Asianet Suvarna News Asianet Suvarna News

Ind vs Aus ನಾಗ್ಪುರ ಗ್ರೌಂಡ್‌ಮ್ಯಾನ್‌ಗಳ ಕುರಿತಾದ ಹಾರ್ದಿಕ್ ಪಾಂಡ್ಯ ಟ್ವೀಟ್ ವೈರಲ್‌..!

* ಆಸ್ಟ್ರೇಲಿಯಾ ಎದುರಿನ ನಾಗ್ಪುರ ಟಿ20 ಪಂದ್ಯ ಗೆದ್ದು ಬೀಗಿದ ಟೀಂ ಇಂಡಿಯಾ
* ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿ
* ಗ್ರೌಂಡ್‌ಮನ್ ಸಿಬ್ಬಂದಿ ಕಾರ್ಯ ಶ್ಲಾಘಿಸಿದ ಹಾರ್ದಿಕ್ ಪಾಂಡ್ಯ

Ind vs Aus All Rounder Hardik Pandya Tweet For Nagpur Groundsmen Goes Viral kvn
Author
First Published Sep 24, 2022, 1:23 PM IST

ನಾಗ್ಪುರ(ಸೆ.24): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಲ್ಲಿನ ವಿದರ್ಭ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಚಾತಕ ಪಕ್ಷಿಗಳಂತೆ ಕಾದು ಕುಳಿದಿದ್ದ ಅಭಿಮಾನಿಗಳಿಗೆ ಉಭಯ ತಂಡಗಳು ನಿರಾಸೆ ಮಾಡಲಿಲ್ಲ. ಎರಡನೇ ಪಂದ್ಯದಲ್ಲಿ ಓವರ್‌ಗಳ ಸಂಖ್ಯೆ ಕಡಿತಗೊಳಿಸಿದರೂ ಸಹಾ ಮನರಂಜನೆಗೇನೂ ಕೊರತೆಯಾಗಲಿಲ್ಲ. ಇದೆಲ್ಲವು ಸಾಧ್ಯವಾಗಿದ್ದು, ಮೈದಾನ ಸಿಬ್ಬಂದಿಗಳ ದಣಿವರಿಯದ ಕೆಲಸದಿಂದ. 

ಹೌದು, ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಇಲ್ಲಿನ ವಿದರ್ಭ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವನ್ನು ವಹಿಸಿತ್ತು. ಆದರೆ ನಾಗ್ಪುರದ ವಿದರ್ಭ ಕ್ರಿಕೆಟ್‌ ಸಂಸ್ಥೆ ಮೈದಾನದ ಒಳಚರಂಡಿ ವ್ಯವಸ್ಥೆ ಭಾರೀ ಟೀಕೆಗೆ ಗುರಿಯಾಗಿದೆ. ಶುಕ್ರವಾರ ಇಡೀ ದಿನ ಮಳೆ ಬರದಿದ್ದರೂ ಕಳೆದ ಒಂದೆರಡು ದಿನ ಸುರಿದಿದ್ದ ಮಳೆಯಿಂದಾಗಿ ಮೈದಾನದಲ್ಲಿ ನೀರು ನಿಂತ್ತಿತ್ತು. ಮಿಡ್‌ ವಿಕೆಟ್‌ ಬೌಂಡರಿ ಬಳಿ ಭಾರೀ ತೇವಾಂಶವಿತ್ತು. ಕಾಲಿಟ್ಟರೆ ಜಾರುವ ಪರಿಸ್ಥಿತಿ ಇದ್ದ ಕಾರಣ ಆ ಸ್ಥಳವನ್ನು ಒಣಗಿಸಲು ಮೈದಾನ ಸಿಬ್ಬಂದಿ ಹರಸಾಹಸ ಪಟ್ಟರು. ಸಂಜೆ 7 ಗಂಟೆಗೆ ಆರಂಭಗೊಳ್ಳಬೇಕಿದ್ದ ಪಂದ್ಯವನ್ನು ಮುಂದೂಡತ್ತಲೇ ಹೋಗಲಾಯಿತು. 8 ಗಂಟೆಗೆ ಪರಿಶೀಲನೆ ನಡೆಸಿದಾಗಲೂ ಮೈದಾನ ಆಟಕ್ಕೆ ಯೋಗ್ಯವಾಗಿರಲಿಲ್ಲ. ಕೊನೆಗೆ ರಾತ್ರಿ 8.45ಕ್ಕೆ ಪರಿಶೀಲನೆ ನಡೆಸಿದಾಗ 9.15ಕ್ಕೆ ಟಾಸ್‌ ನಡೆಸಿ ರಾತ್ರಿ 9.30ಕ್ಕೆ ಪಂದ್ಯ ಆರಂಭಿಸಲು ನಿರ್ಧರಿಸಲಾಯಿತು. 

Ind vs Aus ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಹೊಸ ಮೈಲಿಗಲ್ಲು ನೆಟ್ಟ ರೋಹಿತ್ ಶರ್ಮಾ

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ ತಂಡವು ನಿಗದಿತ 8 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 90 ರನ್ ಕಲೆಹಾಕಿತ್ತು. ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಇದರೊಂದಿಗೆ 3 ಪಂದ್ಯಗಳ ಟಿ20 ಸರಣಿಯಲ್ಲಿ 1-1ರ ಸಮಬಲ ಸಾಧಿಸುವಂತೆ ಮಾಡಿತು.

ಇನ್ನು ಪಂದ್ಯ ಮುಕ್ತಾಯದ ಬಳಿಕ ಟ್ವೀಟ್ ಮಾಡಿದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಇಂದು ಪಂದ್ಯ ಯಶಸ್ವಿಯಾಗಿ ನಡೆಯಲು ಶ್ರಮಿಸಿದ ಎಲ್ಲಾ ಮೈದಾನದ ಸಿಬ್ಬಂದಿಗಳಿಗೆ ಅನಂತ ಧನ್ಯವಾದಗಳು ಎಂದು ಟ್ವೀಟ್ ಮಾಡುವ ಮೂಲಕ ಗ್ರೌಂಡ್‌ಮನ್‌ಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಮಾಡಿರುವ ಈ ಟ್ವೀಟ್ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಸುಮಾರು 55 ಸಾವಿಕ್ಕೂ ಅಧಿಕ ಮಂದಿ ಈ ಪೋಸ್ಟ್‌ ಲೈಕ್‌ ಮಾಡಿದ್ದಾರೆ. ಇದರ ಜತೆಗೆ ನೆಟ್ಟಿಗರು ಮೈದಾನದ ಸಿಬ್ಬಂದಿಗಳ ಶ್ರಮವನ್ನು ಶ್ಲಾಘಿಸಿದ್ದಾರೆ. 

ಇನ್ನು ಪಂದ್ಯ ಮುಗಿಯುತ್ತಿದ್ದಂತೆಯೇ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಕೂಡಾ ಮೈದಾನಕ್ಕೆ ತೆರಳಿ ಗ್ರೌಂಡ್‌ಮನ್‌ಗಳ ಜತೆ ಮಾತುಕತೆ ನಡೆಸಿ ಅವರ ಕೆಲಸವನ್ನು ಹುರಿದುಂಬಿಸಿದರು.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಜಯಿಸಿದ್ದು, ಸೆಪ್ಟೆಂಬರ್ 25ರಂದು ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯವು ಹೈದರಾಬಾದ್‌ನಲ್ಲಿ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳ ಚಿತ್ತ ಇದೀಗ ಹೈದರಾಬಾದ್‌ನತ್ತ ನೆಟ್ಟಿದೆ.

Follow Us:
Download App:
  • android
  • ios