1992ರಿಂದ 2019ರ ವರೆಗೂ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 7 ಪಂದ್ಯಗಳನ್ನಾಡಿರುವ ಭಾರತ, ಏಳೂ ಬಾರಿ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಈ ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ಬಲಾಬಲವನ್ನು ನೋಡಿದಾಗ, ಈ ಸಲವೂ ಭಾರತವೇ ಗೆಲ್ಲುವ ಫೇವರಿಟ್‌. ಭಾರತ 8ನೇ ಜಯಕ್ಕೆ ಹಪಹಪಿಸುತ್ತಿದೆ.

ಅಹಮದಾಬಾದ್‌(ಅ.14): ಭಾರತವೀಗ ಈಗ ನವರಾತ್ರಿ ಸಂಭ್ರಮಕ್ಕೆ ಅಣಿಯಾಗುತ್ತಿದೆ. ಬದ್ಧವೈರಿ ಪಾಕಿಸ್ತಾನವನ್ನು ಟೀಂ ಇಂಡಿಯಾ ಶನಿವಾರ ವಿಶ್ವಕಪ್‌ ಕದನದಲ್ಲಿ ಹುರಿದು ಮುಕ್ಕಿದರೆ ದೇಶದೆಲ್ಲೆಡೆ ಸಂಭ್ರಮ ಇಮ್ಮಡಿಗೊಳ್ಳಲಿದ್ದು, ಈ ಪಂದ್ಯಕ್ಕಾಗಿ ಕೇವಲ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಮಾತ್ರವಲ್ಲ, ಇಡೀ ಕ್ರಿಕೆಟ್‌ ಜಗತ್ತೇ ಕಾಯುತ್ತಿದೆ.

1.32 ಲಕ್ಷ ಆಸನ ಸಾಮರ್ಥ್ಯ ಹೊಂದಿರುವ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ವಿಶ್ವದ ಅತಿದೊಡ್ಡ ಕ್ರೀಡಾಂಗಣ ಎನ್ನುವ ಖ್ಯಾತಿ ಇದ್ದು, ವಿಶ್ವದ ಅತಿದೊಡ್ಡ ಕ್ರಿಕೆಟ್‌ ಪಂದ್ಯಕ್ಕೆ ಇದೇ ಕ್ರೀಡಾಂಗಣವನ್ನು ಆಯ್ಕೆ ಮಾಡಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಮೋದಿ ಕ್ರೀಡಾಂಗಣ ಶನಿವಾರ ನೀಲಿ ಅಂಗಿಗಳಿಂದ ಕಂಗೊಳಿಸಲಿದ್ದು, 140 ಕೋಟಿ ಭಾರತೀಯರ ಪ್ರಾರ್ಥನೆ, ಬೆಂಬಲವೂ ರೋಹಿತ್‌ ಶರ್ಮಾ ಪಡೆಯ ಬೆನ್ನಿಗಿರಲಿದೆ.

World Cup 2023: ಸತತ ಮೂರನೇ ಗೆಲುವು ದಾಖಲಿಸಿದ ನ್ಯೂಜಿಲೆಂಡ್‌, ಅಂಕಪಟ್ಟಿಯಲ್ಲಿ ನಂ.1

1992ರಿಂದ 2019ರ ವರೆಗೂ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 7 ಪಂದ್ಯಗಳನ್ನಾಡಿರುವ ಭಾರತ, ಏಳೂ ಬಾರಿ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಈ ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ಬಲಾಬಲವನ್ನು ನೋಡಿದಾಗ, ಈ ಸಲವೂ ಭಾರತವೇ ಗೆಲ್ಲುವ ಫೇವರಿಟ್‌. ಭಾರತ 8ನೇ ಜಯಕ್ಕೆ ಹಪಹಪಿಸುತ್ತಿದೆ.

ಭಾರತ ತಂಡದಲ್ಲಿರುವ ಬ್ಯಾಟರ್‌ಗಳೆಲ್ಲರೂ ಕ್ರಿಕೆಟ್‌ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಬೌಲರ್‌ಗಳೂ ಒಬ್ಬರಿಗಿಂತ ಒಬ್ಬರು ದೊಡ್ಡ ಹೆಸರು ಮಾಡಿರುವವರು. ಆದರೂ, ಈ ಪಂದ್ಯದಲ್ಲಿ ಲಯ, ಸಾಮರ್ಥ್ಯ, ಪ್ರತಿಭೆ ಇವೆಲ್ಲಕ್ಕಿಂತ ಮಿಗಿಲಾಗಿ ಯಾರು ಭಾವನೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೋ ವಿಜಯ ಲಕ್ಷ್ಮಿ ಅವರತ್ತ ವಾಲುತ್ತಾಳೆ. ಹೀಗಾಗಿ ರೋಹಿತ್‌ ಪಡೆಗಿರುವ ಅತಿದೊಡ್ಡ ಸವಾಲು ಭಾವನೆಗಳ ಬಂಧನಕ್ಕೆ ಒಳಗಾಗದಿರುವುದು.

