ಭಾರತ ಆಡಿರುವ 8 ಪಂದ್ಯಗಳಲ್ಲೂ ಗೆದ್ದಿದ್ದು, ಈ ಪಂದ್ಯದಲ್ಲಿ ಸೋತರೂ ಅಗ್ರಸ್ಥಾನದಿಂದ ಕೆಳಗಿಳಿಯುವುದಿಲ್ಲ. ಅತ್ತ ನೆದರ್‌ಲೆಂಡ್ಸ್‌ 8ರಲ್ಲಿ ಕೇವಲ 2 ಪಂದ್ಯ ಗೆದ್ದಿದ್ದು, 2025ರ ಚಾಂಪಿಯನ್ಸ್‌ ಟ್ರೋಫಿಗೆ ಅರ್ಹತೆ ಗಳಿಸಬೇಕಿದ್ದರೆ ಈ ಪಂದ್ಯದಲ್ಲಿ ಜಯ ಅನಿವಾರ್ಯ.

ಬೆಂಗಳೂರು(ನ.12): ಎದುರಿಗೆ ಸಿಕ್ಕ ಎಲ್ಲಾ ಎದುರಾಳಿ ತಂಡಗಳನ್ನು ಬೇಟೆಯಾಡಿ, ಟೂರ್ನಿಯುದ್ದಕ್ಕೂ ಅಧಿಪತ್ಯ ಸಾಧಿಸಿರುವ ಟೀಂ ಇಂಡಿಯಾ ಮತ್ತೊಂದು ಸಂಹಾರಕ್ಕೆ ಸಜ್ಜಾಗಿ ನಿಂತಿದೆ. ರೌಂಡ್‌ ರಾಬಿನ್‌ ಮಾದರಿಯ ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಭಾನುವಾರ ನೆದರ್‌ಲೆಂಡ್ಸ್‌ ಸವಾಲು ಎದುರಾಗಲಿದ್ದು, ಗೆಲುವಿನೊಂದಿಗೆ ಅಜೇಯವಾಗಿಯೇ ಸೆಮಿಫೈನಲ್‌ ಪ್ರವೇಶಿಸಲು ಎದುರು ನೋಡುತ್ತಿದೆ. ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಭಾರತ ಆಡಿರುವ 8 ಪಂದ್ಯಗಳಲ್ಲೂ ಗೆದ್ದಿದ್ದು, ಈ ಪಂದ್ಯದಲ್ಲಿ ಸೋತರೂ ಅಗ್ರಸ್ಥಾನದಿಂದ ಕೆಳಗಿಳಿಯುವುದಿಲ್ಲ. ಅತ್ತ ನೆದರ್‌ಲೆಂಡ್ಸ್‌ 8ರಲ್ಲಿ ಕೇವಲ 2 ಪಂದ್ಯ ಗೆದ್ದಿದ್ದು, 2025ರ ಚಾಂಪಿಯನ್ಸ್‌ ಟ್ರೋಫಿಗೆ ಅರ್ಹತೆ ಗಳಿಸಬೇಕಿದ್ದರೆ ಈ ಪಂದ್ಯದಲ್ಲಿ ಜಯ ಅನಿವಾರ್ಯ.

ಕರ್ನಾಟಕದಲ್ಲಿ ಫ್ಯಾನ್ಸ್ ತೋರುವ ಪ್ರೀತಿ ಇನ್ನೆಲ್ಲೂ ಸಿಗದು, ಪಂದ್ಯಕ್ಕೂ ಮೊದಲು ಕೊಹ್ಲಿ ವಿಡಿಯೋ ವೈರಲ್!

ಜಯದ ಓಟದ ನಡುವೆ ಭಾರತ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾದಂತೆ ಕಂಡುಬರುತ್ತಿದ್ದರೂ ಕೆಲ ಸಮಸ್ಯೆ ಇನ್ನೂ ತಂಡದಲ್ಲಿವೆ. ಆರಂಭಿಕ ಬ್ಯಾಟರ್‌ಗಳು 3 ಬಾರಿ ಅರ್ಧಶತಕದ ಜೊತೆಯಾಟವಾಡಿದ್ದು, ಉಳಿದಂತೆ 5 ಪಂದ್ಯಗಳಲ್ಲಿ 5, 32, 23, 26 ಮತ್ತು 4 ರನ್‌ ಸೇರಿಸಿದ್ದಾರೆ. ಹೀಗಾಗಿ ಆರಂಭಿಕರಾದ ರೋಹಿತ್‌ ಶರ್ಮಾ-ಶುಭ್‌ಮನ್‌ ಗಿಲ್‌ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಬೇಕಾದ ಅಗತ್ಯವಿದೆ. ಉಳಿದಂತೆ ತಂಡದಲ್ಲಿ ಸೂರ್ಯಕುಮಾರ್‌ ಮಾತ್ರ ವೈಯಕ್ತಿಕವಾಗಿ ವಿಫಲವಾಗಿದ್ದು, ಈ ಪಂದ್ಯದ ಮೂಲಕ ಲಯ ಕಂಡುಕೊಳ್ಳಬೇಕಾದ ಅಗತ್ಯವಿದೆ.

ಬೌಲಿಂಗ್‌ ವಿಭಾಗ ಉತ್ಕೃಷ್ಠ ಲಯದಲ್ಲಿದ್ದು, ಬುಮ್ರಾ, ಶಮಿ, ಸಿರಾಜ್‌, ಕುಲ್ದೀಪ್‌ ಹಾಗೂ ಜಡೇಜಾರ ದಾಳಿಯನ್ನು ಎದುರಿಸುವುದೇ ಎದುರಾಳಿಗಳಿಗೆ ಅಗ್ನಿಪರೀಕ್ಷೆ ಎಂಬಂತಾಗಿದೆ. ಈ ನಡುವೆ ಔಪಚಾರಿಕ ಪಂದ್ಯವಾದರೂ ತಂಡದಲ್ಲಿ ಯಾವುದೇ ಬದಲಾವಣೆ ಮಾಡದಿರುವ ಬಗ್ಗೆ ಸ್ವತಃ ಕೋಚ್‌ ರಾಹುಲ್‌ ದ್ರಾವಿಡ್‌ ಸುಳಿವು ನೀಡಿದ್ದಾರೆ.

ಬೆಂಗಳೂರಿನ ಪಂದ್ಯಕ್ಕೆ ಟೀಂ ಇಂಡಿಯಾ ಕಾಂಬಿನೇಷನ್‌ ಬಗ್ಗೆ ಸುಳಿವು ನೀಡಿದ ರಾಹುಲ್ ದ್ರಾವಿಡ್..!

ಶಾಕ್‌ ನೀಡುತ್ತಾ ಡಚ್‌?: ಮತ್ತೊಂದೆಡೆ ಟೂರ್ನಿಯಲ್ಲಿ ಬಲಿಷ್ಠ ದ.ಆಫ್ರಿಕಾಕ್ಕೆ ಆಘಾತ ನೀಡಿದ ಹೊರತಾಗಿ ನೆದರ್‌ಲೆಂಡ್ಸ್‌ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದರೆ ಕೊನೆಯ ಪಂದ್ಯದಲ್ಲಿ ಅಸಾಧಾರಣ ಪ್ರದರ್ಶನ ನೀಡಲು ಎದುರು ನೋಡುತ್ತಿರುವ ಡಚ್‌ ಪಡೆ, ಗೆಲುವಿನೊಂದಿಗೆ ಟೂರ್ನಿಗೆ ಗುಡ್‌ಬೈ ಹೇಳಲು ಕಾತರಿಸುತ್ತಿದೆ.

ಒಟ್ಟು ಮುಖಾಮುಖಿ: 02

ಭಾರತ: 02

ನೆದರ್‌ಲೆಂಡ್ಸ್‌: 00

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ ಎಲ್ ರಾಹುಲ್‌, ಸೂರ್ಯಕುಮಾರ್‌ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್‌ ಯಾದವ್, ಮೊಹಮ್ಮದ್ ಸಿರಾಜ್‌.

