ವಿಶ್ವಕಪ್ ಗೆದ್ದ ಬಳಿಕ ಆಸೀಸ್‌ ಆಲ್ರೌಂಡರ್‌ ಮಿಚೆಲ್‌ ಮಾರ್ಷ್‌, ಟ್ರೋಫಿ ಮೇಲೆ ಕಾಲಿಟ್ಟಿದ್ದ ಫೋಟೋ ವೈರಲ್‌ ಆಗಿತ್ತು. ಈಗ ಇದೇ ವಿಚಾರವಾಗಿ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. 

ನವದೆಹಲಿ (ನ.24): ಬಹುಶಃ ಇಂಥದ್ದೊಂದು ಟ್ವಿಸ್ಟ್‌ಅನ್ನು ಸ್ವತಃ ಆಸೀಸ್‌ ಆಟಗಾರ ಮಿಚೆಲ್‌ ಮಾರ್ಷ್‌ ಕೂಡ ನಿರೀಕ್ಷೆ ಮಾಡಿರಲಿಕ್ಕಿಲ್ಲ. ಆಸ್ಟ್ರೇಲಿಯಾದ ಪ್ರಮುಖ ಆಲ್ರೌಂಡರ್‌ ಮಿಚೆಲ್‌ ಮಾರ್ಷ್‌ ವಿರುದ್ಧ ಉತ್ತರ ಪ್ರದೇಶದ ಆಲಿಗಢದಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಆರ್‌ಟಿಐ ಕಾರ್ಯಕರ್ತ ಪಂಡಿತ್‌ ಕೇಶವ್‌, ಮಿಚೆಲ್‌ ಮಾರ್ಷ್‌ ವಿರುದ್ಧ ದೂರು ದಾಖಲಿಸಿದ್ದಾರೆ. ವಿಶ್ವಕಪ್‌ ಗೆದ್ದ ಬಳಿಕ ಅವರು ತಮ್ಮ ಕಾಲುಗಳನ್ನು ವಿಶ್ವಕಪ್‌ ಟ್ರೋಫಿ ಮೇಲೆ ಇಟ್ಟಿದ್ದರು. ಈ ಚಿತ್ರಗಳು ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಭಾವನೆಗೆ ಧಕ್ಕೆ ಮಾಡಿದೆ ಎಂದು ಪಂಡಿತ್‌ ಕೇಶವ್‌ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 6 ವಿಕೆಟ್‌ಗಳಿಂದ ಭಾರತ ತಂಡವನ್ನು ಸೋಲಿಸಿ ವಿಶ್ವ ಚಾಂಪಿಯನ್‌ ಆಯಿತು. ಇಡೀ ಟೂರ್ನಿಯಲ್ಲಿ ಅತ್ಯುತ್ತಮ ಲಯದಲ್ಲಿದ್ದ ಭಾರತ ತಂಡ ಸತತ 10 ಪಂದ್ಯಗಳಲ್ಲಿ ಗೆಲುವು ಕಂಡಿತ್ತು. ಆದರೆ, ಇಡೀ ಟೂರ್ನಿಯಲ್ಲಿ ತಂಡ ಎದುರಿಸಿದ ಏಕೈಕ ಸೋಲು ಆಸ್ಟ್ರೇಲಿಯಾ ವಿರುದ್ದ ಫೈನಲ್‌ನಲ್ಲಿ ಬಂದಿತ್ತು. ಆಟಗಾರರೊಂದಿಗೆ ಭಾರತದ ಕ್ರಿಕೆಟ್‌ ಅಭಿಮಾನಿಗಳು ಕೂಡ ಸೋಲಿನಿಂದ ಬಹಳ ಬೇಸರಪಟ್ಟಿದ್ದರು.

