* ಮತ್ತೊಮ್ಮೆ ಮೋಜಿನ ಸಂಗತಿಗೆ ಸಾಕ್ಷಿಯಾದ ಡೆನಿಯಲ್‌ ‘ಜಾರ್ವೊ’* ರೋಹಿತ್ ವಿಕೆಟ್ ಪತನವಾಗುತ್ತಿದ್ದಂತೆಯೇ ಕ್ರೀಸ್‌ಗಿಳಿದ ಜಾರ್ವೊ* ಕೂಡಲೇ ಜಾರ್ವೊನನ್ನು ಸುತ್ತುವರೆದ ಸಿಬ್ಬಂದಿ ಆತನನ್ನು ಹೊರಕ್ಕೆ ಕಳುಹಿಸಿದ್ದಾರೆ

ಲೀಡ್ಸ್‌(ಆ.28): ಭಾರತ-ಇಂಗ್ಲೆಂಡ್‌ ನಡುವಿನ 3ನೇ ಟೆಸ್ಟ್‌ ಪಂದ್ಯದ ವೇಳೆ ಮೂರನೇ ದಿನ ಅತ್ಯಂತ ಮೋಜಿನ ಸಂಗತಿಗೆ ಸಾಕ್ಷಿಯಾಯಿತು. ಸಾಕಷ್ಟು ರೋಚಕತೆಯಿಂದ ಕೂಡಿರುವ ಪಂದ್ಯದ ನಡುವೆ ಕ್ರಿಕೆಟ್ ಅಭಿಮಾನಿಯೊಬ್ಬ ಬ್ಯಾಟಿಂಗ್ ಮಾಡಲಿಳಿದು ಎಲ್ಲರೂ ನಗೆಗಡಲಿನಲ್ಲಿ ತೇಲುವಂತೆ ಮಾಡಿದ್ದಾನೆ.

ಭಾರತದ ಆರಂಭಿಕ ಬ್ಯಾಟ್ಸಮನ್‌ ರೋಹಿತ್‌ ಶರ್ಮಾ ಔಟಾಗುತ್ತಿದ್ದಂತೆ, ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಭಾರತದ ಜೆರ್ಸಿ ಧರಿಸಿ ಡೆನಿಯಲ್‌ ‘ಜಾರ್ವೊ’ ಎಂಬಾತ ಹೆಲ್ಮೆಟ್‌, ಪ್ಯಾಡ್‌, ಮಾಸ್ಕ್‌ ಧರಿಸಿ ಬ್ಯಾಟ್‌ ಹಿಡಿದುಕೊಂಡು ಕ್ರೀಸಿಗೆ ಆಗಮಿಸಿದ. ಈತನನ್ನು ಕಂಡು ಆಟಗಾರರು ಒಂದು ಕ್ಷಣ ತಬ್ಬಿಬ್ಬಾದರು. ಕೂಡಲೇ ಜಾರ್ವೊನನ್ನು ಸುತ್ತುವರೆದ ಸಿಬ್ಬಂದಿ ಆತನನ್ನು ಹೊರಕ್ಕೆ ಕಳುಹಿಸಿದ್ದಾರೆ. ಜಾರ್ವೊ 2ನೇ ಪಂದ್ಯದಲ್ಲೂ ಭಾರತ ಫೀಲ್ಡಿಂಗ್‌ ಮಾಡುತ್ತಿದ್ದಾಗ ಇದೇ ರೀತಿಯ ಜೆರ್ಸಿ ಧರಿಸಿ ಮೈದಾನಕ್ಕೆ ಆಗಮಿಸಿ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದ. ಭಾರತ ಕ್ರಿಕೆಟ್‌ ತಂಡದ ಅಭಿಯಾನಿಯಾಗಿರುವ ಜಾರ್ವೊ, ಟೀಂ ಇಂಡಿಯಾ ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪೋಸ್ಟ್‌ ಮಾಡಿದ್ದಾನೆ.

ಟೀಂ ಇಂಡಿಯಾ ಪರ ಆಡಲು ಮೈದಾನಕ್ಕಿಳಿದ ಇಂಗ್ಲೆಂಡ್ ಅಭಿಮಾನಿ; ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ!

Scroll to load tweet…
Scroll to load tweet…

ಲೀಡ್ಸ್‌ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಕೇವಲ 78 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ನಾಯಕ ಜೋ ರೂಟ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 432 ರನ್‌ ಕಲೆಹಾಕಿತು. ಇದರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 354 ರನ್‌ಗಳ ಮುನ್ನಡೆ ಸಾಧಿಸಿತ್ತು. ಇನ್ನು ಭಾರೀ ಹಿನ್ನೆಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ದಿಟ್ಟ ಪೈಪೋಟಿ ನೀಡಿದ್ದು, ಮೂರನೇ ದಿನದಾಟದಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 215 ರನ್ ಬಾರಿಸಿದ್ದು, ಇನ್ನೂ 139 ರನ್‌ಗಳ ಹಿನ್ನೆಡೆಯಲ್ಲಿದೆ.