸ್ಟ್‌ ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಹೆಡ್‌ ಕೋಚ್‌ ರವಿಶಾಸ್ತ್ರಿ ಸೇರಿದಂತೆ ಸಹಾಯಕ ಸಿಬ್ಬಂದಿಗಳಿಗೆ ಕೋವಿಡ್‌ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಮ್ಯಾಂಚೆಸ್ಟರ್ ಟೆಸ್ಟ್‌ ಪಂದ್ಯ ಆರಂಭದ ಕುರಿತಂತೆ ಅನಿಶ್ಚಿತತೆ ಮುಂದುವರೆದಿತ್ತು. 

ಕೊಹ್ಲಿ ಸೈನ್ಯಕ್ಕೆ ಕೊರೋನಾ ಆತಂಕ; ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯ ರದ್ದು!

ಆಟಗಾರರು 5ನೇ ಟೆಸ್ಟ್‌ ಪಂದ್ಯವನ್ನು ಆಡಲು ವಿರೋಧಿಸಿದರು, ಹಾಗಂತ ಅವರನ್ನು ಟೀಕಿಸುವುದು ಸರಿಯಲ್ಲ. ತಂಡದ ಫಿಸಿಯೋ ಯೋಗೇಶ್ ಪರ್ಮಾರ್‌ ಆಟಗಾರರ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಇನ್ನು ನಿತಿನ್ ಪಟೇಲ್ ಕೂಡಾ ಐಸೋಲೇಷನ್‌ಗೆ ಒಳಗಾಗಿದ್ದರು. ತಂಡದ ಹೆಡ್‌ ಕೋಚ್‌ ರವಿಶಾಸ್ತ್ರಿಗೆ ಕೋವಿಡ್ ದೃಢಪಡುತ್ತಿದ್ದಂತೆಯೇ ಆಟಗಾರರು ಕಂಗಾಲಾಗಿ ಹೋಗಿದ್ದರು. ಆಟಗಾರರ ಭಾವನೆಗಳು ನಾವು ಬೆಲೆ ಕೊಡಬೇಕಾಗುತ್ತದೆ ಎಂದು ಕೋಲ್ಕತ ಮೂಲದ ಪತ್ರಿಕೆ ಟೆಲಿಗ್ರಾಫ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಆರಂಭವಾಗಲಿರುವ ಐಪಿಎಲ್‌ ಭಾಗ-2ನಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್‌ ವಿರುದ್ದದ 5ನೇ ಟೆಸ್ಟ್‌ನಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದರು ಎಂದು ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್ ವಾನ್ ಟೀಕಿಸಿದ್ದರು.