'ರೆಕಾರ್ಡ್ ಇರೋದೇ ಬ್ರೇಕ್ ಮಾಡೋಕೆ': ಭಾರತ ಎದುರಿನ ಪಂದ್ಯಕ್ಕೂ ಮುನ್ನ ಬಾಬರ್ ಅಜಂ ವಾರ್ನಿಂಗ್..!

ಗಿಲ್‌ 99% ಫಿಟ್‌: ರೋಹಿತ್‌!

ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಂಪಾದಿಸಿರುವ ಭಾರತ ತಂಡ ಸಮತೋಲನದಿಂದ ಕೂಡಿದೆ. ಡಿಂಘಿ ಜ್ವರದಿಂದಾಗಿ ಮೊದಲೆರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಶುಭ್‌ಮನ್‌ ಗಿಲ್‌, ಆಸ್ಪತ್ರೆಯಿಂದ ಬಿಡುಗಡೆಯಾದ ಕೂಡಲೇ ಚೆನ್ನೈನಿಂದ ಅಹಮದಾಬಾದ್‌ಗೆ ಹಾರಿ, ಎಲ್ಲರಿಗಿಂತ ಮೊದಲೇ ನೆಟ್ಸ್‌ನಲ್ಲಿ ಬೆವರಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನಾಯಕ ರೋಹಿತ್‌, ‘ಗಿಲ್ ಆಡುವುದು ಶೇ.99ರಷ್ಟು ಖಚಿತ’ ಎಂಬ ಶುಭ ಸುದ್ದಿಯನ್ನೂ ನೀಡಿದರು. ಒಂದು ವೇಳೆ ಗಿಲ್‌ ಆಡದಿದ್ದರೆ ಇಶಾನ್‌ ಕಿಶನ್‌ ಮುಂದುವರಿಯಲಿದ್ದಾರೆ. ಇತ್ತೀಚೆಗೆ ಏಷ್ಯಾಕಪ್‌ನಲ್ಲಿ ಕಿಶನ್‌ ಹೋರಾಟದ 81 ರನ್‌ ಸಿಡಿಸುವ ಮೂಲಕ ಪಾಕ್‌ನ ಗುಣಮಟ್ಟದ ವೇಗದ ಬೌಲಿಂಗ್‌ ಪಡೆಯನ್ನು ಎದುರಿಸುವ ಸಾಮರ್ಥ್ಯ ತಮ್ಮಲ್ಲಿದೆ ಎನ್ನುವುದನ್ನು ತೋರಿದ್ದರು.

ಅಫ್ಘಾನಿಸ್ತಾನ ವಿರುದ್ಧ ಸಿಡಿಲಬ್ಬರದ ಆಟವಾಡಿದ್ದ ರೋಹಿತ್‌, ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ ಮೇಲೆ ತಂಡ ಹೆಚ್ಚು ನಿರೀಕ್ಷೆ ಇಡಲಿದ್ದು, ಶ್ರೇಯಸ್‌ ಅಯ್ಯರ್‌, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ ಸಹ ನಿರ್ಣಾಯಕ ಪಾತ್ರ ವಹಿಸಬೇಕಾಗಬಹುದು.

ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಶುಭ್‌ಮನ್ ಗಿಲ್‌..! ಸಚಿನ್ ಪುತ್ರಿಯ ಪೋಸ್ಟ್‌ ಮತ್ತೆ ವೈರಲ್

ಅಹಮದಾಬಾದ್‌ನ ಇತ್ತೀಚಿನ ದಾಖಲೆಯನ್ನು ಪರಿಗಣಿಸಿ, ವೇಗದ ಬೌಲರ್‌ಗಳಿಗೆ ಹೆಚ್ಚು ನೆರವು ಸಿಗಲಿದೆ ಎನ್ನುವ ನಂಬಿಕೆಯೊಂದಿಗೆ ಭಾರತ ಕಣಕ್ಕಿಳಿದರೆ ಮೊಹಮದ್‌ ಶಮಿಗೆ ಅವಕಾಶ ಸಿಗಬಹುದು. ಶಮಿ ಐಪಿಎಲ್‌ನಲ್ಲಿ ಗುಜರಾತ್‌ ತಂಡದಲ್ಲಿ ಆಡುವ ಕಾರಣ, ಇಲ್ಲಿನ ಪಿಚ್‌ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ಇರಲಿದೆ. ಒಂದು ವೇಳೆ ದೊಡ್ಡ ಬೌಂಡರಿಗಳು ಎನ್ನುವ ಅಂಶವನ್ನು ತಲೆಯಲ್ಲಿಟ್ಟುಕೊಂಡು ಆಡುವ ಹನ್ನೊಂದನ್ನು ನಿರ್ಧರಿಸಿದರೆ ಆಗ ಆರ್‌.ಅಶ್ವಿನ್‌ರನ್ನು ಆಡಿಸಬಹುದು.

