* ಇಂಗ್ಲೆಂಡ್‌ಗೆ ಆರಂಭಿಕ ಶಾಕ್ ನೀಡಿದ ಭಾರತದ ವೇಗಿಗಳು* ಖಾತೆ ತೆರೆಯುವ ಮುನ್ನವೇ ಮೂವರು ಬ್ಯಾಟರ್‌ಗಳು ಔಟ್* 17 ರನ್ ಗಳಿಸುವಷ್ಟರಲ್ಲಿ ನಾಲ್ವರು ಬ್ಯಾಟರ್‌ಗಳು ಔಟ್
ಲಂಡನ್(ಜು.12): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಇಂಗ್ಲೆಂಡ್ ತಂಡಕ್ಕೆ ಟೀಂ ಇಂಡಿಯಾ ವೇಗಿಗಳು ಬಿಗ್‌ಶಾಕ್ ನೀಡಿದ್ದಾರೆ. ಟೀಂ ಇಂಡಿಯಾ ಮಾರಕ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌ನ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದ್ದಾರೆ. ಇಂಗ್ಲೆಂಡ್ ತಂಡವು 7.5 ಓವರ್‌ಗಳ ಅಂತ್ಯದ ವೇಳೆಗೆ 26 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದೆ.
ಹೌದು, ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಇನಿಂಗ್ಸ್‌ನ ಎರಡನೇ ಓವರ್‌ನಲ್ಲೇ ಜಸ್ಪ್ರೀತ್ ಬುಮ್ರಾ ಜೇಸನ್ ರಾಯ್ ಹಾಗೂ ಜೋ ರೂಟ್ ವಿಕೆಟ್ ಕಬಳಿಸುವ ಮೂಲಕ ಶಾಕ್ ನೀಡಿದರು. ಈ ಇಬ್ಬರು ಬ್ಯಾಟರ್‌ಗಳನ್ನು ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದ್ದರು. ಟಿ20 ಸರಣಿಯ ವೈಫಲ್ಯ ಅನುಭವಿಸಿದ್ದ ಜೇಸನ್ ರಾಯ್ ಅವರ ಬ್ಯಾಡ್ ಫಾರ್ಮ್ ಏಕದಿನ ಸರಣಿಯಲ್ಲೂ ಮುಂದುವರೆದಿದೆ. ಜೇಸನ್ ರಾಯ್, ಬುಮ್ರಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರೇ, ಇದರ ಬೆನ್ನಲ್ಲೇ ಜೋ ರೂಟ್, ರಿಷಭ್ ಪಂತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಇನ್ನು ಟಿ20 ಸರಣಿಗೆ ವಿಶ್ರಾಂತಿ ಪಡೆದು ಏಕದಿನ ಸರಣಿಗೆ ತಂಡ ಕೂಡಿಕೊಂಡಿದ್ದ ಬೆನ್ ಸ್ಟೋಕ್ಸ್ ಕೂಡಾ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಸ್ಟೋಕ್ಸ್ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಟೆಸ್ಟ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಕಾಡಿದ್ದ ಜಾನಿ ಬೇರ್‌ಸ್ಟೋವ್ ಕೇವಲ 7 ರನ್ ಬಾರಿಸಿ ಜಸ್ಪ್ರೀತ್ ಬುಮ್ರಾಗೆ ಮೂರನೇ ಬಲಿಯಾದರು. ಇನ್ನು ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡಾ ಶೂನ್ಯ ಸುತ್ತುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಲಿವಿಂಗ್‌ಸ್ಟೋನ್ ಕೂಡಾ ಬುಮ್ರಾಗೆ ವಿಕೆಟ್ ಒಪ್ಪಿಸಿದ್ದಾರೆ.
Ind vs Eng: ಇಂಗ್ಲೆಂಡ್ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ
ಭಾರತ ಎದುರು ಅತಿ ಕಡಿಮೆ ಮೊತ್ತಕ್ಕೆ 5 ವಿಕೆಟ್ ಕಳೆದುಕೊಂಡ ಕುಖ್ಯಾತಿ ಇಂಗ್ಲೆಂಡ್ ಪಾಲು
ಇಂಗ್ಲೆಂಡ್ ತಂಡವು ಕೇವಲ 26 ರನ್‌ಗಳಿಗೆ 5 ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರತ ಎದುರು ಅತಿಕಡಿಮೆ ಮೊತ್ತಕ್ಕೆ ಮೊದಲ 5 ವಿಕೆಟ್ ಕಳೆದುಕೊಂಡ ತಂಡ ಎನ್ನುವ ಕುಖ್ಯಾತಿಗೆ ಇಂಗ್ಲೆಂಡ್ ತಂಡವು ಪಾತ್ರವಾಗಿದೆ. ಈ ಮೊದಲು 1997ರಲ್ಲಿ ಕೊಲಂಬೊದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತದೆದುರು 29 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಮುಖಭಂಗ ಅನುಭವಿಸಿತ್ತು. ಆದರೆ ಇದೀಗ ಆ ಕುಖ್ಯಾತಿ ಇದೀಗ ಇಂಗ್ಲೆಂಡ್ ಪಾಲಾಗಿದೆ.