ಈ ಹಂತದಲ್ಲಿ ಆಸೀಸ್‌ ತಂಡ ವಿಶ್ವಕಪ್‌ ಟ್ರೋಫಿ ಜೊತೆಗೆ ಸಂಭ್ರಮ ಆಚರಿಸಲು ಆರಂಭಿಸಿತ್ತು. ಒಂದೊಂದೇ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಬರಲಾರಂಭಿಸಿದವು. ಇದರ ಒಂದು ಚಿತ್ರದಲ್ಲಿ ಆಲ್ರೌಂಡರ್‌ ಮಿಚೆಲ್‌ ಮಾರ್ಷ್‌ ಟ್ರೋಫಿಯ ಮೇಲೆ ಕಾಲಿಟ್ಟು ಪೋಸ್‌ ನೀಡಿದ್ದರು. ಭಾರತದ ಕ್ರಿಕೆಟ್‌ ಅಭಿಮಾನಿಗಳು ಇದಕ್ಕೆ ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದರು.

ಹಾಗೇನಾದರೂ ಭಾರತ ಟ್ರೋಫಿ ಗೆದ್ದಿದ್ದರೆ, ಇದು ದೇವಸ್ಥಾನಕ್ಕೆ ಪೂಜೆಗೆ ಹೋಗುತ್ತಿತ್ತು ಎಂದು ಕಾಮೆಂಟ್‌ ಮಾಡಿದ್ದರು. ಈಗ ಆರ್‌ಟಿಐ ಕಾರ್ಯಕರ್ತ ಪಂಡಿತ್‌ ಕೇಶವ್‌, ಮಿಚೆಲ್‌ ಮಾರ್ಷ್‌ ವಿರುದ್ಧ ಪೊಲೀಸ್‌ ದೂರು ದಾಖಲು ಮಾಡಿದ್ದಲ್ಲದೆ, ಎಫ್‌ಐಆರ್‌ ದಾಖಲು ಮಾಡುವಂತೆಯೂ ಹೇಳಿದ್ದಾರೆ. ಅದಲ್ಲದೆ, ಇನ್ನೂ ಒಂದು ಸ್ಟೆಪ್‌ ಮುಂದೆ ಹೋಗಿರುವ ಆತ ತನ್ನ ದೂರಿನ ಒಂದು ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕಳುಹಿಸಿಕೊಟ್ಟಿದ್ದಾನೆ. ಆಸ್ಟ್ರೇಲಿಯಾ ಕ್ರಿಕೆಟಿಗನ ವಿರುದ್ಧ ನೀವೇ ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ. ವರ್ಲ್ಡ್ ಕಪ್ ಟ್ರೋಫಿಗೆ ತೋರಿದ ಅಗೌರವದ ಹಿನ್ನೆಲೆಯಲ್ಲಿ ಮಾರ್ಷ್ ಭಾರತದಲ್ಲಿ ಕ್ರಿಕೆಟ್ ಆಡುವುದನ್ನು ನಿಷೇಧಿಸಬೇಕು ಎಂದು ಕೇಶವ್‌ ಮನವಿ ಮಾಡಿದ್ದಾರೆ.

ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್‌ ಮಾರ್ಷ್‌, 'ಅಗೌರವವಲ್ಲ, ಅದು ಆತನ ವಿಶ್ರಾಂತಿ ರೀತಿ' ಎಂದ ಚೇತನ್‌ ಅಹಿಂಸಾ!

ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್‌ ಮಾರ್ಷ್‌ ವಿಚಾರಕ್ಕೆ ಭಾರತದಲ್ಲಿಯೇ ಪರ ವಿರೋಧದ ಚರ್ಚೆಗಳು ಆದವು. ಹೆಚ್ಚಿನ ಕ್ರಿಕೆಟ್‌ ಅಭಿಮಾನಿಗಳು ಬಹಳ ಶ್ರೇಷ್ಠ ಎನ್ನುವ ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟಿದ್ದು ತಪ್ಪು ಎಂದು ಹೇಳಿದ್ದರೆ, ಇನ್ನೂ ಕೆಲವರು ಆತ ಮಾಡಿದ್ದರಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ ಎಂದಿದ್ದಾರೆ.

ಗೆದ್ದ ವಿಶ್ವಕಪ್ ಮೇಲೆ ಸ್ವಲ್ಪನಾದರೂ ಗೌರವ ಬೇಡ್ವಾ? ಕಾಲ ಕೆಳಗೆ ಟ್ರೋಫಿ ಇಟ್ಕೊಂಡ ಮಿಚೆಲ್‌ಗೆ ಕ್ಲಾಸ್