ಆತ್ಮವಿಶ್ವಾಸದಲ್ಲಿ ಪಾಕಿಸ್ತಾನ

ಕಳೆದ 2 ವಾರ ಹೈದರಾಬಾದ್‌ನಲ್ಲೇ ಉಳಿದಿದ್ದ ಪಾಕಿಸ್ತಾನ, ಎರಡು ಗೆಲುವುಗಳೊಂದಿಗೆ ಅಹಮದಾಬಾದ್‌ಗೆ ಬಂದಿದೆ. ಕಳೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದಾಖಲೆಯ ಜಯ ಸಾಧಿಸಿದ ಬಳಿಕ ಈ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆಯೇನೂ ತಂಡಕ್ಕಿಲ್ಲ ಎಂಬಂತೆ ಕಾಣುತ್ತಿದೆ. ಆದರೂ ಹಸನ್‌ ಅಲಿಗೆ ಎದುರಾಳಿ ಬ್ಯಾಟರ್‌ಗಳು ಸಿಕ್ಕಾಪಟ್ಟೆ ಚಚ್ಚುತ್ತಿರುವ ಕಾರಣ, ಅವರನ್ನು ಹೊರಗಿಟ್ಟು ಅವಕಾಶಕ್ಕಾಗಿ ಕಾಯುತ್ತಿರುವ ಮೊಹಮದ್‌ ವಾಸೀಂರನ್ನು ಆಡಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇನ್ನು ಶಾಹೀನ್‌ ಅಫ್ರಿದಿಯ ಮೊದಲ ಸ್ಪೆಲ್‌ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಿದೆಯೇ ಎನ್ನುವ ಕುತೂಹಲ ಈ ಸಲವೂ ಇದೆ.

ಏಷ್ಯಾಕಪ್‌ನಲ್ಲಿ ನೇಪಾಳ ವಿರುದ್ಧ 150 ರನ್‌ ಸಿಡಿಸಿದ ಬಳಿಕ ಪಾಕ್‌ ನಾಯಕ ಬಾಬರ್‌ ಆಜಂ ಕಳೆದ 5 ಇನ್ನಿಂಗ್ಸಲ್ಲಿ ಕೇವಲ 71 ರನ್‌ ಕಲೆಹಾಕಿದ್ದಾರೆ. ಬಾಬರ್‌ರ ಕಳಪೆ ಲಯ ಮೊಹಮದ್ ರಿಜ್ವಾನ್‌ ಸೇರಿ ಉಳಿದ ಬ್ಯಾಟರ್‌ಗಳ ಮೇಲೆ ಒತ್ತಡ ಹೇರುತ್ತಿದೆ.

ಒಟ್ಟು ಮುಖಾಮುಖಿ: 134

ಭಾರತ: 56

ಪಾಕಿಸ್ತಾನ: 73

ಫಲಿತಾಂಶವಿಲ್ಲ: 05

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಇಶಾನ್ ಕಿಶನ್‌/ಶುಭ್‌ಮನ್ ಗಿಲ್‌, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ ಎಲ್ ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್‌/ಮೊಹಮ್ಮದ್ ಶಮಿ/ಶಾರ್ದೂಲ್‌ ಠಾಕೂರ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್‌ ಯಾದವ್, ಮೊಹಮ್ಮದ್ ಸಿರಾಜ್‌.

ಪಾಕಿಸ್ತಾನ: ಶಫೀಕ್‌, ಇಮಾಮ್‌ ಉಲ್ ಹಕ್, ಬಾಬರ್‌ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್‌, ಶಕೀಲ್‌ ಅಹಮ್ಮದ್, ಇಫ್ತಿಕಾರ್‌ ಅಹಮ್ಮದ್, ಶದಾಬ್‌ ಖಾನ್, ಮೊಹಮ್ಮದ್ ನವಾಜ್‌, ಶಾಹೀನ್‌ ಅಫ್ರಿದಿ, ಹಸನ್‌ ಅಲಿ/ಇಮಾದ್ ವಸೀಂ, ಹ್ಯಾರಿಸ್‌ ರೌಫ್‌.

ಪಂದ್ಯ: ಮಧ್ಯಾಹ್ನ 2ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌

ಪಿಚ್‌ ರಿಪೋರ್ಟ್‌

ಬಿಸಿಲು ಹಾಗೂ ಒಣಹವೆಯ ವಾತಾವರಣವಿರಲಿದ್ದು, ಸಂಜೆಯ ಬಳಿಕ ಇಬ್ಬನಿ ಬೀಳಬಹುದು. ಹೀಗಾಗಿ ಮೊದಲು ಬ್ಯಾಟ್ ಮಾಡುವ ತಂಡ ಸುರಕ್ಷಿತ ಸ್ಥಿತಿಯಲ್ಲಿದ್ದೇವೆಂದು ಭಾವಿಸಲು ಕನಿಷ್ಠ 300 ರನ್‌ ಬೇಕಾಗಬಹುದು. ಕಪ್ಪು ಮಣ್ಣಿನಿಂದ ಸಿದ್ಧಗೊಂಡಿರುವ ಪಿಚ್‌ ಇದಾಗಿದ್ದು, ಬ್ಯಾಟಿಂಗ್‌ ಸ್ನೇಹಿಯಾಗಿರಲಿದೆ ಎಂದು ತಿಳಿದುಬಂದಿದೆ.