Asianet Suvarna News Asianet Suvarna News

36 ರನ್‌ಗೆ 8 ವಿಕೆಟ್‌..! ಭಾರತದ ಬೌಲಿಂಗ್‌ಗೆ ದಿಕ್ಕೆಟ್ಟ ಪಾಕ್‌ 191ಕ್ಕೆ ಆಲೌಟ್‌!

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ತಂಡವು ಸಾಕಷ್ಟು ಎಚ್ಚರಿಕೆಯ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಅಬ್ದುಲ್ಲಾ ಶಫೀಕ್ ಹಾಗೂ ಇಮಾಮ್ ಉಲ್ ಹಕ್ ಜೋಡಿ ಮೊದಲ ವಿಕೆಟ್‌ಗೆ 41 ರನ್‌ಗಳ ಜತೆಯಾಟವಾಡಿದರು.

ICC World Cup 2023 Team India Bowlers on Fire Pakistan All out for 191 kvn
Author
First Published Oct 14, 2023, 5:28 PM IST

ಅಹಮದಾಬಾದ್‌(ಅ.14): ಟೀಂ ಇಂಡಿಯಾ ಬೌಲರ್‌ಗಳ ಸಂಘಟಿತ ಪ್ರದರ್ಶನಕ್ಕೆ ಪಾಕಿಸ್ತಾನ ತಂಡವು ತತ್ತರಿಸಿ ಹೋಗಿದೆ. 1.30 ಲಕ್ಷ ಪ್ರೇಕ್ಷಕರು ತುಂಬಿತುಳುಕುತ್ತಿರುವ ಸ್ಟೇಡಿಯಂನಲ್ಲಿ ಕೆಚ್ಚೆದೆಯ ಹೋರಾಟ ತೋರಿದ ಟೀಂ ಇಂಡಿಯಾ, ಬದ್ದ ಎದುರಾಳಿ ಪಾಕಿಸ್ತಾನವನ್ನು ಕೇವಲ 191 ರನ್‌ಗಳಿಗೆ ಕಟ್ಟಿಹಾಕಿದೆ. ಈ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಕೇವಲ 192 ರನ್‌ಗಳ ಸಾಧಾರಣ ಗುರಿ ಪಡೆದಿದೆ. ಟೀಂ ಇಂಡಿಯಾ ಪರ ಬುಮ್ರಾ, ಸಿರಾಜ್, ಕುಲ್ದೀಪ್, ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ತಂಡವು ಸಾಕಷ್ಟು ಎಚ್ಚರಿಕೆಯ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಅಬ್ದುಲ್ಲಾ ಶಫೀಕ್ ಹಾಗೂ ಇಮಾಮ್ ಉಲ್ ಹಕ್ ಜೋಡಿ ಮೊದಲ ವಿಕೆಟ್‌ಗೆ 41 ರನ್‌ಗಳ ಜತೆಯಾಟವಾಡಿದರು. ಈ ಜೋಡಿಯನ್ನು ಬೇರ್ಪಡಿಸಲು ವೇಗಿ ಮೊಹಮ್ಮದ್ ಸಿರಾಜ್ ಯಶಸ್ವಿಯಾದರು. ಅಬ್ದುಲ್ಲಾ ಶಫೀಕ್ 20 ರನ್ ಬಾರಿಸಿ ಸಿರಾಜ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಇದಾದ ಬಳಿಕ ನಾಯಕ ಬಾಬರ್ ಅಜಂ ಹಾಗೂ ಇಮಾಮ್ ಉಲ್ ಹಕ್ ಕೆಲಕಾಲ ರಕ್ಷಣಾತ್ಮಕ ಆಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ವೇಳೆ ದಾಳಿಗಿಳಿದ ಹಾರ್ದಿಕ್ ಪಾಂಡ್ಯ, ಇಮಾಮ್ ಉಲ್ ಹಕ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಇಮಾಮ್ ಉಲ್ ಹಕ್ 38 ಎಸೆತಗಳಲ್ಲಿ 6 ಬೌಂಡರಿ ಸಹಿತ 36 ರನ್ ಬಾರಿಸಿ ಕೆ ಎಲ್ ರಾಹುಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಮೋದಿ ಸ್ಟೇಡಿಯಂನಲ್ಲಿ ಇಂಡೋ-ಪಾಕ್ ಕದನ; ಮೈದಾನಕ್ಕೆ ಕಳೆ ಹೆಚ್ಚಿಸಿದ ತೆಂಡುಲ್ಕರ್-ಅನುಷ್ಕಾ ಎಂಟ್ರಿ..!

