ಭಾರತ-ಆಸ್ಟ್ರೇಲಿಯಾ ನಡುವಿನ ಇಂದೋರ್ ಟೆಸ್ಟ್ ಮೂರು ದಿನಕ್ಕೆ ಮುಕ್ತಾಯಭಾರತ ಎದುರು 9 ವಿಕೆಟ್ ಜಯ ಸಾಧಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ತಂಡಮೂರು ದಿನಕ್ಕೆ ಮುಗಿದ ಪಂದ್ಯದ ಪಿಚ್ ಸಮರ್ಥಿಸಿಕೊಂಡ ರೋಹಿತ್ ಶರ್ಮಾ
ಇಂದೋರ್(ಮಾ.04): ಭಾರತ ವಿರುದ್ಧ 3ನೇ ಟೆಸ್ಟ್‌ನಲ್ಲಿ 9 ವಿಕೆಟ್ ಗೆಲುವು ಸಾಧಿಸಿದ ಆಸ್ಪ್ರೇಲಿಯಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಲಗ್ಗೆಯಿಟ್ಟಿದೆ. ಕಳೆದ 10 ವರ್ಷದಲ್ಲಿ ತವರಿನಲ್ಲಿ ಭಾರತಕ್ಕಿದು ಕೇವಲ 3ನೇ ಟೆಸ್ಟ್ ಸೋಲು. ಆದರೂ, ಈ ಪಂದ್ಯದಲ್ಲಿ ತಂಡದ ಪ್ರದರ್ಶನ ಅಭಿಮಾನಿಗಳಲ್ಲಿ ಭಾರೀ ನಿರಾಸೆಗೆ ಕಾರಣವಾಗಿದೆ.
ಮೊದಲೆರಡು ಟೆಸ್ಟ್‌ಗಳಂತೆ ಈ ಪಂದ್ಯವೂ ಮೂರು ದಿನಗಳೊಳಗೆ ಮುಕ್ತಾಯಗೊಂಡಿತು. ಸರಣಿಯಲ್ಲಿ ಭಾರತ 2-1ರಲ್ಲಿ ಮುಂದಿದ್ದು, ಆಸೀಸ್ ವಿರುದ್ಧ ಸತತ 4ನೇ ಸರಣಿ ಜಯ ಸಾಧಿಸಬೇಕಿದ್ದರೆ 4ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಗೆಲ್ಲಬೇಕಿದೆ. ಇನ್ನು ಪಂದ್ಯ ಮೂರೇ ದಿನಕ್ಕೆ ಮುಕ್ತಾಯವಾಗಿದ್ದರೂ, ಈ ವಿಚಾರವನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಮರ್ಥಿಸಿಕೊಂಡಿದ್ದಾರೆ.
ಭಾರತದಲ್ಲಿ ಕಳೆದ 10 ಟೆಸ್ಟ್‌ಗಳಲ್ಲಿ 6 ಪಂದ್ಯಗಳು ಮೂರೇ ದಿನಕ್ಕೆ ಮುಗಿದಿವೆ. ಒಂದು ಪಂದ್ಯ 2ನೇ ದಿನವೇ ಅಂತ್ಯಗೊಂಡಿತ್ತು. 2 ಪಂದ್ಯಗಳು 4ನೇ ದಿನ, 1 ಪಂದ್ಯ 5ನೇ ದಿನ ಅಂತ್ಯವಾಗಿವೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ, ‘ಭಾರತದಲ್ಲಿ ನಡೆಯುವ ಬಹುತೇಕ ಟೆಸ್ಟ್‌ಗಳು ಕೇವಲ 3 ದಿನಗಳಲ್ಲಿ ಮುಗಿಯುತ್ತದೆ ಏಕೆ?’ ಎನ್ನುವ ಪ್ರಶ್ನೆಗೆ ಉತ್ತರಿಸಿದ ರೋಹಿತ್, ‘ಪಂದ್ಯ 5 ದಿನ ನಡೆಯಲು ಆಟಗಾರರು ಉತ್ತಮ ಆಟವಾಡಬೇಕು. ಭಾರತದಾಚೆಗೂ ಪಂದ್ಯಗಳು 5 ದಿನ ನಡೆಯುತ್ತಿಲ್ಲ. ಇತ್ತೀಚೆಗೆ ಪಾಕಿಸ್ತಾನದಲ್ಲಿ 3 ಟೆಸ್ಟ್‌ಗಳು 5 ದಿನ ನಡೆದಾಗ ಜನ ಬೋರ್ ಹೊಡೆಯುತ್ತಿದೆ ಎನ್ನುತ್ತಿದ್ದರು. ಪ್ರೇಕ್ಷಕರಿಗೆ ನಾವು ಪಂದ್ಯಗಳನ್ನು ಇನ್‌ಟ್ರೆಸ್ಟಿಂಗ್‌ಗೊಳಿಸುತ್ತಿದ್ದೇವೆ’ ಎಂದರು.