ನೆದರ್‌ಲೆಂಡ್ಸ್: ಬ್ಯಾರೆಸಿ, ಒಡೌಡ್‌, ಆ್ಯಕರ್‌ಮನ್‌, ಸೈಬ್ರಂಡ್‌, ಎಡ್ವರ್ಡ್ಸ್‌(ನಾಯಕ), ಲೀಡೆ, ತೇಜ, ಬೀಕ್‌, ಮೆರ್ವೆ, ಆರ್ಯನ್‌, ಮೀಕೆರನ್‌.

ಪಂದ್ಯ: ಮಧ್ಯಾಹ್ನ 2ಕ್ಕೆ

ಪಿಚ್‌ ರಿಪೋರ್ಟ್‌

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದರೂ ಈ ಬಾರಿ ಇಲ್ಲಿ ನಡೆದ 4 ಪಂದ್ಯಗಳಲ್ಲಿ 2ರಲ್ಲಿ ಬೌಲರ್‌ಗಳೇ ಮೇಲುಗೈ ಸಾಧಿಸಿದ್ದಾರೆ. ಇದರ ಹೊರತಾಗಿಯೂ ಇಲ್ಲಿ ಮತ್ತೆ ದೊಡ್ಡ ಮೊತ್ತದ ನಿರೀಕ್ಷೆಯಿದ್ದು, ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.

2ನೇ ತವರಲ್ಲಿ ವಿರಾಟ್‌ ಸಿಡಿಸ್ತಾರಾ 50ನೇ ಶತಕ?

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುವ ಕೊಹ್ಲಿಗೆ ಚಿನ್ನಸ್ವಾಮಿ ಕ್ರೀಡಾಂಗಣ 2ನೇ ತವರಿದ್ದಂತೆ. ಈಗಾಗಲೇ ಏಕದಿನಲ್ಲಿ 49 ಶತಕ ಬಾರಿಸಿರುವ ಕೊಹ್ಲಿ, ದಾಖಲೆಯ 50ನೇ ಶತಕದ ಮೈಲಿಗಲ್ಲನ್ನು ಇದೇ ಕ್ರೀಡಾಂಗಣದಲ್ಲಿ ಸಾಧಿಸಲು ಎದುರು ನೋಡುತ್ತಿದ್ದಾರೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿಯ ಏಕದಿನ ದಾಖಲೆ ಹೇಳಿಕೊಳ್ಳುವಂತದ್ದೇನಲ್ಲ. ಇಲ್ಲಿ 2010ರಿಂದ 2020ರ ವರೆಗೂ ಒಟ್ಟು 6 ಏಕದಿನ ಪಂದ್ಯಗಳನ್ನಾಡಿದ್ದು ಕೇವಲ 1 ಅರ್ಧಶತಕದೊಂದಿಗೆ 152 ರನ್‌ ಗಳಿಸಿದ್ದಾರೆ.

ಇಂದು ಲೀಗ್‌ ಹಂತ ಮುಕ್ತಾಯ

ಅ.5ರಂದು ಅಹಮದಾಬಾದ್‌ನಲ್ಲಿ ಇಂಗ್ಲೆಂಡ್‌-ನ್ಯೂಜಿಲೆಂಡ್‌ನ ಪಂದ್ಯದೊಂದಿಗೆ ಆರಂಭಗೊಂಡಿದ್ದ 2023ರ ಏಕದಿನ ವಿಶ್ವಕಪ್‌ನ ಲೀಗ್‌ ಹಂತ ಭಾನುವಾರ ಮುಕ್ತಾಯಗೊಳ್ಳಲಿದೆ. ಈ ಪಂದ್ಯದ ಬಳಿಕ ನಾಕೌಟ್‌ ಹಂತ ಆರಂಭಗೊಳ್ಳಲಿದ್ದು, 2 ಸೆಮಿಫೈನಲ್‌ ಹಾಗೂ ಫೈನಲ್‌ ಬಾಕಿ ಇವೆ.