Asianet Suvarna News Asianet Suvarna News

ರಾಜ್‌ಕೋಟ್‌ ಕದನಕ್ಕೆ ಭಾರತ vs ಇಂಗ್ಲೆಂಡ್ ಸನ್ನದ್ಧ..!

ಹೈದರಾಬಾದ್‌ನ ಮೊದಲ ಟೆಸ್ಟ್‌ನಲ್ಲಿ ಆಘಾತಕಾರಿ ಸೋಲುಂಡಿದ್ದ ಭಾರತ, ವಿಶಾಖಪಟ್ಟಣಂನಲ್ಲಿ ಪ್ರವಾಸಿ ತಂಡಕ್ಕೆ ತಿರುಗೇಟು ನೀಡಿ ಸರಣಿ ಸಮಬಲಗೊಳಿಸಿತ್ತು. ಈ ನಡುವೆ ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌ ಸಂಪೂರ್ಣ ಸರಣಿಗೆ ಅಲಭ್ಯರಾಗಿದ್ದರೆ, ಕೆ.ಎಲ್‌.ರಾಹುಲ್‌ 3ನೇ ಪಂದ್ಯಕ್ಕೆ ಗೈರಾಗಲಿದ್ದಾರೆ. ಹೀಗಾಗಿ ಭಾರತಕ್ಕೆ ಸದ್ಯ ಪ್ರಮುಖ ಸವಾಲಾಗಿರುವುದು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌.

Ind vs Eng 3rd Test Team India ready to take on England in Rajkot kvn
Author
First Published Feb 15, 2024, 8:50 AM IST

ರಾಜ್‌ಕೋಟ್‌(ಫೆ.15): ಇಂಗ್ಲೆಂಡ್‌ ಸ್ಪಿನ್‌ ದಾಳಿಯನ್ನು ಎದುರಿಸುವುದು ಹೇಗೆ ಎಂಬ ತಲೆಬಿಸಿಯ ನಡುವೆಯೇ ತನ್ನ ಪ್ರಮುಖ ಬ್ಯಾಟರ್‌ಗಳ ಸೇವೆಯಿಂದ ವಂಚಿತರಾಗಿರುವ ಟೀಂ ಇಂಡಿಯಾ, ಗುರುವಾರದಿಂದ ಪ್ರವಾಸಿ ತಂಡದ ವಿರುದ್ಧ 3ನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಅನನುಭವಿ ಬ್ಯಾಟಿಂಗ್‌ ಪಡೆಯೊಂದಿಗೆ ಪಂದ್ಯಕ್ಕೆ ಕಾಲಿಡಲಿರುವ ಭಾರತ ಅಭೂತಪೂರ್ವ ಪ್ರದರ್ಶನ ನೀಡಿ ಸರಣಿಯಲ್ಲಿ ಮುನ್ನಡೆ ಸಾಧಿಸಲು ಎದುರು ನೋಡುತ್ತಿದೆ. ಭಾರತೀಯರನ್ನು ಅವರದೇ ತವರಿನಲ್ಲಿ ತನ್ನ ಸ್ಪಿನ್‌ ದಾಳಿ ಮೂಲಕ ಕಟ್ಟಿಹಾಕುತ್ತಿರುವ ಇಂಗ್ಲೆಂಡ್‌ ಕೂಡಾ ಸರಣಿ ಮುನ್ನಡೆಯನ್ನು 2-1 ಏರಿಸಲು ಕಾಯುತ್ತಿದೆ.

ಟಿ20 ವಿಶ್ವಕಪ್‌ಗೆ ಭಾರತ ತಂಡದ ನಾಯಕ ಹಾರ್ದಿಕ್ ಅಲ್ಲ, ಕ್ಯಾಪ್ಟನ್ ಹೆಸರು ಬಹಿರಂಗಪಡಿಸಿದ ಜಯ್ ಶಾ!