ಬಾಬರ್-ರಿಜ್ವಾನ್ ಜುಗಲ್ಬಂದಿ: ಕೇವಲ 73 ರನ್‌ಗಳಿಗೆ ಆರಂಭಿಕರಿಬ್ಬರನ್ನು ಕಳೆದುಕೊಂಡು ಕಂಗಾಲಾಗಿದ್ದ ಪಾಕಿಸ್ತಾನ ತಂಡಕ್ಕೆ ಮೂರನೇ ವಿಕೆಟ್‌ಗೆ ನಾಯಕ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ 82 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜತೆಯಾಟ ಶತಕದತ್ತ ದಾಪುಗಾಲಿಡುತ್ತಿದ್ದ ವೇಳೆ ವೇಗಿ ಸಿರಾಜ್‌, ಅರ್ಧಶತಕ ಬಾರಿಸಿದ್ದ ಪಾಕ್ ನಾಯಕ ಬಾಬರ್ ಅಜಂ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು. ಬಾಬರ್ ಅಜಂ 58 ಎಸೆತಗಳನ್ನು ಎದುರಿಸಿ 50 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು.

ದಿಢೀರ್ ಕುಸಿದ ಪಾಕ್‌ ಪಡೆ: ಕೇವಲ 155 ರನ್‌ಗಳ ವರೆಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನ ತಂಡವು ಇದಾದ ಬಳಿಕ ತನ್ನ ಖಾತೆಗೆ 36 ರನ್ ಸೇರಿಸುವಷ್ಟರಲ್ಲಿ ಉಳಿದ 8 ವಿಕೆಟ್ ಕಳೆದುಕೊಂಡು ನಾಟಕೀಯ ಕುಸಿತ ಕಾಣುವ ಮೂಲಕ ಕೇವಲ 191 ರನ್‌ಗಳಿಗೆ ಸರ್ವಪತನ ಕಂಡಿತು. ರಿಜ್ವಾನ್ 49 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಪಾಕ್‌ ಬ್ಯಾಟರ್‌ಗಳು, ಭಾರತೀಯ ಬೌಲರ್‌ಗಳ ಎದುರು ಪ್ರತಿರೋಧ ತೋರಲು ವಿಫಲರಾದರು.

ICC World Cup 2023: ಬದ್ದ ಎದುರಾಳಿ ಕಾಳಗದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ..!

ಟೀಂ ಇಂಡಿಯಾ ಪರ ಶಿಸ್ತುಬದ್ದ ದಾಳಿ: 

ಹೈವೋಲ್ಟೇಜ್ ಪಂದ್ಯವಾಗಿದ್ದರೂ ಟೀಂ ಇಂಡಿಯಾ ಬೌಲರ್‌ಗಳು ಅತ್ಯಂತ ಶಿಸ್ತುಬದ್ದ ದಾಳಿಯ ಮೂಲಕ ಗಮನ ಸೆಳೆದರು. ಬುಮ್ರಾ 7 ಓವರ್ ಬೌಲಿಂಗ್ ಮಾಡಿ ಒಂದು ಮೇಡನ್ ಓವರ್ ಸಹಿತ 19 ರನ್ ನೀಡಿ ಎರಡು ವಿಕೆಟ್ ಪಡೆದರೆ, ಸಿರಾಜ್ 50 ರನ್ ನೀಡಿ ಎರಡು ಬಲಿ ಪಡೆದರು. ಇನ್ನುಳಿದಂತೆ ಹಾರ್ದಿಕ್ ಪಾಂಡ್ಯ 34 ರನ್‌ಗೆ ಎರಡು, ಕುಲ್ದೀಪ್ 35 ರನ್‌ಗೆ ಎರಡು ಮತ್ತು ರವೀಂದ್ರ ಜಡೇಜಾ 38 ರನ್ ನೀಡಿ ಕೊನೆಯ ಇಬ್ಬರು ಬ್ಯಾಟರ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ಎರಡು ಓವರ್ ಬೌಲಿಂಗ್ ಮಾಡಿದ ಶಾರ್ದೂಲ್ ಠಾಕೂರ್‌ಗೆ ಯಾವುದೇ ವಿಕೆಟ್ ಬೀಳಲಿಲ್ಲ.

 

Follow Us:
Download App:
  • android
  • ios