ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಡಿಸೆಂಬರ್ 14ರಿಂದ ಆರಂಭರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ಕೆ ಎಲ್ ರಾಹುಲ್ರಿಷಭ್ ಪಂತ್ ಬದಲಿಗೆ ಚೇತೇಶ್ವರ್ ಪೂಜಾರಗೆ ಒಲಿದ ನಾಯಕ ಪಟ್ಟ

ಢಾಕಾ(ಜ.13): ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 14ರಿಂದ ಆರಂಭವಾಗಲಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ ಎಲ್ ರಾಹುಲ್‌, ನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದು, ಉಪನಾಯಕನನ್ನಾಗಿ ಟೆಸ್ಟ್ ಸ್ಪೆಷಲಿಸ್ಟ್‌ ಚೇತೇಶ್ವರ್ ಪೂಜಾರ ಅವರನ್ನು ಬಿಸಿಸಿಐ ನೇಮಕ ಮಾಡಿದೆ. ಇದು ವಿಕೆಟ್‌ ಕೀಪರ್ ಬ್ಯಾಟರ್ ರಿಷಭ್ ಪಂತ್ ಪಾಲಿಗೆ ಎಚ್ಚರಿಕೆಯ ಗಂಟೆ ಎಂದೇ ಬಿಂಬಿತವಾಗುತ್ತಿದೆ.

ಈ ಮೊದಲು ರಿಷಭ್ ಪಂತ್‌ ಅವರನ್ನು ಭಾರತದ ಭವಿಷ್ಯದ ನಾಯಕ ಎಂದು ಬಿಂಬಿಸಲಾಗಿತ್ತು. ಕೆಲ ಏಕದಿನ ಸರಣಿಯಲ್ಲಿ ರಿಷಭ್ ಪಂತ್, ನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. 2022ರ ಐಪಿಎಲ್ ಮುಗಿಯುತ್ತಿದ್ದಂತೆಯೇ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು.

ಟೀಂ ಇಂಡಿಯಾದ ಭವಿಷ್ಯದ ನಾಯಕ ಎಂದೇ ಬಿಂಬಿಸಲ್ಪಟ್ಟಿರುವ ರಿಷಭ್ ಪಂತ್, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರನ್‌ ಬರ ಅನುಭವಿಸುತ್ತಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪಂತ್‌, ಇದೀಗ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ಟೆಸ್ಟ್ ತಂಡದ ಉಪನಾಯಕರಾಗಬಹುದು ಎಂದೇ ಭಾವಿಸಲಾಗಿತ್ತು. ಆದರೆ ಇದೀಗ ಅಚ್ಚರಿಯ ಬೆಳವಣಿಗೆ ಎನ್ನುವಂತೆ ಸೌರಾಷ್ಟ್ರ ಮೂಲದ ಚೇತೇಶ್ವರ್ ಪೂಜಾರ ಅವರಿಗೆ ಭಾರತ ಟೆಸ್ಟ್ ತಂಡದ ಉಪನಾಯಕ ಪಟ್ಟ ಕಟ್ಟಲಾಗಿದ್ದು, ಇದು ಪಂತ್‌ ಪಾಲಿಗೆ ಎಚ್ಚರಿಕೆ ಕರೆಗಂಟೆ ಎಂದೇ ವಿಶ್ಲೇಷಣೆಗಳು ನಡೆಯುತ್ತಿವೆ. 

Multan Test ಇಂಗ್ಲೆಂಡ್‌ ಎದುರು ರೋಚಕ ಸೋಲುಂಡ ಪಾಕ್‌, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ರೇಸ್‌ನಿಂದ ಔಟ್..!

ಮೊದಲ ಟೆಸ್ಟ್‌ ಪಂದ್ಯಕ್ಕೂ ಮುನ್ನ ಪರಿಷ್ಕೃತ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸುವಾಗ, ಬಿಸಿಸಿಐ, 25 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ಅವರನ್ನು ಕಡೆಗಣಿಸಿ ಚೇತೇಶ್ವರ್ ಪೂಜಾರಗೆ ಉಪನಾಯಕ ಪಟ್ಟ ಕಟ್ಟಿದ್ದೇಕೆ ಎನ್ನುವ ಬಗ್ಗೆ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ. ಇನ್ನು ಈ ಕುರಿತಂತೆ ಹಂಗಾಮಿ ನಾಯಕ ಕೆ ಎಲ್ ರಾಹುಲ್ ಅವರು ಪ್ರತಿಕ್ರಿಯೆ ನೀಡಿದ್ದು, "ರಿಷಭ್ ಪಂತ್ ಹಾಗೂ ಚೇತೇಶ್ವರ್ ಪೂಜಾರ ನಮ್ಮ ತಂಡದ ಪರ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಉಪನಾಯಕ ಪಟ್ಟ ಯಾರಿಗೆ ಯಾಕೆ ನೀಡಿದರು ಎನ್ನುವುದರ ಬಗ್ಗೆ ಹೆಚ್ಚು ಯೋಚಿಸಲು ಹೋಗುವುದಿಲ್ಲ. ನಾವೆಲ್ಲರು ಒಂದು ತಂಡವಾಗಿ ಆಡಲು ಎದುರು ನೋಡುತ್ತಿದ್ದೇವೆ ಎಂದು ಕೆ ಎಲ್ ರಾಹುಲ್ ಹೇಳಿದ್ದಾರೆ.

ಬಾಂಗ್ಲಾದೇಶ ಎದುರಿನ ಸರಣಿ ಟೀಂ ಇಂಡಿಯಾಗೆ ಮಹತ್ವ: ಟೀಂ ಇಂಡಿಯಾ, ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿಯ ಪ್ರಕಾರ ಇನ್ನೂ 6 ಟೆಸ್ಟ್ ಪಂದ್ಯಗಳನ್ನಾಡಲಿದ್ದು, ಈ ಪೈಕಿ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ, ಎಲ್ಲಾ ತಂಡಗಳನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಭಾರತ ತಂಡವು ಬಾಂಗ್ಲಾದೇಶ ವಿರುದ್ದ 2-0 ಹಾಗೂ ಆಸ್ಟ್ರೇಲಿಯಾ ವಿರುದ್ದ 4-0 ಅಥವಾ 3-1 ಅಥವಾ 3-0 ಅಂತರದಲ್ಲಿ ಗೆಲುವು ಸಾಧಿಸಿದರೂ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಆಡುವ ಅರ್ಹತೆಗಿಟ್ಟಿಸಿಕೊಳ್ಳಲಿದೆ.

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ

ಕೆ ಎಲ್ ರಾಹುಲ್(ನಾಯಕ), ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕೆ ಎಸ್ ಭರತ್, ರವೀಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಅಭಿಮನ್ಯು ಈಶ್ವರನ್, ನವದೀಪ್ ಸೈನಿ, ಸೌರಬ್ ಕುಮಾರ್, ಜಯದೇವ್ ಉನಾದ್ಕಟ್