Asianet Suvarna News Asianet Suvarna News

ICC Women's World Cup: ಮಿಥಾಲಿ, ಯಾಶ್ತಿಕಾ, ಕೌರ್ ಫಿಫ್ಟಿ, ಆಸೀಸ್‌ಗೆ ಸವಾಲಿನ ಗುರಿ ನೀಡಿದ ಭಾರತ

* ಮಹಿಳಾ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಎದುರು ದಿಟ್ಟ ಬ್ಯಾಟಿಂಗ್ ನಡೆಸಿದ ಭಾರತ

* ಹರ್ಮನ್‌ಪ್ರೀತ್ ಕೌರ್, ಮಿಥಾಲಿ ರಾಜ್, ಯಾಶ್ತಿಕಾ ಭಾಟಿಯಾ ಆಕರ್ಷಕ ಅರ್ಧಶತಕ

* ಆಸ್ಟ್ರೇಲಿಯಾಗೆ ಗೆಲ್ಲಲು 278 ರನ್‌ಗಳ ಸವಾಲಿನ ಗುರಿ ನೀಡಿದ ಭಾರತ

ICC Womens World Cup Mithali Raj Yastika Bhatia Harmanpreet Kaur fifty powers India set 278 runs target to Australia kvn
Author
Bengaluru, First Published Mar 19, 2022, 9:54 AM IST

ಆಕ್ಲೆಂಡ್‌(ಮಾ.19): ಆರಂಭಿಕ ಆಘಾತದ ಹೊರತಾಗಿಯೂ, ನಾಯಕಿ ಮಿಥಾಲಿ ರಾಜ್(68), ಯಾಶ್ತಿಕಾ ಭಾಟಿಯಾ (59) ಹಾಗೂ ಹರ್ಮನ್‌ಪ್ರೀತ್ ಕೌರ್ (57*) ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಐಸಿಸಿ ಮಹಿಳಾ ವಿಶ್ವಕಪ್ (ICC Women's World Cup) ಟೂರ್ನಿಯಲ್ಲಿ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 275 ರನ್ ಬಾರಿಸಿದೆ. ಈ ಮೂಲಕ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಸವಾಲಿನ ಗುರಿ ನೀಡಿದೆ. 

ಇಲ್ಲಿನ ಈಡನ್ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕಿ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡರು. ಆರಂಭದಲ್ಲಿ ಮೆಗ್‌ ಲ್ಯಾನಿಂಗ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳು ಯಶಸ್ವಿಯಾದರು. ಇದರ ಪರಿಣಾಮ ಫಾರ್ಮ್‌ನಲ್ಲಿದ್ದ ಸ್ಮೃತಿ ಮಂಧನಾ 10 ರನ್ ಬಾರಿಸಿ ಡಾರ್ಸಿ ಬ್ರೌನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ದೀಪ್ತಿ ಶರ್ಮಾ ಬದಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಶಫಾಲಿ ವರ್ಮಾ (Shafali Verma) ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ. ಶಫಾಲಿ ವರ್ಮಾ 16 ಎಸೆತಗಳನ್ನು ಎದುರಿಸಿ ಒಂದು ಸಿಕ್ಸರ್‌ ಸಹಿತ 12 ರನ್ ಬಾರಿಸಿ ಡಾರ್ಸಿ ಬ್ರೌನ್‌ಗೆ ಎರಡನೇ ಬಲಿಯಾದರು.

