* ಮೊದಲ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಟೀಂ ಇಂಡಿಯಾ ಬಿಗಿ ಹಿಡಿತ* ಒಟ್ಟಾರೆ 290 ರನ್‌ಗಳ ಮುನ್ನಡೆ ಗಳಿಸಿರುವ ಟೀಂ ಇಂಡಿಯಾ* 5 ವಿಕೆಟ್ ಕಬಳಿಸಿ ಮಿಂಚಿದ ಕುಲ್ದೀಪ್ ಯಾದವ್

ಚಿತ್ತಗಾಂಗ್(ಡಿ.16): ಕುಲ್ದೀಪ್ ಯಾದವ್ ಮಿಂಚಿನ ದಾಳಿ ಹಾಗೂ ಆರಂಭಿಕ ಬ್ಯಾಟರ್‌ಗಳ ಆಕರ್ಷಕ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ ಮೊದಲ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದ ಆರಂಭದಲ್ಲೇ ಆತಿಥೇಯ ಬಾಂಗ್ಲಾದೇಶ ಎದುರು ಬಿಗಿ ಹಿಡಿತ ಸಾಧಿಸಿದೆ. ಬಾಂಗ್ಲಾದೇಶ ತಂಡವನ್ನು ಕೇವಲ 150 ರನ್‌ಗಳಿಗೆ ಕಟ್ಟಿಹಾಕಿದ ಟೀಂ ಇಂಡಿಯಾ ಇದೀಗ ಎರಡನೇ ಇನಿಂಗ್ಸ್‌ ಆರಂಭಿಸಿದ್ದು, ಮೂರನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ 36 ರನ್‌ ಬಾರಿಸಿದ್ದು, ಒಟ್ಟಾರೆ 290 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.

ಎರಡನೇ ದಿನದಾಟದಂತ್ಯದ ವೇಳೆಗೆ 8 ವಿಕೆಟ್ ಕಳೆದುಕೊಂಡು 133 ರನ್‌ ಗಳಿಸಿದ್ದ ಬಾಂಗ್ಲಾದೇಶ ತಂಡವು, ಮೂರನೇ ದಿನದಾಟದ ಆರಂಭದಲ್ಲಿ ತನ್ನ ಖಾತೆಗೆ ಕೇವಲ 17 ರನ್‌ ಸೇರಿಸಿ ಸರ್ವಪತನ ಕಂಡಿತು. ಎಬೊದತ್ ಹೊಸೈನ್‌ 17 ರನ್‌ ಬಾರಿಸಿ ಕುಲ್ದೀಪ್‌ ಯಾದವ್‌ಗೆ ವಿಕೆಟ್‌ ಒಪ್ಪಿಸಿದರು. ಇದು ಕುಲ್ದೀಪ್ ಯಾದವ್ ಪಾಲಿಗೆ 5ನೇ ವಿಕೆಟ್ ಎನಿಸಿಕೊಂಡಿತು. ಈ ಮೂಲಕ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ ಮೂರನೇ ಬಾರಿಗೆ 5+ ವಿಕೆಟ್ ಕಬಳಿಸುವಲ್ಲಿ ಕುಲ್ದೀಪ್ ಯಾದವ್ ಯಶಸ್ವಿಯಾದರು. ಇನ್ನು ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು ಕಾಡಿದ್ದ ಮೆಹದಿ ಹಸನ್ ಮಿರಜ್‌ 25 ರನ್‌ ಬಾರಿಸಿ ಅಕ್ಷರ್‌ ಪಟೇಲ್‌ಗೆ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಇದರೊಂದಿಗೆ ಟೀಂ ಇಂಡಿಯಾ, 254 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಿತು. 

ಇನ್ನು ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿರುವ ಟೀಂ ಇಂಡಿಯಾ ಆರಂಭಿಕರಾದ ನಾಯಕ ಕೆ ಎಲ್ ರಾಹುಲ್ ಹಾಗೂ ಶುಭ್‌ಮನ್‌ ಗಿಲ್‌ ಎಚ್ಚರಿಕೆಯ ಆರಂಭ ಒದಗಿಸಿಕೊಟ್ಟಿದ್ದಾರೆ. ಮೂರನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ 36 ರನ್‌ ಗಳಿಸಿದೆ. ನಾಯಕ ಕೆ ಎಲ್ ರಾಹುಲ್ ಅಜೇಯ 20 ರನ್ ಬಾರಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್‌ ಅಜೇಯ 15 ರನ್ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.