ಅಂತಿಮ ಓವರ್‌ನಲ್ಲಿ ಆಪ್ಘಾನ್ ಗೆಲುವಿಗೆ 18 ರನ್ ಅವಶ್ಯಕತೆ, ಮೊದಲತದಲ್ಲೇ ಬೌಂಡರಿ. ಟೀಂ ಇಂಡಿಯಾ ಪಾಳಯದಲ್ಲಿ ಆತಂಕ, ಸಿಕ್ಸರ್, ವೈಡ್‌ನಿಂದ ಅಂಚಿಮ ಎಸೆತದಲ್ಲಿ ಕೇವಲ 3 ರನ್ ಅವಶ್ಯಕತೆ ಇತ್ತು. 2 ರನ್‌ಗಳಿಸುವ ಮೂಲಕ ಪಂದ್ಯ ಟೈ ಆಯಿತು. ಸೂಪರ್ ಓವರ್‌ನಲ್ಲಿ 17 ರನ್ ಟಾರ್ಗೆಟ್ ಪಡೆದ ಭಾರತ 16 ರನ್ ಸಿಡಿಸಿ ಮತ್ತೆ ಟೈ ಮಾಡಿತು. 

ಬೆಂಗಳೂರು(ಜ.17) ಅಂತಿಮ ಓವರ್‌ನಲ್ಲಿ 18 ರನ್ ಬೇಕಿತ್ತು. ಆಫ್ಘಾನಿಸ್ತಾನ 17 ರನ್ ಸಿಡಿಸಿ ಪಂದ್ಯ ಟೈ ಮಾಡಿಕೊಂಡಿತು. ನಿಯಮದ ಪ್ರಕಾರ ಸೂಪರ್ ಓವರ್‌ನಲ್ಲಿ ಆಫ್ಘಾನಿಸ್ತಾನ 16 ರನ್ ಸಿಡಿಸಿತು. 17 ರನ್ ಸಿಡಿಸಬೇಕಿದ್ದ ಭಾರತ ಮತ್ತೆ 16 ರನ್ ಸಿಡಿಸಿ ಪಂದ್ಯ ಟೈ ಮಾಡಿತು. ಸೂಪರ್ ಓವರ್‌ನಲ್ಲೂ ಪಂದ್ಯ ಟೈಗೊಂಡಿತು. 

213 ರನ್ ಟಾರ್ಗೆಟ್ ಬೃಹತ್ ಆಗಿದ್ದರೂ ಆಫ್ಘಾನಿಸ್ತಾನ ಎದೆಗಂದಲಿಲ್ಲ. ಅತ್ಯುತ್ತಮ ಆರಂಭದ ಮೂಲಕ ಭಾರತಕ್ಕೆ ಶಾಕ್ ನೀಡಿದರು. ರಹಮಾನುಲ್ಹಾ ಗುರ್ಬಾಜ್ ಹಾಗೂ ನಾಯಕ ಇಬ್ರಾಹಿಂ ಜರ್ದಾನ್ ಜೊತೆಯಾಟ ಟೀಂ ಇಂಡಿಯಾ ಆತಂಕ ಹೆಚ್ಚಿಸಿದ್ದು ಸುಳ್ಳಲ್ಲ. ಗುರ್ಬಾಜ್ ಹಾಗೂ ಜರ್ದಾನ್ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 93 ರನ್ ಜೊತೆಯಾಟ ನೀಡಿದರು. 

ಗುರ್ಬಾಜ್ 32 ಎಸೆತದಲ್ಲಿ 50 ರನ್ ಸಿಡಿಸಿ ಔಟಾದರು. ಇತ್ತ ಇಬ್ರಾಹಿಂ ಜರ್ದಾನ್ 41 ಎಸೆತದಲ್ಲಿ 50 ರನ್ ಸಿಡಿಸಿ ನಿರ್ಗಮಿಸಿದರು. ಗುಲ್ಬಾದಿನ್ ನೈಬ್ ಅಬ್ಬರ ಕೊನೆಯತನಕವೂ ಮುಂದುವರಿಯಿತು. ನೈಬ್ ವಿಕೆಟ್ ಕಬಳಿಸಿ ಭಾರತ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮೊಹಮ್ಮದ್ ನಬಿ ಉತ್ತಮ ಸಾಥ್ ನೀಡಿದರು. ಅಜ್ಮತುಲ್ಹಾ ಒಮ್ರಾಜೈ ಶೂನ್ಯಕ್ಕೆ ಔಟಾದರು.

ಮೊಹಮ್ಮದ್ ನಬಿ 16 ಎಸೆತದಲ್ಲಿ 32 ರನ್ ಸಿಡಿಸಿದರು. ಇದು ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. ಇತ್ತ ನೈಬ್ ಹೋರಾಟ ಮುಂದುವರಿಸಿದರು. ಕರಿಮ್ ಜನತ್, ನಜೀಬುಲ್ಲಾ ಜರ್ದಾನ್ ಹೋರಾಟ ನೀಡಲಿಲ್ಲ. ಗುಲ್ಬಾದಿನ್ ನೈಬ್ ಹೋರಾಟದಿಂದ ಆಫ್ಘಾನಿಸ್ತಾನ ದಿಟ್ಟ ಹೋರಾಟ ನೀಡಿ ಭಾರತಕ್ಕೆ ಶಾಕ್ ನೀಡಿತು. ಅಂತಿಮ ಓವರ್‌ನಲ್ಲಿ ಆಫ್ಘಾನಿಸ್ತಾನ ಗೆಲುವಿಗೆ 18 ರನ್ ಬೇಕಿತ್ತು. ಬೌಂಡರಿ ಸಿಕ್ಸರ್ ಜೊತೆಗೆ ಭಾರತದ ವೈಡ್‌ನಿಂದ ಆಫ್ಘಾನಿಸ್ತಾನ 17 ರನ್ ಸಿಡಿಸಿ ಪಂದ್ಯ ಟೈ ಮಾಡಿಕೊಂಡಿತು.

ಸೂಪರ್ ಓವರ್
ಪಂದ್ಯ ಟೈ ಆದ ಕಾರಣ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ಆರಂಭದಲ್ಲೇ ಗುಲ್ಬಾದಿನ್ ನೈಬ್ ವಿಕೆಟ್ ಕಳೆದುಕೊಂಡಿತು. ನೈಬ್ ರನೌಟ್‌ಗೆ ಬಲಿಯಾದರು. ಆದರೆ ರಹಮಾನುಲ್ಹಾ ಗುರ್ಬಾಜ್ ಬೌಂಡರಿ ಹಾಗೂ ಸಿಕ್ಸರ್ ಮೂಲಕ ಆಫ್ಘಾನಿಸ್ತಾನ 1 ಓವರ್‌ನಲ್ಲಿ 16 ರನ್ ಸಿಡಿಸಿತು. 17 ರನ್ ಟಾರ್ಗೆಟ್ ಪಡೆದ ಭಾರತ ಚೇಸ್ ಮಾಡಲು ಕಣಕ್ಕಿಳಿಯಿತು. ರೋಹಿತ್ ಶರ್ಮಾ 2 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಅಂತಿಮ 1 ಎಸೆತದಲ್ಲಿ 2 ರನ್ ಅವಶ್ಯಕತೆ ಇತ್ತು. ಈ ವೇಳೆ ರೋಹಿತ್ ಶರ್ಮಾ ರಿಂಕೂ ಸಿಂಗ್ 1 ರನ್ ಸಿಡಿಸಿದರೂ. ಈ ಮೂಲಕ ಪಂದ್ಯ ಮತ್ತೆ ಟೈ ಗೊಂಡಿತು.