ಹೈದರಾಬಾದ್‌ನ ಮೊದಲ ಟೆಸ್ಟ್‌ನಲ್ಲಿ ಆಘಾತಕಾರಿ ಸೋಲುಂಡಿದ್ದ ಭಾರತ, ವಿಶಾಖಪಟ್ಟಣಂನಲ್ಲಿ ಪ್ರವಾಸಿ ತಂಡಕ್ಕೆ ತಿರುಗೇಟು ನೀಡಿ ಸರಣಿ ಸಮಬಲಗೊಳಿಸಿತ್ತು. ಈ ನಡುವೆ ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌ ಸಂಪೂರ್ಣ ಸರಣಿಗೆ ಅಲಭ್ಯರಾಗಿದ್ದರೆ, ಕೆ.ಎಲ್‌.ರಾಹುಲ್‌ 3ನೇ ಪಂದ್ಯಕ್ಕೆ ಗೈರಾಗಲಿದ್ದಾರೆ. ಹೀಗಾಗಿ ಭಾರತಕ್ಕೆ ಸದ್ಯ ಪ್ರಮುಖ ಸವಾಲಾಗಿರುವುದು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌.

ಯಶಸ್ವಿ ಜೈಸ್ವಾಲ್‌, ಶುಭ್‌ಮನ್‌ ಗಿಲ್‌ ಅಬ್ಬರಿಸುತ್ತಿದ್ದರೂ ರೋಹಿತ್‌ ಶರ್ಮಾ ಲಯದಲ್ಲಿಲ್ಲ. 4ನೇ ಕ್ರಮಾಂಕದ ಬಳಿಕ ಯಾರೂ ಅನುಭವಿಗಳಿಲ್ಲ. ರಜತ್‌ ಪಾಟೀದಾರ್‌ ಕೇವಲ 1 ಪಂದ್ಯ ಆಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಮುಂಬೈನ ಯುವ ತಾರೆ ಸರ್ಫರಾಜ್‌ ಖಾನ್‌ ಪಾದಾರ್ಪಣೆ ನಿರೀಕ್ಷೆಯಲ್ಲಿದ್ದಾರೆ.

ಕೆ.ಎಲ್‌.ರಾಹುಲ್‌ ಬದಲು ಕರ್ನಾಟಕದ ದೇವದತ್‌ ಪಡಿಕ್ಕಲ್‌ ತಂಡ ಸೇರ್ಪಡೆಗೊಂಡಿದ್ದರೂ, ಸರ್ಫರಾಜ್‌ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಇನ್ನು, ಹಲವು ಅವಕಾಶಗಳ ಹೊರತಾಗಿಯೂ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿರುವ ವಿಕೆಟ್‌ ಕೀಪರ್‌ ಬ್ಯಾಟರ್‌ ಶ್ರೀಕರ್ ಭರತ್‌ ಬದಲು ಉತ್ತರ ಪ್ರದೇಶದ ಧ್ರುವ್‌ ಜುರೆಲ್‌ ಪಾದಾರ್ಪಣೆ ಮಾಡುವ ನಿರೀಕ್ಷೆ ಇದೆ.

ಟೀಂ ಇಂಡಿಯಾ ಬ್ಯಾಟರ್‌ಗಳಿಗೆ ಶುರುವಾಗಿ ಇಂಗ್ಲೆಂಡ್ ಸ್ಪಿನ್ನರ್‌ಗಳ ಭೀತಿ..!