4ನೇ ಟೆಸ್ಟ್‌ಗೂ ಸ್ಪಿನ್ ಪಿಚ್ ಸಿದ್ಧಗೊಳಿಸಲು ಮನವಿ?
ಇಂದೋರ್‌ನಲ್ಲಿ ತನ್ನದೇ ಸ್ಪಿನ್ ಖೆಡ್ಡಾಕ್ಕೆ ಬಿದ್ದರೂ, ಭಾರತ ಅಹಮದಾಬಾದ್‌ನ ಮೋದಿ ಕ್ರೀಡಾಂಗಣದ ಕ್ಯುರೇಟರ್‌ಗೆ ಸ್ಪಿನ್ ಸ್ನೇಹಿ ಪಿಚ್ ಸಿದ್ಧಗೊಳಿಸಲು ಮನವಿ ಮಾಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್, ‘ತವರಿನಲ್ಲಿ ಹೆಚ್ಚಾಗಿ ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ಆಡಲು ನಾವು ಇಚ್ಛಿಸುತ್ತೇವೆ. ಅದೇ ನಮ್ಮ ಶಕ್ತಿ’ ಎಂದರು.
ಇಂದೋರ್‌ನಲ್ಲಿ ಸೋತ ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರುತ್ತಾ..? ಹೇಗಿದೆ ಲೆಕ್ಕಾಚಾರ?
4ನೇ ಟೆಸ್ಟ್ ಗೆದ್ದರೆ ಫೈನಲ್‌ಗೆ ಭಾರತ
ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಬೇಕಿದ್ದರೆ ಆಸೀಸ್ ವಿರುದ್ಧ ಅಹಮದಾಬಾದ್‌ನಲ್ಲಿ ಮಾ.9ರಿಂದ ಆರಂಭಗೊಳ್ಳಲಿರುವ 4ನೇ ಟೆಸ್ಟ್‌ನಲ್ಲಿ ಗೆಲ್ಲಬೇಕು. ಒಂದು ವೇಳೆ ಭಾರತ ಸೋತರೆ ಅಥವಾ ಪಂದ್ಯ ಡ್ರಾಗೊಂಡರೆ, ಶ್ರೀಲಂಕಾ ತಂಡ ನ್ಯೂಜಿಲೆಂಡ್ ವಿರುದ್ಧ 2-0ಯಲ್ಲಿ ಸರಣಿ ಗೆಲ್ಲಬಾರದು. ಭಾರತ ಸೋತು, ಲಂಕಾ 2-0ಯಲ್ಲಿ ಜಯಿಸಿದರೆ ಭಾರತ ಫೈನಲ್ ರೇಸ್‌ನಿಂದ ಹೊರಬೀಳಲಿದೆ.
ಭಾರತಕ್ಕೆ ಅಪರೂಪದ ಸೋಲು!
ತವರಿನಲ್ಲಿ ಕಳೆದ 10 ವರ್ಷದಲ್ಲಿ ಭಾರತಕ್ಕಿದು ಕೇವಲ 3ನೇ ಟೆಸ್ಟ್ ಸೋಲು. 2013ರಿಂದ ಈ ವರೆಗೂ ತಂಡ ಒಟ್ಟು 47 ಪಂದ್ಯಗಳನ್ನು ಆಡಿದ್ದು 38ರಲ್ಲಿ ಜಯ ಸಾಧಿಸಿದೆ. 6 ಪಂದ್ಯಗಳು ಡ್ರಾಗೊಂಡಿವೆ. 2017ರಲ್ಲಿ ಆಸ್ಪ್ರೇಲಿಯಾ ವಿರುದ್ಧ ಪುಣೆಯಲ್ಲಿ, 2021ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ಭಾರತ ಸೋಲುಂಡಿತ್ತು.
