* ಬಾಂಗ್ಲಾದೇಶ ಎದುರು ಸಾಧಾರಣ ಮೊತ್ತ ಕಲೆಹಾಕಿದ ಟೀಂ ಇಂಡಿಯಾ* ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಮಿಥಾಲಿ ರಾಜ್ ಮತ್ತೊಮ್ಮೆ ಫೇಲ್* ಭಾರತ ಎದುರು ಗೆಲ್ಲಲು ಬಾಂಗ್ಲಾದೇಶಕ್ಕೆ 230 ರನ್‌ಗಳ ಸ್ಪರ್ಧಾತ್ಮಕ ಗುರಿ
ಹ್ಯಾಮಿಲ್ಟನ್(ಮಾ.22): ಯಾಶ್ತಿಕಾ ಭಾಟಿಯಾ (Yastika Bhatia) ಬಾರಿಸಿದ ಸಮಯೋಚಿತ ಅರ್ಧಶತಕದ ಹೊರತಾಗಿಯೂ ಬಾಂಗ್ಲಾದೇಶ ಬೌಲರ್‌ಗಳ ಶಿಸ್ತುಬದ್ದ ದಾಳಿಯ ಎದುರು ಭಾರತ ತಂಡವು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 229 ರನ್ ಬಾರಿಸಿದ್ದು, ನೆರೆಯ ಬಾಂಗ್ಲಾದೇಶ ತಂಡಕ್ಕೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗೆಲ್ಲಲು ಸ್ಪರ್ಧಾತ್ಮಕ ಗುರಿ ನೀಡಿದೆ.
ಇಲ್ಲಿನ ಸೆಡನ್ ಪಾರ್ಕ್ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ಎಚ್ಚರಿಕೆಯ ಆರಂಭವನ್ನೇ ಪಡೆಯಿತು. ಕಳೆದೆರಡು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಸೆಮೀಸ್ ಹಾದಿಯನ್ನು ದುರ್ಗಮಗೊಳಿಸಿಕೊಂಡಿರುವ ಭಾರತ ತಂಡಕ್ಕೆ ಬಾಂಗ್ಲಾದೇಶ ಎದುರು ಭಾರೀ ಅಂತರದ ಗೆಲುವು ಸಾಧಿಸಿ ಸೆಮೀಸ್‌ಗೇರುವ ಕನವರಿಕೆಯಲ್ಲಿದೆ. ಹೀಗಾಗಿ ಭಾರತ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್‌ಗೆ 74 ರನ್‌ಗಳ ಜತೆಯಾಟವಾಡಿದರು.
5 ಎಸೆತಗಳ ಅಂತರದಲ್ಲಿ 3 ವಿಕೆಟ್ ಪತನ: ಹೌದು, ಭಾರತ ತಂಡವು ಉತ್ತಮ ಆರಂಭವನ್ನು ಪಡೆಯಿತಾದರೂ, ಸ್ಮೃತಿ ಮಂಧನಾ ವಿಕೆಟ್ ಪತನವಾಗುತ್ತಿದ್ದಂತೆಯೇ ಕೇವಲ 5 ಎಸೆತಗಳಲ್ಲಿ ಒಂದೂ ರನ್ ಕಲೆಹಾಕದೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಂಧನಾ 30 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಚುರುಕಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಶಫಾಲಿ ವರ್ಮಾ 42 ಎಸೆತಗಳಲ್ಲಿ 42 ರನ್ ಬಾರಿಸಿ ಸ್ಟಂಪೌಟ್ ಆಗಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ನಾಯಕಿ ಮಿಥಾಲಿ ರಾಜ್ ಶೂನ್ಯ ಸುತ್ತಿ ರಿತು ಮೋನಿಗೆ ವಿಕೆಟ್ ಒಪ್ಪಿಸಿದರು.
ಆಕರ್ಷಕ ಅರ್ಧಶತಕ ಬಾರಿಸಿದ ಯಾಶ್ತಿಕಾ: ಕಳೆದ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಚಚ್ಚಿದ್ದ ಯಾಶ್ತಿಕಾ ಭಾಟಿಯಾ ಮತ್ತೊಮ್ಮೆ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. 74 ರನ್‌ಗಳಿಗೆ ದಿಢೀರ್ ಎನ್ನುವಂತೆ ಮೂರು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಭಾರತ ತಂಡಕ್ಕೆ 4ನೇ ವಿಕೆಟ್‌ಗೆ ಹರ್ಮನ್‌ಪ್ರೀತ್ ಕೌರ್ ಹಾಗೂ ಯಾಶ್ತಿಕಾ ಭಾಟಿಯಾ ಜೋಡಿ 44 ರನ್‌ಗಳ ಜತೆಯಾಟವಾಡುವ ಮೂಲಕ ಆಸರೆಯಾದರು. ಅದರಲ್ಲೂ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಯಾಶ್ತಿಕಾ ಭಾಟಿಯಾ 80 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 50 ರನ್ ಬಾರಿಸಿ ರಿತು ಮೋನಿಗೆ ಮೂರನೇ ಬಲಿಯಾದರು.
ICC Women's World Cup: ಬಾಂಗ್ಲಾದೇಶ ಎದುರು ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಅಯ್ಕೆ
ಇನ್ನು ಕೊನೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ 36 ಎಸೆತಗಳನ್ನು ಎದುರಿಸಿ 26 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಆಲ್ರೌಂಡರ್ ಸ್ನೆಹ್ ರಾಣಾ 27 ರನ್ ಸಿಡಿಸಿದರು. ಮತ್ತೋರ್ವ ಆಲ್ರೌಂಡರ್ ಪೂಜಾ ವಸ್ತ್ರಾಕರ್ ಅಜೇಯ 30 ರನ್ ಬಾರಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.
ಸದ್ಯ ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ತಂಡವು, ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ 5 ಪಂದ್ಯಗಳ ಪೈಕಿ ಎರಡು ಗೆಲುವು ಹಾಗೂ ಮೂರು ಸೋಲುಗಳೊಂದಿಗೆ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಬಾಂಗ್ಲಾದೇಶ ತಂಡವು 4 ಪಂದ್ಯಗಳನ್ನಾಡಿ ಒಂದು ಗೆಲುವು ಹಾಗೂ ಮೂರು ಸೋಲುಗಳೊಂದಿಗೆ 2 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ. ಬಾಂಗ್ಲಾದೇಶ ಎದುರಿನ ಪಂದ್ಯವು ಭಾರತೀಯ ತಂಡದ ಪಾಲಿಗೆ ಸೆಮೀಸ್ ಪ್ರವೇಶಿಸುವ ದೃಷ್ಟಿಯಿಂದ ಸಾಕಷ್ಟು ಮಹತ್ವದ್ದೆನಿಸಿದೆ. ಕಳೆದೆರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಮಿಥಾಲಿ ರಾಜ್ ಪಡೆ, ಇಂದು ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ.
