001011200 ಇದು ಇಂಟರ್‌ನ್ಯಾಶನಲ್ ಫೋನ್ ನಂಬರ್ ಅಲ್ಲ, ಭಾರತ ವಿರುದ್ಧ ಶ್ರೀಲಂಕಾದ ಆರಂಭಿಕ 8 ಬ್ಯಾಟ್ಸ್‌ಮನ್ ಸಿಡಿಸಿದ ಸ್ಕೋರ್. ವಿಶ್ವಕಪ್ ಲೀಗ್ ಪಂದ್ಯದಲ್ಲಿ ಭಾರತ ವಿರುದ್ಧ ಶ್ರೀಲಂಕಾ ಕೇವಲ 55 ರನ್‌ಗೆ ಆಲೌಟ್ ಆಗಿದೆ. ಭಾರತ  302 ರನ್ ಗೆಲುವಿನ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. 

ಮುಂಬೈ(ನ.02) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅತೀ ದೊಡ್ಡ ಗೆಲುವಿನ ದಾಖಲೆ ಮೂಲಕ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿಪಡಿಸಿದೆ. ಶ್ರೀಲಂಕಾ ವಿರುದ್ಧದ ಲೀಗ್ ಪಂದ್ಯದಲ್ಲಿ ಭಾರತ 302 ರನ್ ಗೆಲುವು ದಾಖಲಿಸಿದೆ. ಭಾರತ ನೀಡಿದ 358 ರನ್ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ ಕೇವಲ 55 ರನ್‌ಗೆ ಆಲೌಟ್ ಆಗಿದೆ. 7ರಲ್ಲೂ ಗೆಲುವು ದಾಖಲಿಸಿದ ಭಾರತ 14 ಅಂಕ ಸಂಪಾದಿಸಿ ಸೆಮಿಫೈನಲ್ ಟಿಕೆಟ್ ಖಚಿತಪಡಿಸಿದೆ.

ಭಾರತದ ಬೃಹತ್ ಮೊತ್ತಕ್ಕೆ ಉತ್ತರವಾಗಿ ಶ್ರೀಲಂಕಾ ಚೇಸಿಂಗ್ ಆರಂಭಿಸಿತ್ತು. ಈ ಪಂದ್ಯವನ್ನು 2011ರ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಹೋಲಿಕೆ ಮಾಡಲಾಗಿತ್ತು. ಆದರೆ ಈ ಪಂದ್ಯ 2023ರ ಏಷ್ಯಾಕಪ್ ಫೈನಲ್ ಪಂದ್ಯಕ್ಕಿಂತ ಹೊರತಾಗಿರಲಿಲ್ಲ. ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ 50 ರನ್‌ಗೆ ಆಲೌಟ್ ಆಗಿದ್ದರೆ, ಇದೀಗ 55 ರನ್‌ಗೆ ಆಲೌಟ್ ಆಗಿದೆ. ಮೂಲಕ ಶ್ರೀಲಂಕಾ ಹೀನಾಯ ಸೋಲು ಕಂಡಿದೆ. ಏಕದಿನದಲ್ಲಿ 4ನೇ ಅತೀ ದೊಡ್ಡ ಅಂತರದ ಗೆಲುವು ದಾಖಲಿಸಿದ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. 

ಮೊದಲ ಓವರ್‌ನ ಮೊದಲ ಎಸೆತದಿಂದಲೇ ಭಾರತ ಮಾರಕ ದಾಳಿ ಆರಂಭಗೊಂಡಿತ್ತು. ಅತ್ತ ಶ್ರೀಲಂಕಾ ಕ್ರೀಸ್‌ನಲ್ಲಿ ಇಟ್ಟಿದ್ದು ಒಂದೇ ಹೆಜ್ಜೆ. ಇನ್ನುಳಿದ ಹೆಜ್ಜೆ ಮತ್ತೆ ಪೆವಿಲಿಯನ್‌ನತ್ತ ಇಡಬೇಕಾಯಿತು. ಕಾರಣ ಜಸ್ಪ್ರೀತ್ ಬುಮ್ರಾ ಮೊದಲ ಓವರ್‌ನಲ್ಲೇ ಪಥುಮ್ ನಿಸ್ಸಾಂಕ ವಿಕೆಟ್ ಕಬಳಿಸಿದರು. ಇದರ ಬೆನ್ನಲ್ಲೇ ಮೊಹ್ಮದ್ ಸಿರಾಜ್ ದಾಳಿಗೆ ಶ್ರೀಲಂಕಾ ತತ್ತರಿಸಿತು. ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್ ಹಾಗೂ ಸದೀರಾ ಸಮರವಿಕ್ರಮ ವಿಕೆಟ್ ಪತನಗೊಂಡಿತು. 3 ರನ್‌ಗೆ ಶ್ರೀಲಂಕಾದ 4 ವಿಕೆಟ್ ಕಳೆದುಕೊಂಡಿತ್ತು.

ಬುಮ್ರಾ, ಸಿರಾಜ್ ಬಳಿಕ ಮೊಹಮ್ಮದ್ ಶಮಿ ಮಿಂಚಿನ ದಾಳಿ ಮತ್ತೆ ಶ್ರೀಲಂಕಾ ತಂಡವನ್ನು ಯಾವುದೇ ಹಂತದಲ್ಲಿ ಚೇತರಿಸಿಕೊಳ್ಳಲು ಬಿಡಲಿಲ್ಲ. ಚಾರಿತ್ ಅಸಲಂಕಾ ಹಾಗೂ ದಶನ್ ಹೇಮಂತಾ ಕೂಡ ವಿಕೆಟ್ ಕೈಚೆಲ್ಲಿದರು. ದುಷ್ಮಂತ್ ಚಮೀರಾ ಶೂನ್ಯಕ್ಕೆ ವಿಕೆಟ್ ಕೈಚೆಲ್ಲಿದರು. ಇತ್ತ ಕಸೂನ್ ರಾಜೀತಾ ಹಾಗೂ ಮಹೀಶಾ ತೀಕ್ಷಾನ ಜೊತೆಯಾಟದಿಂದ ಶ್ರೀಲಂಕಾ ವಿಶ್ವಕಪ್ ಟೂರ್ನಿಯ ಅತೀ ಕಡಿಮೆ ಮೊತ್ತದ ಮುಖಭಂದಿಂದ ಪಾರಾಯಿತು. ಕಸೂನ್ ರಾಜೀತ 14 ರನ್ ಸಿಡಿಸಿ ಔಟಾದರು. ಇತ್ತ ದಿಲ್ಶಾನ್ ಮಧುಶಂಕ 5 ರನ್ ಸಿಡಿಸಿ ನಿರ್ಗಮಿಸಿದರು. ತೀಕ್ಷಾನ ಅಜೇಯ 12 ರನ್ ಸಿಡಿಸಿದರು. ಶ್ರೀಲಂಕಾ 19.4 ಓವರ್‌ಗಳಲ್ಲಿ 55 ರನ್‌ಗೆ ಆಲೌಟ್ ಆಯಿತು.ಮೊಹಮ್ಮದ್ ಶಮಿ 5 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಸಿರಾಜ್ 3, ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್ ಕಬಳಿಸಿದರು.