ಪುಣೆ(ಮಾ.26): ಕನ್ನಡಿಗ ಕೆ.ಎಲ್‌. ರಾಹುಲ್‌ ಆಕರ್ಷಕ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ, ರಿಷಭ್‌ ಪಂತ್ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ ಕಳೆದುಕೊಂಡು ರನ್‌ ಬಾರಿಸಿದ್ದು, ಇಂಗ್ಲೆಂಡ್‌ಗೆ ಕಠಿಣ ಗುರಿ ನೀಡಿದೆ.

ಹೌದು, ಇಲ್ಲಿನ ಎಂಸಿಎ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ಆರಂಭದಲ್ಲೇ ಶಿಖರ್ ಧವನ್‌ ಹಾಗೂ ಹಾಗೂ ರೋಹಿತ್ ಶರ್ಮಾ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ತಂಡ 37 ರನ್‌ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು.

ಆಸರೆಯಾದ ಕೊಹ್ಲಿ-ರಾಹುಲ್ ಜತೆಯಾಟ: ಆರಂಭಿಕ ಆಘಾತಕ್ಕೊಳಗಾಗಿದ್ದ ಭಾರತ ತಂಡಕ್ಕೆ ಮೂರನೇ ವಿಕೆಟ್‌ಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಅಸರೆಯಾದರು. ಈ ಜೋಡಿ 141 ಎಸೆತಗಳನ್ನು ಎದುರಿಸಿ 121 ರನ್‌ಗಳ ಜತೆಯಾಟ ನಿಭಾಯಿಸಿತು. ನಾಯಕ ವಿರಾಟ್ ಕೊಹ್ಲಿ 79 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 66 ರನ್‌ ಬಾರಿಸಿ ಆದಿಲ್‌ ರಶೀದ್‌ಗೆ ವಿಕೆಟ್ ಒಪ್ಪಿಸಿದರು.

ಕನ್ನಡಿಗ ಕೆ.ಎಲ್‌. ರಾಹುಲ್‌ ಕೆಚ್ಚೆದೆಯ ಶತಕ

ರಾಹುಲ್ ಕೂಲ್ ಶತಕ, ಪಂತ್ ಅಬ್ಬರ: ವಿರಾಟ್ ಕೊಹ್ಲಿ ವಿಕೆಟ್‌ ಪತನದ ಬಳಿಕ ರಿಷಭ್‌ ಪಂತ್ ಹಾಗೂ ಕೆ.ಎಲ್‌. ರಾಹುಲ್‌ ಮತ್ತೊಂದು ಶತಕದ ಜತೆಯಾಟ ನಿಭಾಯಿಸಿದರು. ಸಾಕಷ್ಟು ಎಚ್ಚರಿಕೆ ಬ್ಯಾಟಿಂಗ್ ನಡೆಸಿದ ರಾಹುಲ್ 114 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 108 ರನ್‌ ಬಾರಿಸಿದರು. ಅಂದಹಾಗೆ ಇದು ರಾಹುಲ್ ವೃತ್ತಿಜೀವನದ 5ನೇ ಏಕದಿನ ಶತಕವಾಗಿದೆ. 
ಇನ್ನು ವಿಕೆಟ್‌ ಕೀಪರ್‌ ರಿಷಭ್ ಪಂತ್‌ ಅಕ್ಷರಶಃ ಅಬ್ಬರಿಸಿದ್ದು, ಕೇವಲ 40 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ ವಿಸ್ಪೋಟಕ 77 ರನ್‌ ಚಚ್ಚಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 16 ಎಸೆತಗಳಲ್ಲಿ 35 ರನ್‌ ಬಾರಿಸುವ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ಇಂಗ್ಲೆಂಡ್ ಪರ ರೀಸೆ ಟೋಪ್ಲೆ ಹಾಗೂ ಟಾಮ್ ಕರ್ರನ್‌ ತಲಾ 2 ವಿಕೆಟ್ ಪಡೆದರೆ, ಸ್ಯಾಮ್ ಕರ್ರನ್ ಹಾಗೂ ಆದಿಲ್ ರಶೀದ್‌ ತಲಾ ಒಂದೊಂದು ವಿಕೆಟ್ ಪಡೆದರು. 3 ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ ಟೀಂ 1-0 ಮುನ್ನಡೆ ಸಾಧಿಸಿದ್ದು, ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಇಂಗ್ಲೆಂಡ್ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಸಂಕ್ಷಿಪ್ತ ಸ್ಕೋರ್:

ಭಾರತ: 336/6
ಕೆ.ಎಲ್‌. ರಾಹುಲ್‌: 108
ರೀಸೆ ಟೋಪ್ಲೆ: 50/2

(* ಭಾರತದ ಬ್ಯಾಟಿಂಗ್‌ ಮುಕ್ತಾಯದ ವೇಳೆಗೆ)