ICC World Cup 2023 ಆರಂಭಿಕರ ಭರ್ಜರಿ ಬ್ಯಾಟಿಂಗ್, ಟೀಂ ಇಂಡಿಯಾಗೆ ಸ್ಪರ್ಧಾತ್ಮಕ ಗುರಿ ನೀಡಿದ ಬಾಂಗ್ಲಾದೇಶ..!
ಶತಕದ ಜತೆಯಾಟದತ್ತ ದಾಪುಗಾಲಿಡುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ಯಶಸ್ವಿಯಾದರು. ಇನ್ನು ಇದರ ಬೆನ್ನಲ್ಲೇ ನಾಯಕ ನಜ್ಮುಲ್ ಹೊಸೈನ್ ಶಾಂಟೋ(8) ಹಾಗೂ ಮೆಹದಿ ಹಸನ್ ಮಿರಾಜ್(3) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.
ಪುಣೆ(ಅ.19): ಆರಂಭಿಕ ಬ್ಯಾಟರ್ ಲಿಟನ್ ದಾಸ್ ಹಾಗೂ ತಾನ್ಜಿದ್ ಹಸನ್ ಆಕರ್ಷಕ ಅರ್ಧಶತಕ ಹಾಗೂ ಬ್ಯಾಟರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಬಾಂಗ್ಲಾದೇಶ ತಂಡವು ನಿಗದಿತ 56 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 250 ರನ್ ಬಾರಿಸಿದ್ದು, ಟೀಂ ಇಂಡಿಯಾಗೆ ಸ್ಪರ್ಧಾತ್ಮಕ ಗುರಿ ನೀಡಿದೆ.
ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂಟೋ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ವಿಕೆಟ್‌ಗೆ ತಾನ್ಜಿದ್ ಹಸನ್ ಹಾಗೂ ಲಿಟನ್ ದಾಸ್ ಜೋಡಿ 93 ರನ್‌ಗಳ ಜತೆಯಾಟವಾಡುವ ಮೂಲಕ ಬಾಂಗ್ಲಾದೇಶ ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ತಾನ್ಜಿದ್ ಹಸನ್ ಕೇವಲ 43 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 51 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಶತಕದ ಜತೆಯಾಟದತ್ತ ದಾಪುಗಾಲಿಡುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ಯಶಸ್ವಿಯಾದರು. ಇನ್ನು ಇದರ ಬೆನ್ನಲ್ಲೇ ನಾಯಕ ನಜ್ಮುಲ್ ಹೊಸೈನ್ ಶಾಂಟೋ(8) ಹಾಗೂ ಮೆಹದಿ ಹಸನ್ ಮಿರಾಜ್(3) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಲಿಟನ್ ದಾಸ್ 82 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ ಆಕರ್ಷಕ 66 ರನ್ ಬಾರಿಸಿ ರವೀಂದ್ರ ಜಡೇಜಾಗೆ ಎರಡನೇ ಬಲಿಯಾದರು.
ಇನ್ನು ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ತೌಹಿದ್ ಹೃದಯ್(16), ಮುಷ್ಫಿಕುರ್ ರಹೀಂ(38), ಮೊಹಮದುಲ್ಲಾ(46) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಹಾರ್ದಿಕ್ ಪಾಂಡ್ಯಗೆ ಗಾಯ, ಓವರ್ ಕಂಪ್ಲೀಟ್ ಮಾಡಿದ ಕೊಹ್ಲಿ: ಇನಿಂಗ್ಸ್‌ನ 9ನೇ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತ ಹಾರ್ದಿಕ್ ಪಾಂಡ್ಯ, ಮೂರನೇ ಎಸೆತದ ವೇಳೆ ಪಾದ ಟ್ವಿಸ್ಟ್ ಆದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮೈದಾನ ತೊರೆದರು. ಹೀಗಾಗಿ ಪಾಂಡ್ಯ ಅನುಪಸ್ಥಿತಿಯಲ್ಲಿ ಬರೋಬ್ಬರಿ 8 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದರು. ವಿರಾಟ್ ಕೊಹ್ಲಿ, 2015ರ ಏಕದಿನ ವಿಶ್ವಕಪ್ ಸೆಮೀಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಸಿಡ್ನಿ ಮೈದಾನದಲ್ಲಿ ಕೊನೆಯ ಬಾರಿಗೆ ಬೌಲಿಂಗ್ ಮಾಡಿದ್ದರು.
ಬುಮ್ರಾಗೆ ರೆಸ್ಟ್ ಕೊಡಿ, ಬಾಂಗ್ಲಾ ಎದುರು ಈತನಿಗೆ ಮಣೆ ಹಾಕಿ ಎಂದ ಸುನಿಲ್ ಗವಾಸ್ಕರ್..!
ಟೀಂ ಇಂಡಿಯಾ ಪರ ಸಂಘಟಿತ ಬೌಲಿಂಗ್ ಪ್ರದರ್ಶನ ತೋರಿದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು