ಅಹಮದಾಬಾದ್(ಮಾ.16)‌: ಆರಂಭಿಕ ಆಘಾತದ ಬಳಿಕ ಪುಟಿದೆದ್ದು ಸರಣಿಯಲ್ಲಿ ಸಮಬಲ ಸಾಧಿಸಿದ ಭಾರತ, ಇಂಗ್ಲೆಂಡ್‌ ವಿರುದ್ಧ ಮಂಗಳವಾರ ಇಲ್ಲಿನ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ 3ನೇ ಟಿ20 ಪಂದ್ಯದಲ್ಲಿ ಮತ್ತೊಮ್ಮೆ ಅಬ್ಬರಿಸುವ ಉತ್ಸಾಹದಲ್ಲಿದೆ. ಅಂಜಿಕೆಯಿಲ್ಲದೆ ಆಟವಾಡಿ ಗೆಲುವು ಒಲಿಸಿಕೊಂಡಿದ್ದ ಕೊಹ್ಲಿ ಪಡೆ, ಅದೇ ಧೈರ್ಯದೊಂದಿಗೆ ಸರಣಿಯಲ್ಲಿ ಮುನ್ನಡೆಯುವ ವಿಶ್ವಾಸ ವ್ಯಕ್ತಪಡಿಸಿದೆ.

ಮೊದಲ ಪಂದ್ಯದಲ್ಲಿ ಎಲ್ಲಾ ಮೂರು ವಿಭಾಗಗಳಲ್ಲಿ ವೈಫಲ್ಯ ಕಂಡಿದ್ದ ಭಾರತ, 2ನೇ ಪಂದ್ಯದಲ್ಲಿ ಎಲ್ಲಾ ಮೂರು ವಿಭಾಗಗಳಲ್ಲೂ ಸುಧಾರಿತ ಪ್ರದರ್ಶನ ತೋರಿತ್ತು. ಯುವ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ ಸೇರ್ಪಡೆಯಿಂದಾಗಿ ತಂಡ ತನ್ನ ಆಟದ ಶೈಲಿಯಲ್ಲಿ ಹೊಸ ವಿಧಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಾಯಿತು. ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ರೋಹಿತ್‌ ಶರ್ಮಾ ತಂಡಕ್ಕೆ ವಾಪಸಾಗುವ ನಿರೀಕ್ಷೆ ಇದ್ದು, 2 ಪಂದ್ಯಗಳಲ್ಲೂ ವೈಫಲ್ಯ ಕಂಡ ಕೆ.ಎಲ್‌.ರಾಹುಲ್‌ ಹೊರ ಕೂರುವ ಸಾಧ್ಯತೆ ಇದೆ. ಇದನ್ನು ಹೊರತು ಪಡಿಸಿ ಭಾರತ ತಂಡದಲ್ಲಿ ಮತ್ತ್ಯಾವುದೇ ಬದಲಾವಣೆ ನಿರೀಕ್ಷೆ ಇಲ್ಲ. ವಿರಾಟ್‌ ಕೊಹ್ಲಿ ಲಯಕ್ಕೆ ಮರಳಿರುವುದು ಸಹಜವಾಗಿಯೇ ಎದುರಾಳಿ ಡ್ರೆಸ್ಸಿಂಗ್‌ ರೂಮ್‌ನಲ್ಲಿ ನಡುಕ ಹುಟ್ಟಿಸಿರುತ್ತದೆ. ರಿಷಭ್‌ ಪಂತ್‌ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡುತ್ತಿದ್ದಾರೆ. ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ ಫಿನಿಶರ್‌ಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತದ ಬ್ಯಾಟಿಂಗ್‌ ಪಡೆಯೂ ಇಂಗ್ಲೆಂಡ್‌ನಷ್ಟೇ ಸದೃಢ ಹಾಗೂ ಅಪಾಯಕಾರಿಯಾಗಿದೆ.

ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಆಘಾತ!

ಪಾಂಡ್ಯ 4 ಓವರ್‌ ಬೌಲ್‌ ಮಾಡುವಷ್ಟು ಫಿಟ್‌ ಆಗಿರುವುದು ಉತ್ತಮ ಬೆಳವಣಿಗೆ. ಇದರಿಂದಾಗಿ ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್‌ನನ್ನು ಆಡಿಸುವ ಸೌಕರ್ಯ ಸಿಗಲಿದೆ. ಬೌಲಿಂಗ್‌ ಟ್ರಂಪ್‌ ಕಾರ್ಡ್‌ ಯಜುವೇಂದ್ರ ಚಹಲ್‌ ಹೆಚ್ಚಾಗಿ ಆಫ್‌ಸ್ಟಂಪ್‌ನಿಂದ ಹೊರಕ್ಕೆ ಬೌಲ್‌ ಮಾಡುತ್ತಿದ್ದು, ದುಬಾರಿಯಾಗುತ್ತಿದ್ದಾರೆ. ಅವರು ತುರ್ತಾಗಿ ತಮ್ಮ ರಣತಂತ್ರವನ್ನು ಬದಲಿಸಿಕೊಳ್ಳಬೇಕಿದೆ. ಭುವನೇಶ್ವರ್‌, ಶಾರ್ದೂಲ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಕಳೆದ ಪಂದ್ಯದಲ್ಲಿ ಉತ್ತಮ ದಾಳಿ ಸಂಘಟಿಸಿದ್ದರು. ಸ್ಥಿರತೆ ಕಾಯ್ದುಕೊಳ್ಳುವ ಒತ್ತಡ ಭಾರತೀಯ ಬೌಲರ್‌ಗಳ ಮೇಲಿರೋದು ಸುಳ್ಳಲ್ಲ.