ಮಿಥಾಲಿ-ಯಾಶ್ತಿಕಾ ಜುಗಲ್ಬಂದಿ: ಕೇವಲ 28 ರನ್‌ಗಳಿಗೆ ಆರಂಭಿಕ ಇಬ್ಬರು ಬ್ಯಾಟರ್‌ಗಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿದ್ದ ಭಾರತ ತಂಡಕ್ಕೆ ನಾಯಕಿ ಮಿಥಾಲಿ ರಾಜ್(Mithali Raj) ಹಾಗೂ ಯಾಶ್ತಿಕಾ ಭಾಟಿಯಾ (Yastika Bhatia) ಮೂರನೇ ವಿಕೆಟ್‌ಗೆ 130 ರನ್‌ಗಳ ಸಮಯೋಚಿತ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ವೃತ್ತಿಜೀವನದ ಎರಡನೇ ಅರ್ಧಶತಕ ಚಚ್ಚಿದ ಯಾಶ್ತಿಕಾ ಭಾಟಿಯಾ, ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬಿದರು. ಯಾಶ್ತಿಕಾ ಭಾಟಿಯಾ 83 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 59 ರನ್‌ ಬಾರಿಸಿ ಡಾರ್ಸಿ ಬ್ರೌನ್‌ಗೆ ವಿಕೆಟ್ ಒಪ್ಪಿಸಿದರು.

ಇನ್ನು ಕಳೆದ ಕೆಲ ಪಂದ್ಯಗಳಲ್ಲಿ ರನ್‌ ಬರ ಅನುಭವಿಸುತ್ತಿದ್ದ ನಾಯಕಿ ಮಿಥಾಲಿ ರಾಜ್, ಮಹತ್ವದ ಪಂದ್ಯದಲ್ಲಿ ಸಮಯೋಚಿತ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಮಿಥಾಲಿ 96 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 68 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. 

ಸ್ಪೋಟಕ ಅರ್ಧಶತಕ ಬಾರಿಸಿದ ಹರ್ಮನ್‌ಪ್ರೀತ್ ಕೌರ್: ಪ್ರಸ್ತುತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಮತ್ತೊಮ್ಮೆ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಟೂರ್ನಿಯಲ್ಲಿ 3ನೇ ಅರ್ಧಶತಕ ಸಿಡಿಸಿದರು. 42 ಎಸೆತಗಳನ್ನು ಎದುರಿಸಿ ಹರ್ಮನ್‌ಪ್ರೀತ್ ಆಕರ್ಷಕ ಅರ್ಧಶತಕ ಬಾರಿಸಿದರು. ಹರ್ಮನ್‌ಪ್ರೀತ್ ಕೌರ್ ಒಟ್ಟು 47 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ ಅಜೇಯ 57 ರನ್ ಬಾರಿಸಿದರು. 

ಇನ್ನು ಮಿಥಾಲಿ ರಾಜ್ ವಿಕೆಟ್ ಪತನವಾಗುತ್ತಿದ್ದಂತೆಯೇ ಭಾರತ ದಿಢೀರ್ ಕುಸಿತ ಕಂಡಿತು. ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್(8) ಹಾಗೂ ಆಲ್ರೌಂಡರ್ ಸ್ನೆಹ್ ರಾಣಾ(0) ಪೆವಿಲಿಯನ್‌ ಪೆರೇಡ್ ನಡೆಸಿದರು. ಇದಾದ ಬಳಿಕ ಕ್ರೀಸ್‌ಗಿಳಿದ ಮತ್ತೋರ್ವ ಆಲ್ರೌಂಡರ್ ಪೂಜಾ ವಸ್ತ್ರಾಕರ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಪೂಜಾ ಒಟ್ಟು 28 ಎಸೆತಗಳನ್ನು ಎದುರಿಸಿ 2  ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ ಆಕರ್ಷಕ 34 ರನ್ ಬಾರಿಸಿ ಕೊನೆಯ ಎಸೆತದಲ್ಲಿ ರನೌಟ್ ಆದರು.

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ಯಾವ ತಂಡವು 278 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ತಲುಪಿಲ್ಲ. ಆದರೆ ಪ್ರಸ್ತುತ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಸತತ 4 ಗೆಲುವು ಸಾಧಿಸುವ ಮೂಲಕ ಈಗಾಗಲೇ ಸೆಮಿಫೈನಲ್ ಹಾದಿಯನ್ನು ಖಚಿತಪಡಿಸಿಕೊಂಡಿರುವ ಆಸ್ಟ್ರೇಲಿಯಾ ತಂಡವು, ಭಾರತದ ಎದುರು ಜಯ ಸಾಧಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios