Ind vs Eng ಲೀಡ್ಸ್ ಟೆಸ್ಟ್: ಇಂಗ್ಲೆಂಡ್ ಆಲೌಟ್ @432, ರೂಟ್ ಪಡೆಗೆ 354 ರನ್‌ಗಳ ಮುನ್ನಡೆ
* ಲೀಡ್ಸ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 432 ರನ್‌ಗಳಿಗೆ ಆಲೌಟ್
* ಒಟ್ಟಾರೆ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ಗೆ 354 ರನ್‌ಗಳ ಮುನ್ನಡೆ
* 4 ವಿಕೆಟ್ ಕಬಳಿಸಿ ಮಿಂಚಿದ ಮೊಹಮ್ಮದ್ ಶಮಿ
ಲೀಡ್ಸ್(ಆ.27): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದ ಆರಂಭದಲ್ಲೇ ನಿರೀಕ್ಷೆಯಂತೆಯೆ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಇಂಗ್ಲೆಂಡ್ 432 ರನ್‌ಗಳಿಗೆ ಸರ್ವಪತನ ಕಂಡಿದ್ದು, ಒಟ್ಟಾರೆ ಮೊದಲ ಇನಿಂಗ್ಸ್‌ನಲ್ಲಿ 354 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಹೌದು, ಎರಡನೇ ದಿನದಾಟದಂತ್ಯದ ವೇಳೆಗೆ 8 ವಿಕೆಟ್ ಕಳೆದುಕೊಂಡು 423 ರನ್ ಬಾರಿಸಿದ್ದ ಇಂಗ್ಲೆಂಡ್ ತಂಡಕ್ಕೆ ಮೂರನೇ ದಿನದಾಟದ ಆರಂಭದಲ್ಲೇ ವೇಗಿ ಶಮಿ ಶಾಕ್ ನೀಡಿದರು. 42 ಎಸೆತಗಳಲ್ಲಿ 32 ರನ್ ಬಾರಿಸಿದ್ದ ಕ್ರೆಗ್ ಓವರ್‌ಟನ್‌ರನ್ನು ಬೌಲ್ಡ್ ಮಾಡಿ ಪೆವಿಲಿಯನ್ ಹಾದಿ ತೋರಿಸಿದರು. ಮರು ಓವರ್‌ನಲ್ಲೇ ಜಸ್ಪ್ರೀತ್ ಬುಮ್ರಾ ಓಲಿ ರಾಬಿನ್‌ಸನ್‌ರನ್ನು ಕ್ಲೀನ್ ಬೌಲ್ಡ್ ಮಾಡಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ಗೆ ತೆರೆ ಎಳೆದರು.
ಟೀಂ ಇಂಡಿಯಾ ಪರ ವೇಗಿ ಮೊಹಮ್ಮದ್ ಶಮಿ 4 ವಿಕೆಟ್ ಕಬಳಿಸಿದರೆ, ಬುಮ್ರಾ, ಜಡೇಜಾ ಹಾಗೂ ಸಿರಾಜ್ ತಲಾ 2 ವಿಕೆಟ್ ಕಬಳಿಸಿದರು. ಇಶಾಂತ್ ಶರ್ಮಾಗೆ ಯಾವುದೇ ವಿಕೆಟ್ ದಕ್ಕಲಿಲ್ಲ. ಇದೀಗ ಬೃಹತ್ ಹಿನ್ನಡೆ ಅನುಭವಿಸಿರುವ ಟೀಂ ಇಂಡಿಯಾ ಯಾವ ಪ್ರದರ್ಶನ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಕೇವಲ 78 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇದಕ್ಕುತ್ತರವಾಗಿ ಜೋ ರೂಟ್ ಆಕರ್ಷಕ ಶತಕ ಹಾಗೂ ಬರ್ನ್ಸ್, ಹಮೀದ್, ಮಲಾನ್ ಸಮಯೋಚಿತ ಅರ್ಧಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 432 ರನ್ ಗಳಿಸಿದೆ.