ವುಡ್‌ ವಾಪಸ್‌: ಹಿಮ್ಮಡಿ ನೋವಿನಿಂದಾಗಿ 2ನೇ ಪಂದ್ಯವನ್ನು ತಪ್ಪಿಸಿಕೊಂಡಿದ್ದ ವೇಗಿ ಮಾರ್ಕ್ ವುಡ್‌ ಈ ಪಂದ್ಯದಲ್ಲಿ ಆಡಲಿದ್ದಾರೆ. ಅವರ ಅನುಪಸ್ಥಿತಿ ತಂಡವನ್ನು ಬಹುವಾಗಿ ಕಾಡಿತ್ತು. ಜೇಸನ್‌ ರಾಯ್‌ ಎರಡೂ ಪಂದ್ಯಗಳಲ್ಲಿ ಆಕರ್ಷಕ ಆಟವಾಡಿದರೂ ಅರ್ಧಶತಕದಿಂದ ವಂಚಿತರಾಗಿದ್ದರು. ಇಂಗ್ಲೆಂಡ್‌ ತಂಡ ಮ್ಯಾಚ್‌ ವಿನ್ನರ್‌ಗಳಿಂದ ತುಂಬಿ ತುಳುಕುತ್ತಿದ್ದು, ಭಾರತಕ್ಕೆ ನಿಶ್ಚಿತವಾಗಿ ಪ್ರಬಲ ಪೈಪೋಟಿ ಎದುರಾಗಲಿದೆ.

ಪಿಚ್‌ ರಿಪೋರ್ಟ್‌: ಕೆಂಪು ಮಣ್ಣಿನಿಂದ ಕೂಡಿರುವ ಪಿಚ್‌ನಲ್ಲಿ ಪಂದ್ಯ ನಡೆಯಲಿದ್ದು, ಸ್ಪಿನ್ನರ್‌ಗಳು ಬ್ಯಾಟ್ಸ್‌ಮನ್‌ಗಳ ಕೌಶಲ್ಯ ಪರೀಕ್ಷಿಸಲಿದ್ದಾರೆ. ದೈತ್ಯ ಬ್ಯಾಟ್ಸ್‌ಮನ್‌ಗಳಿದ್ದರೂ ದೊಡ್ಡ ಮೊತ್ತ ದಾಖಲಾಗುತ್ತಿಲ್ಲ. ಹೀಗಾಗಿ ಕ್ರೀಸ್‌ನಲ್ಲಿ ನೆಲೆಯೂರಿ ಆಡುವ ಬ್ಯಾಟ್ಸ್‌ಮನ್‌ಗಳು ಪಂದ್ಯದ ಗತಿ ಬದಲಿಸಲಿದ್ದಾರೆ. ಸಂಜೆ ಬಳಿಕ ಇಬ್ಬನಿ ಬೀಳುವ ಸಾಧ್ಯತೆ ಇದ್ದು, ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳಲಿದೆ.

ಸಂಭವನೀಯ ತಂಡಗಳು

ಭಾರತ: ರೋಹಿತ್‌/ರಾಹುಲ್‌, ಇಶಾನ್‌ ಕಿಶನ್‌, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ಶಾರ್ದೂಲ್‌ ಠಾಕೂರ್‌, ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಹಲ್‌.

ಇಂಗ್ಲೆಂಡ್‌: ಜೇಸನ್‌ ರಾಯ್‌, ಜೋಸ್‌ ಬಟ್ಲರ್‌, ಡೇವಿಡ್‌ ಮಲಾನ್‌, ಜಾನಿ ಬೇರ್‌ಸ್ಟೋವ್‌, ಇಯಾನ್‌ ಮೊರ್ಗನ್‌(ನಾಯಕ), ಬೆನ್‌ ಸ್ಟೋಕ್ಸ್‌, ಸ್ಯಾಮ್‌ ಕರ್ರನ್‌, ಕ್ರಿಸ್‌ ಜೋರ್ಡನ್‌, ಜೋಫ್ರಾ ಆರ್ಚರ್‌, ಆದಿಲ್‌ ರಶೀದ್‌, ಮಾರ್ಕ್ ವುಡ್‌.

ಸ್ಥಳ: ಅಹಮದಾಬಾದ್‌
ಪಂದ್ಯ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್