ಅಹಮದಾಬಾದ್(ಫೆ.04): ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ನಾಲ್ಕನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯದ ಮೊದಲ ದಿನದ ಗೌರವಕ್ಕೆ ಟೀಂ ಇಂಡಿಯಾ ಪಾತ್ರವಾಗಿದೆ. 
ಇಂಗ್ಲೆಂಡ್‌ ತಂಡವನ್ನು 205 ರನ್‌ಗಳಿಗೆ ಆಲೌಟ್‌ ಮಾಡಿದ ಭಾರತ, ಮೊದಲ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 24 ರನ್‌ ಬಾರಿಸಿದೆ.

ಹೌದು, ಟೀಂ ಇಂಡಿಯಾ ಸ್ಪಿನ್ನರ್‌ಗಳ ಕೈ ಚಳಕದ ಮುಂದೆ ಜೋ ರೂಟ್ ನೇತೃತ್ವದ ಇಂಗ್ಲೆಂಡ್‌ ತಂಡ ಮತ್ತೊಮ್ಮೆ ಮಂಡಿಯೂರಿದೆ. ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ತಂಡಕ್ಕೆ ಲೋಕಲ್‌ ಹೀರೋ ಅಕ್ಷರ್‌ ಪಟೇಲ್ ಶಾಕ್‌ ನೀಡಿದರು. ಇಂಗ್ಲೆಂಡ್ 30 ರನ್‌ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಸೇರಿದ್ದರು. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್‌(55), ಜಾನಿ ಬೇರ್‌ಸ್ಟೋವ್‌(28), ಓಲಿ ಪೋಪ್‌(29) ಹಾಗೂ ಡೇನಿಯಲ್ ಲಾರೆನ್ಸ್‌(46) ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.

ಅಕ್ಷರ್ ಪಟೇಲ್‌ ಮ್ಯಾಜಿಕ್‌; ಇಂಗ್ಲೆಂಡ್ ಆಲೌಟ್‌ @205

ಸ್ಪಿನ್ನರ್‌ಗಳ ಮ್ಯಾಜಿಕ್‌: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಸ್ಪಿನ್‌ ಜಾದು ನಡೆದಿದ್ದು, ಭಾರತದ ಅಕ್ಷರ್ ಪಟೇಲ್‌, ರವಿಚಂದ್ರನ್ ಅಶ್ವಿನ್ ಹಾಗೂ ವಾಷಿಂಗ್ಟನ್‌ ಸುಂದರ್ ಮೂವರು ಸೇರಿ 8 ವಿಕೆಟ್‌ ಕಬಳಿಸುವ ಇಂಗ್ಲೆಂಡ್‌ ಬ್ಯಾಟಿಂಗ್‌ ಬೆನ್ನೆಲುಬನ್ನೇ ಮುರಿದರು. ಅಕ್ಷರ್ ಪಟೇಲ್‌ 4 ವಿಕೆಟ್‌ ಪಡೆದರೆ, ಅಶ್ವಿನ್‌ 3 ಹಾಗೂ ವಾಷಿಂಗ್ಟನ್ ಸುಂದರ್‌ ಒಂದು ವಿಕೆಟ್ ಪಡೆದರು. ಬುಮ್ರಾ ಬದಲು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಮೊಹಮ್ಮದ್ ಸಿರಾಜ್‌ 2 ವಿಕೆಟ್ ಪಡೆದು ಮಿಂಚಿದರು.

ಭಾರತಕ್ಕೆ ಮೊದಲ ಓವರ್‌ನಲ್ಲೇ ಶಾಕ್‌:

ಇನ್ನು ಇಂಗ್ಲೆಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಇಂಗ್ಲೆಂಡ್‌ ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ ಮೊದಲ ಓವರ್‌ನಲ್ಲೇ ಶಾಕ್‌ ನೀಡಿದರು. ಶುಭ್‌ಮನ್‌ ಗಿಲ್‌ ಶೂನ್ಯ ಸುತ್ತಿ ಆ್ಯಂಡರ್‌ಸನ್‌ಗೆ ವಿಕೆಟ್‌ ಒಪ್ಪಿಸಿದರು. ಸದ್ಯ ಚೇತೇಶ್ವರ್ ಪೂಜಾರ 15 ಹಾಗೂ ರೋಹಿತ್ ಶರ್ಮಾ 8 ರನ್‌ ಬಾರಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್:

ಇಂಗ್ಲೆಂಡ್‌: 205/10
ಭಾರತ: 24/1
(ಮೊದಲ ದಿನದಾಟ ಮುಕ್ತಾಯದ ವೇಳೆಗೆ)