ಅಹಮದಾಬಾದ್‌(ಮಾ.04): ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್‌ ಮೋಡಿಗೆ ಮತ್ತೊಮ್ಮೆ ಇಂಗ್ಲೆಂಡ್‌ ತಬ್ಬಿಬ್ಬಾಗಿದೆ. ನಾಲ್ಕನೇ ಟೆಸ್ಟ್ ಪಂದ್ಯದ ಇನಿಂಗ್ಸ್‌ನಲ್ಲಿ ಜೋ ರೂಟ್‌ ನೇತೃತ್ವದ ಇಂಗ್ಲೆಂಡ್‌ ತಂಡ ಕೇವಲ 205 ರನ್‌ಗಳಿಗೆ ಸರ್ವಪತನ ಕಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಅಕ್ಷರ್ ಪಟೇಲ್‌ ಆರಂಭದಲ್ಲೇ ಆಘಾತ ನೀಡಿದರು. ತಂಡದ ಮೊತ್ತ 30 ರನ್‌ಗಳಾಗುವಷ್ಟರಲ್ಲೇ ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ ಪೆವಿಲಿಯನ್ ಸೇರಿದ್ದರು. ಇದಾದ ಬಳಿಕ ಜಾನಿ ಬೇರ್‌ಸ್ಟೋವ್ ಹಾಗೂ ಬೆನ್ ಸ್ಟೋಕ್ಸ್‌ 48 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಬೇರ್‌ಸ್ಟೋವ್‌ 28 ರನ್‌ ಬಾರಿಸಿ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿದರು. 

ಅಹಮದಾಬಾದ್ ಟೆಸ್ಟ್; ಮತ್ತೆ ಮಿಂಚಿದ ಅಕ್ಷರ್ ಪಟೇಲ್‌

ಸ್ಟೋಕ್ಸ್‌-ಲಾರೆನ್ಸ್ ಕೆಚ್ಚೆದೆಯ ಆಟ: ಭಾರತೀಯ ಬೌಲರ್‌ಗಳ ಎದುರು ಬಹುತೇಕ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಪರೇಡ್ ನಡೆಸಿದರೆ ಬೆನ್ ಸ್ಟೋಕ್ಸ್ ಹಾಗೂ ಲಾರೆನ್ಸ್‌ ದಿಟ್ಟ ಹೋರಾಟ ನಡೆಸಿದರು. ಆರಂಭದ ಕೆಲವು ಟೆಸ್ಟ್‌ ಪಂದ್ಯಗಳಲ್ಲಿ ಬ್ಯಾಟಿಂಗ್‌ ಲಯ ಕಂಡುಕೊಳ್ಳಲು ಪರದಾಡಿದ್ದ ಸ್ಟೋಕ್ಸ್ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದಾರೆ. ಸ್ಟೋಕ್ಸ್ 121 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 55 ರನ್‌ ಬಾರಿಸಿ ವಾಷಿಂಗ್ಟನ್ ಸುಂದರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಡೇನಿಯಲ್ ಲಾರೆನ್ಸ್ 74 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 46 ರನ್‌ ಬಾರಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.

ಭಾರತ ಪರ ಅಕ್ಷರ್ ಪಟೇಲ್‌ 4 ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್‌ 3, ಮೊಹಮ್ಮದ್ ಸಿರಾಜ್‌ 2 ಹಾಗೂ ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದರು.