ಚಿಂತೆ ಬೇಡ, ಈ ಸಲ ಕಪ್ ನಮ್ದೇ..! ಗಂಗೂಲಿ ಮಾಡಿದ ತಪ್ಪನ್ನೇ ಮಾಡಿದ್ರಾ ಕಮಿನ್ಸ್..?
ಭಾರತ ತಂಡವು 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಸೋಲನ್ನು ಮರೆತಿಲ್ಲ. 2003ರ ವಿಶ್ವಕಪ್ ಫೈನಲ್‌ನಲ್ಲಿ ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡವು, ಆಸ್ಟ್ರೇಲಿಯಾ ವಿರುದ್ದ ಆಘಾತಕಾರಿ ಸೋಲು ಅನುಭವಿಸು ಮೂಲಕ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲುವ ಅವಕಾಶ ಕೈಚೆಲ್ಲಿತ್ತು.
ಅಹಮದಾಬಾದ್(ನ.19): ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಕಾದಾಡುತ್ತಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಆದರೆ ಈ ನಿರ್ಣಯವೇ ಆಸ್ಟ್ರೇಲಿಯಾ ಪಾಲಿಗೆ ಹಿನ್ನಡೆಯಾಗುವ ಸಾಧ್ಯತೆಯಿದ್ದು, ಒಂದು ವೇಳೆ ಇತಿಹಾಸ ಮರುಕಳಿಸಿದರೆ, ದಶಕದ ಬಳಿಕ ಭಾರತಕ್ಕೆ ಕಪ್ ಸಿಗುವುದರಲ್ಲಿ ಯಾವುದೇ ಅನುಮಾನ ಬೇಡ.
ಹೌದು. ಭಾರತ ತಂಡವು 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಸೋಲನ್ನು ಮರೆತಿಲ್ಲ. 2003ರ ವಿಶ್ವಕಪ್ ಫೈನಲ್‌ನಲ್ಲಿ ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡವು, ಆಸ್ಟ್ರೇಲಿಯಾ ವಿರುದ್ದ ಆಘಾತಕಾರಿ ಸೋಲು ಅನುಭವಿಸು ಮೂಲಕ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲುವ ಅವಕಾಶ ಕೈಚೆಲ್ಲಿತ್ತು. ಆಗ ಸೌರವ್ ಗಂಗೂಲಿ ಮಾಡಿದ ತಪ್ಪನೇ ಇದೀಗ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮಾಡಿದಂತೆ ಭಾಸವಾಗುತ್ತಿದೆ.
2003ರಲ್ಲಿ ದಕ್ಷಿಣ ಆಫ್ರಿಕಾದ ವಾಂಡರರ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕರಾಗಿದ್ದ ಸೌರವ್ ಗಂಗೂಲಿ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದರು. ಆದರೆ ಆ ನಿರ್ಧರ ಟೀಂ ಇಂಡಿಯಾ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾಗೆ ರಿಕಿ ಪಾಂಟಿಂಗ್ ಶತಕ ಹಾಗೂ ಆಡಂ ಗಿಲ್‌ಕ್ರಿಸ್ಟ್ ಮತ್ತು ಡೇಮಿಯನ್ ಮಾರ್ಟಿನ್ ಅರ್ಧಶತಕ ಸಿಡಿಸುವ ಮೂಲಕ ಆಸೀಸ್ ಕೇವಲ ಎರಡು ವಿಕೆಟ್ ಕಳೆದುಕೊಂಡು 359 ರನ್ ಕಲೆಹಾಕಿತ್ತು. ಆ ಬಳಿಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ 234 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಹೀನಾಯ ಸೋಲು ಅನುಭವಿಸಿತ್ತು.
ಇದೀಗ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದರ ಲಾಭವನ್ನು ಟೀಂ ಇಂಡಿಯಾ ಪಡೆದುಕೊಳ್ಳುತ್ತಾ ಕಾದು ನೋಡಬೇಕಿದೆ.
2003 ಹಾಗೂ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಹಲವು ಸಾಮ್ಯತೆ:
2003ರ ಏಕದಿನ ವಿಶ್ವಕಪ್ ಟೂರ್ನಿಗೂ ಹಾಗೂ 2023ರ ಏಕದಿನ ವಿಶ್ವಕಪ್ ಟೂರ್ನಿಗೂ ಸಾಕಷ್ಟು ಸಾಮ್ಯತೆಗಳಿವೆ. ಭಾರತ ಹಾಗೂ ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್‌ನಲ್ಲಿ ಬರೋಬ್ಬರಿ 20 ವರ್ಷಗಳ ಬಳಿಕ ಮುಖಾಮುಖಿಯಾಗುತ್ತಿವೆ. ಈ ಎರಡೂ ಫೈನಲ್‌ಗೆ ಕೆಲ ಸಾಮ್ಯತೆಗಳೂ ಇವೆ. 2003ರ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಸತತ 10 ಪಂದ್ಯ ಗೆದ್ದು ಫೈನಲ್‌ಗೇರಿತ್ತು. ಭಾರತ 8 ಪಂದ್ಯ ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸಿತ್ತು. ಈ ವಿಶ್ವಕಪ್‌ನಲ್ಲಿ ಭಾರತ ಸತತ 10 ಗೆಲುವುಗಳೊಂದಿಗೆ ಫೈನಲ್‌ಗೇರಿದೆ. ಆಸ್ಟ್ರೇಲಿಯಾ ಸತತ 8 ಜಯ ಸಾಧಿಸಿ ಟ್ರೋಫಿ ಕದನಕ್ಕೆ ಕಾಲಿಟ್ಟಿದೆ. ಇನ್ನೊಂದು ವಿಶೇಷವೇನೆಂದರೆ, 2003ರಲ್ಲಿ ಗೆದ್ದ ಟ್ರೋಫಿ ಆಸ್ಟ್ರೇಲಿಯಾ ಪಾಲಿಗೆ 3ನೇ ವಿಶ್ವಕಪ್ ಗೆಲುವು ಆಗಿತ್ತು. ಈ ಬಾರಿ ಭಾರತವೂ 3ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಫೈನಲ್‌ಗೆ ಉಭಯ ತಂಡಗಳ ಆಟಗಾರರ ಪಟ್ಟಿ
ಭಾರತ:
ರೋಹಿತ್ ಶರ್ಮಾ(ನಾಯಕ),ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ:
ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಶ್, ಪ್ಯಾಟ್ ಕಮಿನ್ಸ್(ನಾಯಕ), ಮಿಚೆಲ್ ಸ್ಟಾರ್ಕ್, ಆಡಂ ಜಂಪಾ, ಜೋಶ್ ಹೇಜಲ್‌ವುಡ್.
ಸ್ಥಳ: ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್
ಸಮಯ: ಭಾನುವಾರ ಮಧ್ಯಾಹ್ನ 2 ಗಂಟೆಯಿಂದ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಚಾನಲ್‌ಗಳು ಹಾಗೂ ಡಿಸ್ನಿ ಹಾಟ್‌ಸ್ಟಾರ್ ಆ್ಯಪ್