Ind vs Ban ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಆಘಾತ, ಆರಂಭಿಕರಿಬ್ಬರೂ ಔಟ್..!
ಬಾಂಗ್ಲಾದೇಶ ಎದುರು ಎರಡನೇ ಏಕದಿನ ಪಂದ್ಯ ಗೆಲ್ಲಲು ಭಾರತಕ್ಕೆ 272 ರನ್‌ಗಳ ಗುರಿ
ಮೊದಲ 3 ಓವರ್‌ನೊಳಗಾಗಿ ಟೀಂ ಇಂಡಿಯಾ ಆರಂಭಿಕರು ಪೆವಿಲಿಯನ್ ಸೇರಿದ್ದಾರೆ
ಈಗಾಗಲೇ ಮೊದಲ ಪಂದ್ಯವನ್ನು ಸೋತಿರುವ ರೋಹಿತ್ ಶರ್ಮಾ ಪಡೆ
ಢಾಕಾ(ಡಿ.07): ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿರುವ 272 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿದೆ. ಟೀಂ ಇಂಡಿಯಾ 13 ರನ್ ಗಳಿಸುವಷ್ಟರಲ್ಲಿ ಆರಂಭಿರಿಬ್ಬರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಮೊದಲ 10 ಓವರ್ ಅಂತ್ಯದ ವೇಳೆಗೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು ಕೇವಲ 39 ರನ್ ಬಾರಿಸಿದ್ದು, ಕೊಂಚ ಆಘಾತಕ್ಕೊಳಗಾಗಿದೆ.
ಹೌದು, ಇಲ್ಲಿನ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯವು ಟೀಂ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ. ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಇದೀಗ ಆರಂಭಿಕ ವೈಫಲ್ಯ ಅನುಭವಿಸಿದೆ. ಹೆಬ್ಬೆರಳು ಗಾಯದ ಸಮಸ್ಯೆಯಿಂದಾಗಿ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿದಿಲ್ಲ. ಹೀಗಾಗಿ ಶಿಖರ್ ಧವನ್ ಜತೆ ಮಾಜಿ ನಾಯಕ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಿದರು. ಆದರೆ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಯಿತು. ಇನಿಂಗ್ಸ್‌ನ ಎರಡನೇ ಓವರ್‌ನಲ್ಲೇ ವಿರಾಟ್ ಕೊಹ್ಲಿ 5 ರನ್ ಬಾರಿಸಿ ಎಬೊದತ್ ಹೊಸೈನ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಶಿಖರ್ ಧವನ್ ಇದೀಗ ಮತ್ತೊಮ್ಮೆ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಧವನ್ 10 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಸಹಿತ 8 ರನ್ ಬಾರಿಸಿ ಮುಸ್ತಾಫಿಜುರ್ ರೆಹಮಾನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಟೀಂ ಇಂಡಿಯಾ ಮೊದಲ 3 ಓವರ್‌ನಲ್ಲೇ ಆರಂಭಿಕ ಬ್ಯಾಟರ್‌ಗಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿದೆ.
Ind vs Ban: ಕುಸಿದ ಬಾಂಗ್ಲಾಗೆ ಮೆಹದಿ ಹಸನ್ ಶತಕದಾಸರೆ, ಟೀಂ ಇಂಡಿಯಾಗೆ ಸ್ಪರ್ಧಾತ್ಮಕ ಗುರಿ
ಸದ್ಯ ಮೊದಲ 10 ಓವರ್‌ಗಳಲ್ಲಿ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 39 ರನ್ ಬಾರಿಸಿದ್ದು, ಶ್ರೇಯಸ್ ಅಯ್ಯರ್ 13 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಬಾಂಗ್ಲಾದೇಶ ತಂಡವು 69 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು. ಆದರೆ 7ನೇ ವಿಕೆಟ್‌ಗೆ ಮೆಹದಿ ಹಸನ್ ಹಾಗೂ ಮೊಹಮದುಲ್ಲಾ 148 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮೊಹಮದುಲ್ಲಾ 96 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 77 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮೆಹದಿ ಹಸನ್ ಅಜೇಯ 100 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಬಾಂಗ್ಲಾದೇಶ ತಂಡವು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 271 ರನ್ ಕಲೆಹಾಕಿತು.
ಭಾರತ ಪರ ವಾಷಿಂಗ್ಟನ್ ಸುಂದರ್ 3 ವಿಕೆಟ್ ಪಡೆದರೆ, ವೇಗಿಗಳಾದ ಉಮ್ರಾನ್ ಮಲಿಕ್ ಹಾಗೂ ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಕಬಳಿಸಿದರು.