ಅಹಮದಾಬಾದ್‌ ಟೆಸ್ಟ್‌: ಪಂತ್ ಶತಕ, ಭಾರತಕ್ಕೆ 89 ರನ್‌ಗಳ ಮುನ್ನಡೆ

ಇಂಗ್ಲೆಂಡ್ ವಿರುದ್ದದ 4ನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಲ್ಲೂ ಟೀಂ ಇಂಡಿಯಾ ಮೇಲುಗೈ ಸಾಧಿಸಿದ್ದು, ದಿನದಾಟದಂತ್ಯಕ್ಕೆ 89 ರನ್‌ಗಳ ಮುನ್ನಡೆ ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Ind vs Eng 4th Ahmedabad Test Rishabh Pant Century Helps 89 runs Lead for Team India on day 2 kvn

ಅಹಮದಾಬಾದ್‌(ಮಾ.05): ರಿಷಭ್‌ ಪಂತ್ ಕೆಚ್ಚೆದೆಯ ಶತಕ ಹಾಗೂ ವಾಷಿಂಗ್ಟನ್ ಸುಂದರ್‌ ಸಮಯೋಚಿತ ಅರ್ಧಶತಕ(60*)ದ ನೆರವಿನಿಂದ ಇಂಗ್ಲೆಂಡ್‌ ವಿರುದ್ದದ 4ನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡು 294 ರನ್‌ ಗಳಿಸಿದ್ದು, ಒಟ್ಟಾರೆ 89 ರನ್‌ಗಳ ಮುನ್ನಡೆ ಸಾಧಿಸಿದೆ.

ಒಂದು ವಿಕೆಟ್‌ ಕಳೆದುಕೊಂಡು 24 ರನ್‌ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ(49) ಹೊರತುಪಡಿಸಿ ಉಳಿದೆಲ್ಲಾ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ವಿರಾಟ್ ಕೊಹ್ಲಿ ಶೂನ್ಯ ಸುತ್ತಿದರೆ, ಪೂಜಾರ 17, ರಹಾನೆ 27 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು.

ಟೀಂ ಇಂಡಿಯಾಗೆ ಆಸರೆಯಾದ ಪಂತ್-ಸುಂದರ್: ಒಂದು ಹಂತದಲ್ಲಿ 146 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್ ಹಾಗೂ ವಾಷಿಂಗ್ಟನ್ ಸುಂದರ್ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಅದರಲ್ಲೂ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಪಂತ್ ವೃತ್ತಿಜೀವನದ 3ನೇ ಟೆಸ್ಟ್ ಶತಕ ಪೂರೈಸಿದರು. 118 ಎಸೆತಗಳನ್ನು ಎದುರಿಸಿದ ಪಂತ್ 13 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 101 ರನ್‌ ಬಾರಿಸಿ ಆಂಡರ್‌ಸನ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ಪಂತ್‌ಗೆ ಉತ್ತಮ ಸಾಥ್ ನೀಡಿದ ಸುಂದರ್‌ 117 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 60 ರನ್‌ ಬಾರಿಸಿ ಮೂರನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್‌: 205/10

ಭಾರತ: 294/7

(*ಎರಡನೇ ದಿನದಾಟದಂತ್ಯದ ವೇಳೆಗೆ)
 

Latest Videos
Follow Us:
Download App:
  • android
  • ios