Ind vs Aus: ದಿನೇಶ್ ಕಾರ್ತಿಕ್ ಕುತ್ತಿಗೆ ಕೈ ಹಾಕಿದ ರೋಹಿತ್ ಶರ್ಮಾ..! ವಿಡಿಯೋ ವೈರಲ್
* ಆಸ್ಟ್ರೇಲಿಯಾ ಎದುರು ಮೊದಲ ಟಿ20 ಪಂದ್ಯದಲ್ಲಿ ಸೋಲುಂಡ ಟೀಂ ಇಂಡಿಯಾ
* ಮೈದಾನದಲ್ಲೇ ತಾಳ್ಮೆ ಕಳೆದುಕೊಂಡ ನಾಯಕ ರೋಹಿತ್ ಶರ್ಮಾ
* ಡಿಆರ್‌ಎಸ್‌ಗೆ ಮನವಿ ಮಾಡದ ದಿನೇಶ್ ಕಾರ್ತಿಕ್ ಮೇಲೆ ರೋಹಿತ್ ಶರ್ಮಾ ಗರಂ
ಮೊಹಾಲಿ(ಸೆ.21): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ದತೆ ಆರಂಭಿಸಿರುವ ಭಾರತ ತಂಡಕ್ಕೆ, ತವರಿನಲ್ಲೇ ಬಿಗ್ ಶಾಕ್ ಎದುರಾಗಿದೆ. ತವರಿನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಎದುರು ಮೂರು 3 ಪಂದ್ಯಗಳ ಟಿ20 ಸರಣಿ ಆರಂಭಿಸಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಮೊದಲ ಪಂದ್ಯದಲ್ಲೇ ಆಘಾತಕಾರಿ ಸೋಲು ಅನುಭವಿಸಿದೆ. ಈ ಪಂದ್ಯವು ಕೊನೆಯ ಓವರ್‌ವರೆಗೂ ಅಭಿಮಾನಿಗಳು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಹಲವು ಬಾರಿ ಸಹ ಆಟಗಾರರ ಮೇಲೆ ಸಿಟ್ಟಾದ ಘಟನೆಯೂ ಬೆಳಕಿಗೆ ಬಂದಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ 6 ವಿಕೆಟ್ ಕಳೆದುಕೊಂಡು 208 ರನ್ ಬಾರಿಸಿತ್ತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಆ್ಯರೋನ್ ಫಿಂಚ್ ಹಾಗೂ ಕ್ಯಾಮರೋನ್ ಗ್ರೀನ್ ಸ್ಪೋಟಕ ಆರಂಭವನ್ನೇ ಒದಗಿಸಿಕೊಟ್ಟರು. ಫಿಂಚ್ ವಿಕೆಟ್ ಪತನದ ಬಳಿಕ ಎರಡನೇ ವಿಕೆಟ್‌ಗೆ ಕ್ಯಾಮರೋನ್ ಗ್ರೀನ್ ಹಾಗೂ ಸ್ಟೀವ್ ಸ್ಮಿತ್ ಕೂಡಾ ಸ್ಪೋಟಕ ಜತೆಯಾಟವಾಡುವ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು.
ಆದರೆ ಉಮೇಶ್ ಯಾದವ್ ಬೌಲಿಂಗ್‌ನಲ್ಲಿ, ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಸ್ಟೀವ್ ಸ್ಮಿತ್, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದೇ ಓವರ್‌ನಲ್ಲಿ ಉಮೇಶ್ ಯಾದವ್, ಡಿಆರ್‌ಎಸ್ ಸಹಾಯದಿಂದ ಅಪಾಯಕಾರಿ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ವಿಕೆಟ್ ಉರುಳಿಸುವ ಮೂಲಕ ಆಸೀಸ್‌ಗೆ ಡಬಲ್ ಶಾಕ್ ನೀಡುವಲ್ಲಿ ಯಶಸ್ವಿಯಾದರು.
ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಕ್ಯಾಚ್ ಹಿಡಿದ ಬಳಿಕ ದಿನೇಶ್ ಕಾರ್ತಿಕ್, ಡಿಆರ್‌ಎಸ್‌ಗಾಗಿ ಮನವಿ ಮಾಡಲಿಲ್ಲ. ಹೀಗಿದ್ದೂ ನಾಯಕ ರೋಹಿತ್ ಶರ್ಮಾ, ಡಿಆರ್‌ಎಸ್ ಮೊರೆ ಹೋದರು. ಗ್ಲೆನ್ ಮ್ಯಾಕ್ಸ್‌ವೆಲ್ ಔಟ್ ಎಂದು ತಿಳಿಯುತ್ತಿದ್ದಂತೆಯೇ ರೋಹಿತ್ ಶರ್ಮಾ, ಪಕ್ಕದಲ್ಲೇ ನಿಂತಿದ್ದ ಬಹುಕಾಲದ ಸಹ ಆಟಗಾರ ದಿನೇಶ್ ಕಾರ್ತಿಕ್ ಅವರ ಕತ್ತು ಹಿಡಿದು, ನೀನೇಕೆ ಡಿಆರ್‌ಎಸ್‌ಗೆ ಅಪೀಲ್ ಮಾಡಲಿಲ್ಲ ಎಂಬತೆ ಕೇಳಿದ ರೀತಿಯಲ್ಲಿ ತಲೆ ಅಲ್ಲಾಡಿಸಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು ಇದರ ಹೊರತಾಗಿಯೂ ಕೊನೆಯಲ್ಲಿ ಮ್ಯಾಥ್ಯೂ ವೇಡ್ ಕೇವಲ 21 ಎಸೆತಗಳಲ್ಲಿ ಅಜೇಯ 45 ರನ್ ಸಿಡಿಸುವ ಮೂಲಕ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ಆಸ್ಟ್ರೇಲಿಯಾ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 1-0 ಮುನ್ನಡೆ ಸಾಧಿಸಿದೆ.
Ind vs Aus ಟೀಂ ಇಂಡಿಯಾ ಬೌಲಿಂಗ್, ಫೀಲ್ಡಿಂಗ್ ಬಗ್ಗೆ ಅಸಮಾಧಾನ ಹೊರಹಾಕಿದ ನಾಯಕ ರೋಹಿತ್ ಶರ್ಮಾ..!
ಭಾರತ ತಂಡವು ಟಿ20 ಸರಣಿಯನ್ನು ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೇ, ಸೆಪ್ಟೆಂಬರ್ 23ರಂದು ನಾಗ್ಪುರದಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇದೀಗ ಕ್ರಿಕೆಟ್ ಅಭಿಮಾನಿಗಳ ಚಿತ್ತ ಎರಡನೇ ಟಿ20 ಪಂದ್ಯದ ಮೇಲೆ ನೆಟ್ಟಿದೆ.