ಇನ್ನು, ರವೀಂದ್ರ ಜಡೇಜಾ ಈ ಪಂದ್ಯಕ್ಕೆ ಮರಳಲಿರುವ ಕಾರಣ ಬ್ಯಾಟಿಂಗ್‌ ವಿಭಾಗದಲ್ಲಿ ತಂಡಕ್ಕೆ ಬಲ ಸಿಗಬಹುದು. ಅಕ್ಷರ್‌ ಪಟೇಲ್‌ ಬದಲು ಕುಲ್ದೀಪ್‌ ಯಾದವ್‌ಗೆ ಆಯ್ಕೆ ಸಮಿತಿ ಮಣೆ ಹಾಕುವ ಸಾಧ್ಯತೆಯಿದೆ. ಕಳೆದ ಪಂದ್ಯಕ್ಕೆ ಗೈರಾಗಿದ್ದ ಮೊಹಮದ್ ಸಿರಾಜ್‌ ಕೂಡಾ ಈ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಪಿಚ್‌ನಲ್ಲಿ ಹೆಚ್ಚಿನ ತಿರುವು ಇಲ್ಲದ ಕಾರಣ ಭಾರತ ಈ ಪಂದ್ಯದಲ್ಲಿ ಇಬ್ಬರು ತಜ್ಞ ವೇಗಿಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು.

ಬಶೀರ್‌ ಬದಲು ವುಡ್‌ 

ಇಂಗ್ಲೆಂಡ್‌ ತಂಡ 3ನೇ ಪಂದ್ಯಕ್ಕೆ ಈಗಾಗಲೇ ತಂಡ ಘೋಷಿಸಿದ್ದು, ವೇಗಿ ಮಾರ್ಕ್‌ ವುಡ್‌ ತಂಡಕ್ಕೆ ಮರಳಿದ್ದಾರೆ. ಕಳೆದ ಪಂದ್ಯದ ಮೂಲಕ ಇಂಗ್ಲೆಂಡ್‌ ಪರ ಪಾದಾರ್ಪಣೆ ಮಾಡಿದ್ದ ಯುವ ಸ್ಪಿನ್ನರ್‌ ಶೋಯೆಬ್‌ ಬಶೀರ್‌ ಈ ಪಂದ್ಯದಲ್ಲಿ ಹೊರಗುಳಿಯಲಿದ್ದಾರೆ.

ಒಟ್ಟು ಮುಖಾಮುಖಿ: 133

ಭಾರತ: 32

ಇಂಗ್ಲೆಂಡ್‌: 51

ಡ್ರಾ: 50

ಆಟಗಾರರ ಪಟ್ಟಿ:

ಭಾರತ(ಸಂಭವನೀಯ): ರೋಹಿತ್(ನಾಯಕ), ಜೈಸ್ವಾಲ್‌, ಗಿಲ್‌, ರಜತ್‌, ಸರ್ಫರಾಜ್‌, ಜಡೇಜಾ, ಜುರೆಲ್‌/ಭರತ್‌, ಅಶ್ವಿನ್‌, ಕುಲ್ದೀಪ್‌, ಬೂಮ್ರಾ, ಸಿರಾಜ್‌.

ಇಂಗ್ಲೆಂಡ್‌(ಅಂತಿಮ 11): ಕ್ರಾವ್ಲಿ, ಡಕೆಟ್‌, ಪೋಪ್‌, ರೂಟ್‌, ಬೇರ್‌ಸ್ಟೋವ್‌, ಸ್ಟೋಕ್ಸ್‌(ನಾಯಕ), ಫೋಕ್ಸ್‌, ರೆಹಾನ್‌, ಹಾರ್ಟ್ಲಿ, ವುಡ್‌, ಆ್ಯಂಡರ್‌ಸನ್‌.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ

ನೇರಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ.

ಪಿಚ್‌ ರಿಪೋರ್ಟ್‌: ರಾಜ್‌ಕೋಟ್‌ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ದೊಡ್ಡ ರನ್‌ ಹರಿದುಬರುವ ನಿರೀಕ್ಷೆಯಿದೆ. ಹಲವು ಪ್ರಥಮ ದರ್ಜೆ ಪಂದ್ಯಗಳಲ್ಲಿ 500+ ರನ್‌ ದಾಖಲಾದ ಉದಾಹರಣೆಯೇ ಹೆಚ್ಚು. ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳೂ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.
 

Follow Us:
Download App:
  • android
  • ios