Asianet Suvarna News Asianet Suvarna News

Ind vs Ban ಇಶಾನ್ ಕಿಶನ್ ದ್ವಿಶತಕ, ಕಿಂಗ್ ಕೊಹ್ಲಿ ಶತಕ; ಬಾಂಗ್ಲಾಗೆ ಕಠಿಣ ಗುರಿ ನೀಡಿದ ಭಾರತ

ಬಾಂಗ್ಲಾದೇಶ ಎದುರು ಆಕರ್ಷಕ ದ್ವಿಶತಕ ಚಚ್ಚಿದ ಇಶಾನ್ ಕಿಶನ್‌
ಮೂರನೇ ಏಕದಿನ ಪಂದ್ಯ ಗೆಲ್ಲಲು ಬಾಂಗ್ಲಾಗೆ 410 ರನ್‌ಗಳ ಗುರಿ
2019ರ ಬಳಿಕ ಏಕದಿನ ಶತಕ ಸಿಡಿಸಿದ ವಿರಾಟ್ ಕೊಹ್ಲಿ

Ind vs Ban India Set 410 Run target to Bangladesh After Virat Kohli Ishan Kishan Show kvn
Author
First Published Dec 10, 2022, 3:30 PM IST

ಛಟ್ಟೋಗ್ರಾಮ(ಡಿ.10): ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ದಾಖಲೆಯ ದ್ವಿಶತಕ(210) ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಬಾರಿಸಿದ ಆಕರ್ಷಕ ಶತಕ(113) ರನ್‌ಗಳ ನೆರವಿನಿಂದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 409 ರನ್‌ ಬಾರಿಸಿದ್ದು, ಆತಿಥೇಯ ಬಾಂಗ್ಲಾದೇಶಕ್ಕೆ ಕಠಿಣ ಗುರಿ ನೀಡಿದೆ.

ಇಲ್ಲಿನ ಝಹೂರ್ ಅಹಮದ್ ಚೌಧರಿ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಆರಂಭದಲ್ಲೇ ಅನುಭವಿ ಬ್ಯಾಟರ್ ಶಿಖರ್ ಧವನ್ ವಿಕೆಟ್‌ ಕಳೆದುಕೊಂಡಿತು. ಆರಂಭಿಕ ಬ್ಯಾಟರ್‌ ಶಿಖರ್ ಧವನ್ ಮೂರನೇ ಪಂದ್ಯದಲ್ಲೂ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ಶಿಖರ್ ಧವನ್ 8 ಎಸೆತಗಳನ್ನು ಎದುರಿಸಿ ಕೇವಲ 3 ರನ್‌ ರನ್ ಗಳಿಸಿ ಮೆಹದಿ ಹಸನ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು. ಟೀಂ ಇಂಡಿಯಾ 15 ರನ್‌ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು.

ಇಶಾನ್ ಕಿಶನ್ ದಾಖಲೆಯ ದ್ವಿಶತಕ: ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ್ದ ಇಶಾನ್ ಕಿಶನ್‌ 49 ಎಸೆತಗಳನ್ನು ಎದುರಿಸಿ ಅರ್ಧಶತಕವನ್ನು ಪೂರೈಸಿದರು. ಅರ್ಧಶಕ ಬಾರಿಸಿದ ಬಳಿಕ ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ಮೊರೆ ಹೋದರು. ಪರಿಣಾಮ ಕೇವಲ 85 ಎಸೆತಗಳಲ್ಲಿ ಇಶಾನ್ ಕಿಶನ್‌, ಚೊಚ್ಚಲ ಏಕದಿನ ಕ್ರಿಕೆಟ್ ಶತಕ ಸಿಡಿಸಿ ಸಂಭ್ರಮಿಸಿದರು. ಇಶಾನ್‌ ಕಿಶನ್‌ ಶತಕ ಬಾರಿಸುತ್ತಿದ್ದಂತೆಯೆ ಮತ್ತಷ್ಟು ಆಕ್ರಮಣಕಾರಿಯಾಟ ಆಡತೊಡಗಿದರು. 100ರಿಂದ 150 ರನ್ ಬಾರಿಸಲು ಇಶಾನ್ ಕಿಶನ್ ಕೇವಲ 18 ಎಸೆತಗಳನ್ನು ಮಾತ್ರ ತೆಗೆದುಕೊಂಡರು. ಇಶಾನ್ ಕಿಶನ್ ಕೇವಲ 103 ಎಸೆತಗಳನ್ನು ಎದುರಿಸಿ 150+ ರನ್ ಗಡಿ ದಾಟುವಲ್ಲಿ ಯಶಸ್ವಿಯಾದರು. ಬಾಲ್ ಇರುವುದೇ ದಂಡಿಸುವುದಕ್ಕೆ ಎನ್ನುವಂತೆ ಬ್ಯಾಟ್‌ ಬೀಸಿದ ಇಶಾನ್ ಕಿಶನ್ ಕೇವಲ 126 ಎಸೆತಗಳನ್ನು ಎದುರಿಸಿ 23 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ ಆಕರ್ಷಕ ದ್ವಿಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಇಶಾನ್ ಕಿಶನ್ 131 ಎಸೆತಗಳನ್ನು ಎದುರಿಸಿ 24 ಬೌಂಡರಿ ಹಾಗೂ 10 ಸಿಕ್ಸರ್ ಸಹಿತ 210 ರನ್ ಬಾರಿಸಿ ಟಸ್ಕಿನ್ ಅಹಮ್ಮದ್‌ಗೆ ವಿಕೆಟ್‌ ಒಪ್ಪಿಸಿದರು.

Ishan Kishan ದಾಖಲೆಯ ದ್ವಿಶತಕ ಸಿಡಿಸಿ ಅಬ್ಬರಿಸಿದ ಇಶಾನ್ ಕಿಶನ್‌..! ಬಾಂಗ್ಲಾದೇಶ ಕಂಗಾಲು

ಜೀವದಾನ ಬಳಸಿಕೊಂಡ ವಿರಾಟ್ ಕೊಹ್ಲಿ:  ಮಾಜಿ ನಾಯಕ ವಿರಾಟ್ ಕೊಹ್ಲಿ ಒಂದಂಕಿ ಮೊತ್ತ ದಾಖಲಿಸಿದ್ದಾಗಲೇ ವಿಕೆಟ್‌ ಒಪ್ಪಿಸುತ್ತಿದ್ದರು. ಆದರೆ ಮೆಹದಿ ಹಸನ್ ಬೌಲಿಂಗ್‌ನಲ್ಲಿ ಬಾಂಗ್ಲಾದೇಶ ನಾಯಕ ಲಿಟನ್ ದಾಸ್ ಸುಲಭ ಕ್ಯಾಚ್ ಕೈಚೆಲ್ಲಿದರು. ಇದರ ಸಂಪೂರ್ಣ ಲಾಭವನ್ನು ಬಳಸಿಕೊಳ್ಳುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾದರು. ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಆಫ್ಘಾನಿಸ್ತಾನ ಎದುರು ಕೊನೆಯ ಬಾರಿಗೆ ಶತಕವನ್ನು ಸಿಕ್ಸರ್ ಮೂಲಕ ಪೂರೈಸಿದ್ದ ವಿರಾಟ್ ಕೊಹ್ಲಿ, ಇದೀಗ ಏಕದಿನ ಕ್ರಿಕೆಟ್‌ನಲ್ಲೂ ಸಿಕ್ಸರ್‌ನೊಂದಿಗೆ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ವಿರಾಟ್ ಕೊಹ್ಲಿ 2019ರ ಆಗಸ್ಟ್‌ನಲ್ಲಿ ಕೊನೆಯ ಬಾರಿಗೆ ಶತಕ ಸಿಡಿಸಿದ್ದರು. ಇದೀಗ ಬರೋಬ್ಬರಿ 3 ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಿಮವಾಗಿ ವಿರಾಟ್ ಕೊಹ್ಲಿ 91 ಎಸೆತಗಳನ್ನುಎದುರಿಸಿ 11 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 113 ರನ್ ಬಾರಿಸಿ ಶಕೀಬ್ ಅಲ್ ಹಸನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಇನ್ನು ಕೊನೆಯಲ್ಲಿ ವಾಷಿಂಗ್ಟನ್ ಸುಂದರ್(37), ಅಕ್ಷರ್ ಪಟೇಲ್(20) ಚುರುಕಿನ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು ನಾನೂರರ ಗಡಿ ದಾಟಿಸಿದರು. ಬಾಂಗ್ಲಾದೇಶ ತಂಡದ ಪರ ಟಸ್ಕಿನ್ ಅಹಮ್ಮದ್, ಶಕೀಬ್ ಅಲ್ ಹಸನ್ ಹಾಗೂ ಎಬೊದತ್ ಹೊಸೈನ್ ತಲಾ 2 ವಿಕೆಟ್ ಪಡೆದರೆ, ಮುಸ್ತಾಫಿಜುರ್ ರೆಹಮಾನ್ ಹಾಗೂ ಮೆಹದಿ ಹಸನ್ ತಲಾ ಒಂದೊಂದು ವಿಕೆಟ್ ಪಡೆದರು.

Follow Us:
Download App:
  • android
  • ios